Advertisement

ಜನರ ನಿರೀಕ್ಷೆಗೆ ತಕ್ಕ ಆಡಳಿತ: ಕುಮಾರ್‌

05:10 PM May 28, 2018 | Team Udayavani |

ಸೊರಬ: ಕಳೆದ ಐದು ವರ್ಷಗಳ ದುರಾಡಳಿತ ಹಾಗೂ ಭ್ರಷ್ಟಾಚಾರವನ್ನು ವಿರೋಧಿಸಿ ತಾಲೂಕಿನ ಜನತೆ ಈ ಬಾರಿ ಬಿಜೆಪಿ ಗೆಲ್ಲಿಸುವ ಮೂಲಕ ಬದಲಾವಣೆ ಮಾಡಿದ್ದಾರೆ. ಜನರ ನಿರೀಕ್ಷೆ ಹುಸಿಯಾಗದಂತೆ ಆಡಳಿತ ನಡೆಸುತ್ತೇನೆ ಎಂದು ಶಾಸಕ ಎಸ್‌. ಕುಮಾರ್‌ ಬಂಗಾರಪ್ಪ ಭರವಸೆ ನೀಡಿದರು.

Advertisement

ಪಟ್ಟಣದ ಪಕ್ಷದ ಕಾರ್ಯಾಲಯದಲ್ಲಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ಅಭಿನಂದನೆ ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಈ ಹಿಂದೆ ತಾಲೂಕು ಕಚೇರಿ ಆವರಣದಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿ ಮೀರಿತ್ತು. ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಮಧ್ಯವರ್ತಿಗಳೆಲ್ಲಾ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇನ್ನು ಮುಂದೆ ರೈತರ ಕೆಲಸ ಸುಗಮವಾಗಿ ನಡೆಯಲು ಅವಕಾಶ ಮಾಡಿಕೊಡಲಾಗುವುದು. ಯಾವ ಮಧ್ಯವರ್ತಿಗಳೂ ಇಲ್ಲದೇ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳನ್ನು ಅಧಿಕಾರಿಗಳ ಮೂಲಕ ಮಾಡಿಕೊಳ್ಳುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಸ್ಮಶಾನ ಭೂಮಿ, ಕೆರೆ, ಅರಣ್ಯ ಇಲಾಖೆಯ ಒಪ್ಪಿಗೆ ಪಡೆಯದೇ ಬಗರ್‌ಹುಕುಂ ಮಂಜೂರಾತಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು ಬಡ ರೈತರನ್ನು ಕಡೆಗಣಿಸಿ ಸ್ಥಿತಿವಂತರಿಗೆ ಜಮೀನು ಮಂಜೂರಾತಿ ಮಾಡಲಾಗಿದೆ ಎಂಬ ಸಾಕಷ್ಟು ಆರೋಪವಿದೆ. ಅಂತಹವುಗಳನ್ನು ಕೂಲಂಕಶವಾಗಿ ಪರಿಶೀಲಿಸಿ ತಪ್ಪುಗಳು ಕಂಡುಬಂದಲ್ಲಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಭ್ರಷ್ಟಾಚಾರ ಕೊನೆಗಾಣಿಸುವ ನಿಟ್ಟಿನಲ್ಲಿ ಸ್ವತ್ಛ, ಪಾರದರ್ಶಕ ಆಡಳಿತಕ್ಕಾಗಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಚಿಂತಿಸಲಾಗಿದೆ. ಸದ್ಯದಲ್ಲೇ ಅಧಿಕಾರಿಗಳ ಸಭೆ ಕರೆದು ಈ ಕುರಿತು ಚರ್ಚಿಸಲಾಗುವುದು. ಪಟ್ಟಣದ ಆಂಜನೇಯ ದೇವಸ್ಥಾನದಿಂದ ರಂಗನಾಥ ಸ್ವಾಮಿ ದೇವಸ್ಥಾನದವರೆಗೂ ಅರ್ಧಕ್ಕೆ ನಿಂತಿರುವ ಮುಖ್ಯರಸ್ತೆ ಅಗಲೀಕರಣ ಕಾಮಗಾರಿ ಕುರಿತು ಅಲ್ಲಿನ ನಿವಾಸಿಗಳ ಸಭೆ ನಡೆಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಒಂದು ವಾರದೊಳಗಾಗಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

