ಸಿಂಧನೂರು : ಕೋವಿಡ್ ಮೊದಲ ಅಲೆಯ ಸಂದರ್ಭ ಕೊರೊನಾ ಪಾಸಿಟಿವ್ ವ್ಯಕ್ತಿ ಸೇರಿದಂತೆ ಪ್ರಾಥಮಿಕ ಸಂಪರ್ಕಿತರ ಬೆನ್ನು ಬಿದ್ದು ಪತ್ತೆ ಹಚ್ಚಿ ಚಿಕಿತ್ಸೆಗೆ ಸಹಕರಿಸುತ್ತಿದ್ದ ಆಡಳಿತ ವರ್ಗ ಈ ಬಾರಿ ಕೊರೊನಾ ಸೋಂಕಿತರನ್ನು ತಿರುಗಿ ಕೂಡ ನೋಡುತ್ತಿಲ್ಲ! ತಾಲೂಕಿನಲ್ಲಿ 400ಕ್ಕೂ ಹೆಚ್ಚು ಕೊರೊನಾ ಸೋಂಕಿತರಿದ್ದರೂ ಅವರೆಲ್ಲರಿಗೂ ಮನೆಯಲ್ಲೇ ಇರಿ ಎಂಬ ಸಲಹೆ ನೀಡಿದ್ದನ್ನು ಬಿಟ್ಟರೆ, ಅವರ ಚಲನವಲನದ ಮೇಲೆ ಯಾವುದೇ ನಿಗಾ ವಹಿಸುತ್ತಿಲ್ಲವೆಂಬ ದೂರು ಕೇಳಿ ಬಂದಿವೆ.
ಸ್ವಾಬ್ ಟೆಸ್ಟ್‌ಗೆ ನೀಡಿದ ನಂತರ ವರದಿ ಪಾಸಿಟಿವ್ ಬಂದ ಮೇಲಷ್ಟೇ ಸೋಂಕಿತರನ್ನು ಫೋನ್ ನಲ್ಲೇ ಸಂಪರ್ಕಿಸಿ, ಮನೆಯಲ್ಲೇ ಇರುವಂತೆ ತಿಳಿಸಲಾಗುತ್ತದೆ. ಜತೆಗೆ ಆರೋಗ್ಯ ವಿಚಾರಿಸಿ ಆನ್‌ಲೈನ್‌ನಲ್ಲಿ ವಿವರ ದಾಖಲಿಸಲಾಗುತ್ತಿದೆ.
ವಿವರಕ್ಕಾಗಿ ಕರೆ-ಕರೆ: ಕೊರೊನಾ ಪಾಸಿಟಿವ್ ಬಂದ ಬಳಿಕ ರೋಗಿಗಳು ಮನೆಯಲ್ಲೇ ಇದ್ದರೂ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಯಾವುದೇ ಸಲಹೆ ನೀಡುತ್ತಿಲ್ಲ. ಯಾವ ಔಷಧಗಳನ್ನು ತೆಗೆದುಕೊಳ್ಳಬೇಕು, ಏನೇನು ಕ್ರಮ ಅನುಸರಿಸಬೇಕೆಂಬ ಬಗ್ಗೆ ತಿಳಿಸುವ ಕೆಲಸವಾಗುತ್ತಿಲ್ಲ. ಸ್ವಾಬ್ ಟೆಸ್ಟ್‌ಗೆ ಕೊಟ್ಟ ಸಂದರ್ಭದಲ್ಲಿ ನೀಡಿದ ಮೊಬೈಲ್ ಸಂಖ್ಯೆ ಜಾಡು ಹಿಡಿದು ತಾಲೂಕು, ಜಿಲ್ಲಾ, ರಾಜ್ಯಮಟ್ಟದ ಕಚೇರಿಯ ಸಿಬ್ಬಂದಿ ಮಾತ್ರ ಬೆನ್ನು ಬಿಡದೇ ಕರೆ ಮಾಡುತ್ತಿದ್ದಾರೆ.
ಎಲ್ಲ ಕಡೆಯಿಂದಲೂ ಪ್ರತ್ಯೇಕವಾಗಿ ಕರೆ ಮಾಡಿ, ನಿಮ್ಮ ಊರು ಯಾವುದು? ಹೆಸರು, ವಿಳಾಸ ಏನು? ಎಂದು ಪ್ರಶ್ನಿಸಲಾಗುತ್ತಿದೆ. ಮನೆಯಲ್ಲೇ ಇರುವ ಕೊರೊನಾ ಸೋಂಕಿತರೊಬ್ಬರಿಗೆ ಬುಧವಾರ ಬರೋಬ್ಬರಿ 60 ಕರೆಗಳು ಬಂದಿವೆ. ಸೋಂಕಿತರು ಆರೋಗ್ಯ ಕಾಳಜಿಗೆ ಸಂಬಂ ಧಿಸಿ ಒಂದೇ ಒಂದು ಸಲಹೆಯನ್ನೂ ಕೊಟ್ಟಿಲ್ಲ. ಸುತ್ತಾಟದ ಶಂಕೆ: ಆರೋಗ್ಯ ಇಲಾಖೆ ಸಿಬ್ಬಂದಿ ಖುದ್ದು ಮನೆಗೆ ಭೇಟಿ ನೀಡಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಿಳಿಸಿ, ಸ್ಥಳದಲ್ಲೇ ಔಷಧ ನೀಡಬೇಕೆಂಬ ಸೂಚನೆ ಪಾಲನೆಯಾಗುತ್ತಿಲ್ಲ.
ಕೊರೊನಾ ಸೋಂಕಿತರೇ ಕೆಲವು ಕಡೆಗಳಲ್ಲಿ ಔಷಧ ತರಲು, ಆಸ್ಪತ್ರೆಗೆ ತೋರಿಸಲು ಮನೆಯಿಂದ ಹೊರಗೆ ಅಲೆಯುತ್ತಿರುವ ದೂರುಗಳು ಕೇಳಿ ಬರುತ್ತಿವೆ. ಮನೆಯಲ್ಲಿರಬೇಕಾದ ಸೋಂಕಿತರು ರಾಜರೋಷವಾಗಿ ತಿರುಗಾಡಿದರೆ, ಕೊರೊನಾ ಸಮುದಾಯಕ್ಕೆ ಹರಡುವ ಭೀತಿ ಮೂಡಿದೆ. ತಾಲೂಕಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ವಿವರ, ವಿಳಾಸ ಸಂಗ್ರಹಿಸುವ ಕೆಲಸವನ್ನು ಮಾತ್ರ ಮಾಡಲಾಗುತ್ತಿದೆ. ಆದರೆ ಅವರ ಚಲನವಲನದ ಮೇಲೆ ನಿಗಾ ಇರಿಸುವ ಕೆಲಸವಾಗುತ್ತಿಲ್ಲ. ಕಟ್ಟುನಿಟ್ಟಿನ ಕರ್ಫ್ಯೂ ಜಾರಿಯಿದ್ದರೂ ಕೊರೊನಾ ಚೈನ್ ಲಿಂಕ್ ತಪ್ಪಿಸುವತ್ತ ಗಮನ ಹರಿಸದಿರುವುದು ಅಚ್ಚರಿಗೆ ಆಸ್ಪದ ನೀಡಿದೆ.