Advertisement

ರೈತರು, ವಿದ್ಯಾರ್ಥಿಗಳ ವಿರುದ್ಧದ ಆಡಳಿತ ಅಸಾಧ್ಯ

03:56 PM Sep 12, 2021 | Team Udayavani |

ಹಾಸನ: ಈ ದೇಶದಲ್ಲಿ ರೈತರು, ವಿದ್ಯಾರ್ಥಿಗಳನ್ನು ಎದುರು ಹಾಕಿಕೊಂಡು ರಾಜಕಾರಣ ಮಾಡಲು ಸಾಧ್ಯವಿಲ್ಲ ಎಂದು ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಅಭಿಪ್ರಾಯಪಟ್ಟರು.

Advertisement

ಹಾಸನ ತಾಲೂಕು ಕಟ್ಟಾಯ ಹೋಬಳಿ ಗೊರೂರು ಸಮೀಪದ ಉಡುವಾರೆ ಗ್ರಾಮದಲ್ಲಿ ಶುಕ್ರವಾರ ನಡೆದ ದೇವಾಲಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ದೆಹಲಿಯ ಗಡಿಯಲ್ಲಿ ಪಂಜಾಬ್‌ ಮತ್ತು ಹರಿಯಾಣದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಹೋರಾಟ ನಿರತ ರೈತರಿಗೆ ದೇಶದ ವಿವಿಧ ರಾಜ್ಯಗಳ ರೈತರು, ರೈತ ಸಂಘಟನೆಗಳ ಬೆಂಬಲವೂ ಇದೆ. ಹಾಗಾಗಿಯೇ ಹಲವು ತಿಂಗಳು ಕಳೆದರೂ ರೈತರ ಪ್ರತಿಭಟನೆ ನಿಂತಿಲ್ಲ.ದೇಶದಲ್ಲಿ ರೈತರು, ವಿದ್ಯಾರ್ಥಿಗಳನ್ನು ಎದುರು ಹಾಕಿಕೊಂಡು ರಾಜಕಾರಣ ಮಾಡುವುದು ಕಷ್ಟ ಎಂದು ಪ್ರಧಾನಿ ಮೋದಿ ಅವರಿಗೂ ಹೇಳಿದೆ. ರೈತರೊಂದಿಗೆ ಚರ್ಚೆ ಮಾಡಿ, ನಾನೂ ಪಾಲ್ಗೊಳ್ಳುತ್ತೇನೆ. ರೈತರ ಪ್ರತಿಭಟನೆ ಹೆಚ್ಚು ದಿನ ಮುಂದುವರಿಯಲು ಅವಕಾಶ ಕೊಡಬೇಡಿ ಎಂದು ಸಲಹೆ ನೀಡಿದ್ದೆ ಆದರೆ ಪ್ರಧಾನಿಯವರು ಈವರೆಗೂ ಸ್ಪಂದಿಸಿಲ್ಲ ಎಂದು ವಿಷಾದಿಸಿದರು.

ದೇಶದಲ್ಲಿ ಬಡತನ: ಶ್ರೀಮಂತಿಕೆಯ ನಡುವಿನ ಅಂತರ ಹೆಚ್ಚುತ್ತಲೇ ಹೋಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಬಡವರ ಸಂಖ್ಯೆ ಹೆಚ್ಚಿದ್ದರೆ, ಸಿರಿವಂತರ ಸಂಖ್ಯೆ ಕಡಿಮೆ ಇದೆ. ಆದರೆ ನಗರ ಪ್ರದೇಶಗಳು ಶ್ರೀ ಮಂತರಿಗೆ ಸೀಮಿತವಾಗಿವೆ ಎಂಬ ಪರಿಸ್ಥಿತಿ ಇದೆ ಎಂದರು. ರೈತರು ಮತ್ತು ಗ್ರಾಮೀಣ ಪ್ರದೇಶದ ಜನರ ಪರವಾದ ನಿಲುವು ಹೊಂದಿರುವ ಜೆಡಿಎಸ್‌ ಪ್ರಾದೇಶಿಕ ಪಕ್ಷ. ಈ ಪಕ್ಷದಿಂದ ನಮಗೆ ಅಡಚಣೆ ಇದೆ ಎಂದು
ಎರಡು ರಾಷ್ಟ್ರೀಯ ಪಕ್ಷಗಳು ಭಾವಿಸಿವೆ. ಜೆಡಿಎಸ್‌ ಈ ರಾಜ್ಯದಲ್ಲಿ ಇರಬಾರದು ಎಂಬ ಮನೋಭಾವನೆಯಿಂದ ಎರಡು ರಾಷ್ಟ್ರೀಯ ಪಕ್ಷಗಳೂ
ರಾಜಕಾರಣ ಮಾಡಿಕೊಂಡು ಬರುತ್ತಿವೆ. ಆದರೆ ಈ ರಾಜ್ಯದ ರೈತರು ಜೆಡಿಎಸ್‌ನ್ನು ಬಿಡುವುದಿಲ್ಲ ಎಂಬ ನಂಬಿಕೆ ಇದೆ. ಪಕ್ಷ ಸಂಘಟನೆಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಹಮ್ಮಿಕೊಳ್ಳುತ್ತೇನೆ ಎಂದು ದೇವೇಗೌಡರು ಹೇಳಿದರು.

