ಮೈಸೂರು: ಕೇಂದ್ರ ಬಜೆಟ್‌ನಲ್ಲಿ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಟೀಕಿಸಿದ್ದಾರೆ.
ಡಾ.ಸ್ವಾಮಿನಾಥನ್ ವರದಿಯಂತೆ ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಮಾಡುವುದಾಗಿ ಚುನಾವಣಾ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ನಾಲ್ಕು ವರ್ಷಗಳ ನಂತರ ರೈತರ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚದ 150 ಪಟ್ಟು ಹೆಚ್ಚು ಬೆಲೆ ಸೇರಿಸಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದಾಗಿ ಹಾಗೂ ಎಲ್ಲಾ ರೈತರ ಕೃಷಿ ಉತ್ಪನ್ನಗಳಿಗೂ
ಕನಿಷ್ಠ ಬೆಂಬಲ ಬೆಲೆ ವ್ಯಾಪ್ತಿಗೆ ಸೇರಿಸುವುದಾಗಿ ಘೋಷಿಸಿರುವುದು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ನಿಧಾನ ಗತಿಯಲ್ಲಿ ಪೂರಕವಾಗಲಿದೆ. ನಾಲ್ಕು ವರ್ಷದ ನಂತರವಾದರೂ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಲಾಗಿದೆ. ಈ ಯೋಜನೆ ಮುಂದಿನ ಚುನಾವಣೆಗೂ ಮೊದಲು ಜಾರಿಯಾದರೆ ಮಾತ್ರ ಪ್ರಧಾನಿಯವರ ಬಗ್ಗೆ ರೈತರು ನಂಬಿಕೆ ಇಡಬಹುದು ಎಂದಿದ್ದಾರೆ.
ಸ್ವಾಗತಾರ್ಹ ಸಂಗತಿಗಳು: ರೈತರಿಂದಲೇ ಆರಂಭವಾಗಿರುವ ರೈತ ಉತ್ಪಾದಕ ಕಂಪನಿಗಳಿಗೆ ಐದು ವರ್ಷಗಳವರೆಗೆ ವರಮಾನ ತೆರಿಗೆಗೆ ವಿನಾಯಿತಿ ನೀಡಿರುವುದು, ಗೇಣಿ ಸಾಗುವಳಿ ರೈತರಿಗೆ ಸಾಲ ಸೌಲಭ್ಯ ಸಿಗುವಂತಹ ಯೋಜನೆ ಜಾರಿಗೆ ತಂದಿರುವುದು, ಹಣ್ಣು ಮತ್ತು ತರಕಾರಿ ಬೆಳೆಯುವ ರೈತರ ಬೆಳೆಗಳಿಗೆ ಬೆಲೆ ಸ್ಥಿರೀಕರಣ ಮಾಡಲು ಆಪರೇಷನ್ ಗ್ರೀನ್ ಯೋಜನೆ ಜಾರಿಗೆ ತಂದಿರುವುದು,
ಹೈನುಗಾರಿಕೆ ಉದ್ಯಮಕ್ಕೆ 10 ಸಾವಿರ ಕೋಟಿ ಮೀಸಲಾಗಿ ಇರಿಸಿರುವುದು, ದೇಶದ 50 ಕೋಟಿ ಬಡ ಜನರಿಗೆ ಆರೋಗ್ಯ ವಿಮೆ ಕಲ್ಪಿಸಿರುವುದು, ಸಾವಯವ ಕೃಷಿಗೆ ಉತ್ತೇಜನ ನೀಡಿರುವುದು, ಆಹಾರ ಪದಾರ್ಥಗಳ ಸಂಸ್ಕರಣೆಗೆ ಅನುದಾನ ಹೆಚ್ಚಿಸಿರುವುದು, ಎಲ್ಲಾ ರೈತರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಕೊಡುವ ಯೋಜನೆ ಜಾರಿಗೆ ತರುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದ್ದಾರೆ.
ಸತತ ಮೂರು ವರ್ಷಗಳ ಕಾಲ ಬರಗಾಲ ಹಾಗೂ ಆತ್ಮಹತ್ಯೆಗಳ ಸರಣಿಯಿಂದ ಸಂಕಷ್ಟದ ಸರಮಾಲೆಯಲ್ಲಿ ಸಿಲುಕಿರುವುದರಿಂದ ರೈತರ ಸಾಲಮನ್ನಾ ಮಾಡುವ ಬಗ್ಗೆ ಕೃಷಿ ಸಾಲ ನೀತಿಯನ್ನು ಬದಲಾಯಿಸುವ ಬಗ್ಗೆ ಹಾಗೂ ಬೆಳೆ ನಷ್ಟಕ್ಕೆ ಫಸಲ್ ಬಿಮಾ ಯೋಜನೆ ತಿದ್ದುಪಡಿ ಮಾಡುವ ಬಗೆಯಾಗಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ನಿರಾಶಾದಾಯಕವಾಗಿದೆ ಎಂದು ಹೇಳಿದ್ದಾರೆ.