ನವ ದೆಹಲಿ: ಇತರ ಹಿಂದುಳಿದ ವರ್ಗ (ಒಬಿಸಿ) ವರ್ಗದ ಕೆನೆ ಪದರ ವರ್ಗದವರಿಗೆ ಇರುವ ವಾರ್ಷಿಕ ಆದಾಯದ ಮಿತಿಯನ್ನು ಹಾಲಿ 8 ಲಕ್ಷ ರೂ.ಗಳ ಮಿತಿ ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಈ ಮೂಲಕ ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಇರುವ ಮೀಸಲು ವ್ಯವಸ್ಥೆ ಹೆಚ್ಚಿನವರಿಗೆ ಸಿಗುತ್ತದೆ ಎನ್ನುವುದು ಸರ್ಕಾರದ ಅಂಬೋಣ.
ಲೋಕಸಭೆಗೆ ಲಿಖೀತ ಉತ್ತರ ನೀಡಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಹಾಯಕ ಸಚಿವೆ ಪ್ರತಿಮಾ ಭೌಮಿಕ್, “ಒಬಿಸಿಯ ಕೆನೆಪದರ ವರ್ಗದವರಿಗೆ ಹಾಲಿ ಇರುವ ವಾರ್ಷಿಕ ಆದಾಯದ ಮಿತಿ ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಅದಕ್ಕಾಗಿ ನಿವೃತ್ತ ನ್ಯಾಯಮೂರ್ತಿ.ಜಿ.ರೋಹಿಣಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಆ ಸಮಿತಿ ಇತರ ಹಿಂದುಳಿದ ವರ್ಗದಲ್ಲಿ ಇರುವ ಉಪ-ಜಾತಿಗಳಿಗೂ ಈ ವ್ಯವಸ್ಥೆ ವಿಸ್ತರಿಸುವ ಬಗ್ಗೆ ಪರಿಶೀಲನೆ ನಡೆಸಲಿದೆ. ಇದುವರೆಗೆ ಸಮಿತಿ ವರದಿ ಸಲ್ಲಿಕೆ ಮಾಡಿಲ್ಲ’ ಎಂದು ಹೇಳಿದ್ದಾರೆ.
ಇದನ್ನೂ ಓದಿ :“ಸಂಸತ್ ಚಲೋ” ರೈತ ಸಂಘಟನೆಯ ಜಂತರ್ ಮಂತರ್ ಪ್ರತಿಭಟನೆಗೆ ದೆಹಲಿ ಸರ್ಕಾರ ಹಸಿರು ನಿಶಾನೆ?
ಇತರ ಹಿಂದುಳಿದ ವರ್ಗಗಳ ಕೆನೆಪದರಕ್ಕೆ ಇರುವ ಆದಾಯದ ಮಿತಿಯನ್ನು 12 ಲಕ್ಷ ರೂ.ಹೆಚ್ಚಿನ ಹೆಚ್ಚಿನ ಜಾತಿಗಳಿಗೆ ಮೀಸಲು ವ್ಯವಸ್ಥೆ ವಿಸ್ತರಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹಲವು ಹೋರಾಟಗಾರರು ಒತ್ತಾಯಿಸುತ್ತಿದ್ದಾರೆ. ಇದರಿಂದಾಗಿ ಹೆಚ್ಚಿನ ಜಾತಿಗಳಿಗೆ ಸೌಲಭ್ಯ ಸಿಕ್ಕಿದಂತಾಗುತ್ತದೆ ಎನ್ನುವುದು ಅವರ ವಾದ.