ಇದನ್ನೂ ಓದಿ:ಮಹಾದಾಯಿ,ಮೇಕೆದಾಟು ಬಗ್ಗೆ ವಿಪಕ್ಷದಲ್ಲಿದ್ದಾಗ ಮಾತನಾಡಿದ ನಾಯಕರು ಈಗ ಮಾತಾಡುತ್ತಾರೋ.:ಡಿಕೆಶಿ

ರೈತನ ಮಗನಾಗಿ ಸಾಯುವೆ: 6 ದಶಕಗಳ ರಾಜಕಾರಣದಲ್ಲಿ ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ,ಪ್ರಧಾನಿಯಾಗಿ ಅಧಿಕಾರನಡೆಸಿದ್ದು ಸುಮಾರು ಐದೂವರೆ ವರ್ಷಗಳು ಮಾತ್ರ. ಪ್ರಧಾನಿಯಾಗಿದ್ದ 11 ತಿಂಗಳಲ್ಲಿ ರೈತರಿಗಾಗಿ ಕೆಲವು ಯೋಜನೆಗಳನ್ನು ಜಾರಿಗೊಳಿಸಿದೆ. ಹನಿನೀರಾವರಿ, ಸ್ಪಿಂಕ್ಲರ್, ಟ್ರ್ಯಾಕ್ಟರ್‌ ಗಳ ಖರೀದಿಗೆ ಶೇ. 90 ಸಹಾಯಧನ ನೀಡುವ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದೆ ಎಂದು ನೆನಪಿಸಿದ
ದೇವೇಗೌಡ ಅವರು, ನಾನು ರೈತನ ಮಗ, ರೈತರಿಗಾಗಿ ಹೋರಾಡುತ್ತಾ ಬಂದಿದ್ದೇನೆ. ರೈತನ ಮಗನಾಗಿಯೇ ಸಾಯುತ್ತೇನೆ. ನಾನಗೆ ಯಾವುದೇ ಪ್ರಶಸ್ತಿಗಳೂ ಬೇಡ ಎಂದರು. ನನ್ನ ಜೀವನ, ರಾಜಕೀಯ ಹೋರಾಟದ ಬಗ್ಗೆ ಈಗಾಗಲೇ ಹಲವು ಕೃತಿಗಳು ಪ್ರಕಟವಾಗಿವೆ.
ಸಮಗ್ರ ಜೀವನ ಚರಿತ್ರೆಯ ಕೃತಿ ಮುಂದಿನ ನವೆಂಬರ್‌ ನಲ್ಲಿ ಬಿಡುಗಡೆಯಾಗಲಿದೆ. ಆಗ ನನ್ನ ಹೋರಾಟದ ಬಗ್ಗೆ ರಾಜ್ಯದ ಜನರಿಗೆ ಗೊತ್ತಾಗಲಿದೆ ಎಂದರು. ಈ ವೇಳೆ ರೇವಣ್ಣನವರ ಸಾಧನೆಯನ್ನು ಬಣ್ಣಿಸಿದರು.

Advertisement

ಕಾಮಗಾರಿಗಳಿಗೆ ನೆರವು ಸಂಸದ ಪ್ರಜ್ವಲ್‌ ರೇವಣ್ಣ ಅವರು ಮಾತನಾಡಿ, ಇಳಿ ವಯಸ್ಸಿಯನಲ್ಲೂ ದೇವೇಗೌಡರು ರೈತರು, ಗ್ರಾಮೀಣ ಜನರ ಬಗ್ಗೆಯೇ  ಚಿಂತನೆ ಮಾಡುತ್ತಾರೆ. ದೇಶದಲ್ಲಿ ಜನರಿಗೆ ಸುಲಭವಾಗಿಸಿಗುವ ‌ ರಾಜಕಾರಣಿಯೆಂದರೆ ದೇವೇಗೌಡರು ಮಾತ್ರ ಎಂದರು.