Advertisement

ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಬಂದಿದ್ದರೂ ಕೂಡ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಪವಿತ್ರ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚಿಸಿರುವುದು ಖಂಡನೀಯ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಚುನಾವಣಾ ಪೂರ್ವದಲ್ಲಿ ತಾವು ಮುಖ್ಯಮಂತ್ರಿಯಾದ 24 ತಾಸುಗಳಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆಂದು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದರು. ಆದರೆ ಮುಖ್ಯಮಂತ್ರಿಯಾದ ಮೇಲೆ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಹಾಗಾಗಿ ಸಾಲ ಮನ್ನಾ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿರುವುದು ಈಗಾಗಲೇ ಸಂಕಷ್ಟದಲ್ಲಿರುವ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದಂತಾಗಿದೆ. ಇದನ್ನು ಖಂಡಿಸಿ ಮೇ 28 ಸೋಮವಾರ ವಿವಿಧ ಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್‌ಗೆ ಪಕ್ಷದ ವತಿಯಿಂದ ಬೆಂಬಲ ಸೂಚಿಸಲಾಗುವುದು ಎಂದರು.

ತಾಲೂಕಿನ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಹೆಚ್ಚಿನ ಅನುದಾನ ತರುವ ಉದ್ದೇಶವಿದ್ದು ರಾಜ್ಯ ಸರ್ಕಾರ ಹಣ ಕೊಟ್ಟರೂ ಸರಿ ಕೊಡದಿದ್ದರೂ ಸರಿ. ಹೇಗಾದರೂ ಮಾಡಿ ಯಾವುದೇ ರೂಪದಲ್ಲಾದರೂ ಅನುದಾನ ತಂದು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿದ್ದು ಅಭ್ಯರ್ಥಿಗಳಾಗಿ ಪದವೀಧರರ ಕ್ಷೇತ್ರದಿಂದ ಆಯನೂರು ಮಂಜುನಾಥ್‌, ಶಿಕ್ಷಕರ ಕ್ಷೇತ್ರದಿಂದ ಕ್ಯಾ| ಗಣೇಶ್‌ ಕಾರ್ಣಿಕ್‌ ಅವರನ್ನು ಪಕ್ಷ ಕಣಕ್ಕಿಳಿಸಿದೆ. ಅವರ ಗೆಲುವಿಗೆ ಕಾರ್ಯಕರ್ತರು ಹಾಗೂ ಮುಖಂಡರು ಸನ್ನದ್ಧರಾಗಿದ್ದು ತಾಲೂಕಿನಿಂದ ಅತೀ ಹೆಚ್ಚು ಮತಗಳನ್ನು ಅಭ್ಯರ್ಥಿಗಳಿಗೆ ಕೊಡಿಸುವಲ್ಲಿ ಶ್ರಮಿಸಲಾಗುವುದು. ಜೂ. 4 ರಂದು ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕಾಗಿ ತಾಲೂಕಿಗೆ ಆಗಮಿಸಲಿದ್ದಾರೆ ಎಂದರು.

 ತಾಲೂಕು ಬಿಜೆಪಿ ಅಧ್ಯಕ್ಷ ಎ.ಎಲ್‌. ಅರವಿಂದ್‌, ರಾಷ್ಟ್ರೀಯ ಪರಿಷತ್‌ ಸದಸ್ಯ ಪಾಣಿ ರಾಜಪ್ಪ, ಜಿಪಂ ಸದಸ್ಯರಾದ ಸತೀಶ್‌, ರಾಜಶೇಖರ್‌ ಗಾಳಿಪುರ, ತಾಪಂ ಸದಸ್ಯ ಚಿಕ್ಕಸವಿ ನಾಗರಾಜ್‌, ಪಪಂ ಸದಸ್ಯ ಎಂ.ಡಿ. ಉಮೇಶ್‌, ಪ್ರಮುಖರಾದ ಎಚ್‌.ಎಸ್‌. ಮಂಜಪ್ಪ, ಶ್ರೀಪಾದ ಹೆಗಡೆ ನಿಸರಾಣಿ, ದಿವಾಕರ ಭಾವೆ, ಟಿ.ಆರ್‌. ಸುರೇಶ್‌, ಶಬ್ಬೀರ್‌ ಅಹ್ಮದ್‌ ಕಿಲ್ಲೇದಾರ್‌, ಟಿ. ಸಮೀಉಲ್ಲಾ, ಗಜಾನನರಾವ್‌, ಗೀತಾ ಮಲ್ಲಿಕಾರ್ಜುನ್‌, ಡಿ. ಶಿವಯೋಗಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next