Advertisement
ಕೆರಾಡಿ ಗ್ರಾ.ಪಂ. ವ್ಯಾಪ್ತಿಯ ಬೆಳ್ಳಾಲ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಸರಕಾರಿ ಆಯುರ್ವೇದ ಆಸ್ಪತ್ರೆ ಕಾರ್ಯಾಚರಿಸುತ್ತಿದೆ. ಆದರೆ ಹಲವು ವರ್ಷಗಳಿಂದ ಹಳೆಯ ಕಟ್ಟಡದಲ್ಲಿಯೇ ಇದ್ದುದ್ದರಿಂದ ಜಿಲ್ಲಾ ಪಂಚಾಯತ್‌ನಿಂದ 15 ಲಕ್ಷ ರೂ. ಅನುದಾನ ನೂತನ ಕಟ್ಟಡಕ್ಕೆ ಮಂಜೂರಾಗಿದ್ದು, ಅದೀಗ ಕಾಮಗಾರಿ ಪೂರ್ಣಗೊಂಡಿದೆ.
Related Articles
Advertisement
ಈಗಾಗಲೇ ಹಳೆಯ ಕಟ್ಟಡದಲ್ಲಿ ಓಪಿಡಿ ಸೇವೆಯಿದ್ದು, ಅದು ಇಲ್ಲಿಯು ಮುಂದುವರಿಯಲಿದೆ. ಹೆಚ್ಚುವರಿಯಾಗಿ 2 ಕೋಣೆಗಳಿರಲಿದೆ. ಬರುವಂತಹ ರೋಗಿಗಳಿಗೆ ಕುಳಿತು ವಿಶ್ರಾಂತಿ ಪಡೆಯಲು ವ್ಯವಸ್ಥೆಯಿದೆ. ಔಷಧಿ ಇಡಲು ರ್ಯಾಕರ್ ವ್ಯವಸ್ಥೆಯಿದೆ. ಈಗ ಅಗತ್ಯವಾಗಿ ಬೇಕಾದ ಎಲ್ಲ ರೀತಿಯ ಔಷಧಿಗಳನ್ನು ದಾಸ್ತಾನು ಇರಿಸಲಾಗಿದೆ. ಔಷಧಿ ಕೊರತೆಯೇನಿಲ್ಲ. ಬೆಳ್ಳಾಲ, ಕೆರಾಡಿ ಭಾಗದಿಂದ ದಿನಕ್ಕೆ 35 – 40 ಮಂದಿ ಈ ಆಸ್ಪತ್ರೆಗೆ ಚಿಕಿತ್ಸೆ, ತಪಾಸಣೆಗಾಗಿ ಬರುತ್ತಾರೆ. ಮಳೆಗಾಲದಲ್ಲಿ ಈ ಪ್ರಮಾಣ ಮತ್ತಷ್ಟು ಹೆಚ್ಚಿದೆ ಎನ್ನುತ್ತಾರೆ ಇಲ್ಲಿನ ವೈದ್ಯರು.
6 ಸರಕಾರಿ ಆಯುರ್ವೇದ ಆಸ್ಪತ್ರೆ
ಕುಂದಾಪುರ ಹಾಗೂ ಬೈಂದೂರು ಎರಡೂ ತಾಲೂಕಿನಲ್ಲಿ ಒಟ್ಟು 6 ಸರಕಾರಿ ಆಯುರ್ವೇದ ಆಸ್ಪತ್ರೆಗಳು ಮಾತ್ರ ಇವೆ. ಅಮಾಸೆಬೈಲು, ಗುಲ್ವಾಡಿ, ಕಾಳಾವರ, ನಾವುಂದ ಕಾಲ್ತೂಡು, ಬೆಳ್ಳಾಲದಲ್ಲಿ ಸರಕಾರಿ ಆಯುರ್ವೇದ ಆಸ್ಪತ್ರೆ ಕಾರ್ಯಾಚರಿಸುತ್ತಿದೆ. ಈಗೀಗ ಆಯುರ್ವೇದ ಔಷಧಿಗೆ ಎಲ್ಲೆಡೆ ಭಾರೀ ಬೇಡಿಕೆ ಹೆಚ್ಚುತ್ತಿದ್ದು, ಗ್ರಾಮೀಣ ಭಾಗಗಳಲ್ಲಿ ಕೂಡ ಸರಕಾರಿ ಆಯುರ್ವೇದ ಆಸ್ಪತ್ರೆಗಳನ್ನು ತೆರೆಯುವ ಅಗತ್ಯವಿದೆ.
ಸಿಬಂದಿ ಕೊರತೆ
ಈಗ ಇಲ್ಲಿ ಒಬ್ಬ ವೈದ್ಯರು ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಸಿಬಂದಿ ಕೆಲಸ ಮಾಡುತ್ತಿದ್ದಾರೆ. ಹೊಸದಾದ ಸುಸಜ್ಜಿತ ಆಸ್ಪತ್ರೆಗೆ ಸಿಬಂದಿ ಕೊರತೆಯಿದ್ದು, ಅದನ್ನು ಸಂಬಂಧಪಟ್ಟವರು ನೇಮಕ ಮಾಡಿಕೊಡಲಿ. ಉತ್ತಮವಾದ ನೂತನ ಕಟ್ಟಡದಲ್ಲಿ ಜನರಿಗೆ ಬೇಕಾದ ಅಗತ್ಯ ಎಲ್ಲ ಸೌಕರ್ಯಗಳು ಸಿಗುವಂತಾಗಲಿ ಎನ್ನುವುದು ಇಲ್ಲಿನ ಗ್ರಾಮಸ್ಥರ ಆಗ್ರಹವಾಗಿದೆ.