ಉಡುವಾರೆ ಗ್ರಾಮದ ಸಮುದಾಯ ಭವನದ ಕಾಮಗಾರಿಗೆ ಸಂಸದರ ನಿಧಿಯಿಂದ ನೆರವು ‌ ನೀಡುವೆ. ಗ್ರಾಮದ ಪ್ರಮುಖ ಸಂಪರ್ಕ ರಸ್ತೆಯ ಒಂದು ಕಿ.ಮೀ.ಅಗಲೀಕರಣಕ್ಕೆ ಹಾಗೂ ಗೊರೂರಿನ ಅರಳೀಕಟ್ಟೆಯಿಂದ ಉಡುವಾರೆಗೆ 10 ಕಿ.ಮೀ. ಹೊಸ ರಸ್ತೆ ನಿರ್ಮಾಣದ ಬೇಡಿಕೆಯ ಬಗ್ಗೆ ಎಚ್‌.ಡಿ.ರೇವಣ್ಣ ಅವರ ಗಮನಕ್ಕೆ ತಂದು ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸುವುದಾಗಿ ಪ್ರಜ್ವಲ್‌ ರೇವಣ್ಣ ಅವರು ಭರವಸೆ ನೀಡಿದರು. ಶಾಸಕ ಸಿ.ಎನ್‌. ಬಾಲಕೃಷ್ಣ ಜೆಡಿಎಸ್‌ ಹಿರಿಯ ಮುಖಂಡ ಕೆ.ಎಂ.ರಾಜೇಗೌಡ, ಹಾಸನ ತಾಲೂಕು ಜೆಡಿಎಸ್‌ ಅಧ್ಯಕ್ಷ ಎಸ್‌.ದ್ಯಾವೇಗೌಡ, ಗ್ರಾಮದ ಮುಖಂಡ ಯೋಗೀಶ್‌, ಶಿವಶಂಕರ್‌ ಇತರರಿದ್ದರು.

ಕಟ್ಟಾಯ ಹೋಬಳಿಯ ನೆರವು ಸ್ಮರಿಸಿದ ಗೌಡರು
ಜೆಡಿಎಸ್‌ ಪಕ್ಷಕ್ಕೆ ಕಟ್ಟಾಯ ಹೋಬಳಿಯ ಕೊಡುಗೆಯನ್ನು ಮರೆಯುವುದಿಲ್ಲ ಎಂದು ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಹೇಳಿದರು. ಉಡುವಾರೆ ಗ್ರಾಮದ ದೇವಾಲಯಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಕಲೇಶಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಹಾಸನ ತಾಲೂಕಿನ ಕಟ್ಟಾಯ ಹೋಬಳಿಯ ಜನರು ಜೆಡಿಎಸ್‌ಗೆ ಸಾಕಷ್ಟು ಶಕ್ತಿ ನೀಡಿದ್ದಾರೆ ಎಂದರು.

ಪ್ರಜ್ವಲ್‌ ರೇವಣ್ಣ ಅವರು ಮಾತನಾಡಿ, ಒಂದು ವಿಧಾನಸಭಾ ಕ್ಷೇತ್ರದ ಚುನಾವಣಾ ಫ‌ಲಿತಾಂಶವನ್ನೇ ನಿರ್ಧರಿಸುವ ಸಾಮರ್ಥ ಯವನ್ನು ಕಟ್ಟಾಯ ಹೋಬಳಿಯ ಜನರು ತೋರಿದ್ದಾರೆ. ಒಂದುಕ್ಷೇತ್ರ ಜೆಡಿಎಸ್‌ನಿಂದ ಕೈ ತಪ್ಪಿ ಹೋಗದಂತೆ ಕಟ್ಟಾಯ ಹೋಬಳಿ ಜನರು ವಿಧಾನಸಭಾ ಚುನಾವಣೆಯಲ್ಲಿ ಸಹಕಾರ ನೀಡಿದ್ದಾರೆ . ಅದನ್ನು ನಾವು ಮರೆಯುವುದಿಲ್ಲ. ಹಾಗಾಗಿಯೇ ಎಚ್‌.ಡಿ.ರೇವಣ್ಣ ಅವರು ಕಟ್ಟಾಯ ಹೋಬಳಿಯ
ಅಭಿವೃದ್ಧಿ ಯೋಜನೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ವಿವಿಧ ಯೋಜನೆಗಳಡಿ ಕಟ್ಟಾಯ ಹೋಬಳಿಯ ಹಲವುಕಾಮಗಾರಿಗಳಿಗೆ ಅನುದಾನ ನೀಡುತ್ತಾ ಬಂದಿದ್ದಾರೆ. ಉಡುವಾರೆ ಗ್ರಾಮದ ಅಭಿವೃದ್ಧಿಗಾಗಿಯೇ 6 ಕೋಟಿ ರೂ. ಅನುದಾನ ಹರಿದು ಬಂದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next