ಗದಗ : ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಹೊರಡಿಸಿದ ಪರಿಷ್ಕೃತ ಮಾರ್ಗಸೂಚಿಯಂತೆ ಗುರುವಾರ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಯಿತು. ಮದುವೆ ಮತ್ತಿತರೆ ಸಮಾರಂಭಗಳ ವಿವಿಧ ವಸ್ತುಗಳ ಖರೀದಿಗೆ ಆಗಮಿಸಿದ್ದ ಜನರು ಪರದಾಡುವಂತಾಯಿತು. ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನಗರದ ಸರಾಫ್ ಬಜಾರ್‌ನಿಂದ ಆರಂಭಗೊಂಡ ಕಾರ್ಯಾಚರಣೆಯಿಂದ ಪ್ರಮುಖ ರಸ್ತೆಗಳಲ್ಲಿರುವ ಬಹುತೇಕ ಅಂಗಡಿಗಳು ಬಾಗಿಲು ಮುಚ್ಚಿದವು.
ಟಾಂಗಾಕೂಟ, ಸ್ಟೇಷನ್ ರಸ್ತೆ, ಬ್ಯಾಂಕ್ ರೋಡ್, ಗಾಂಧಿ ಸರ್ಕಲ್, ಕೆ.ಸಿ.ರಾಣಿ ರಸ್ತೆ, ಮುಳಗುಂದ ನಾಕಾ, ಬೆಟಗೇರಿ ಭಾಗದಲ್ಲೂ ಎಲ್ಲ ಅಂಗಡಿಗಳನ್ನು ಮುಚ್ಚಿಸಲಾಯಿತು. ಪ್ರತಿ 15 ನಿಮಿಷಕ್ಕೊಮ್ಮೆ ರೌಂಡ್ಸ್ ಮಾಡುವ ಮೂಲಕ ಪುನಃ ವ್ಯಾಪಾರ, ವಹಿವಾಟು ಆಗದಂತೆ ನಿಗಾ ವಹಿಸಲಾಗಿತ್ತು. ಇದ್ದರಿಂದ ಅವಳಿ ನಗರದ ಜನತೆ ಗೊಂದಲಕ್ಕೆ ಸಿಲುಕಿದರು.
ವರ್ತಕರ ಆಕ್ರೋಶ: ಏಕಾಏಕಿ ಅಂಗಡಿಗಳನ್ನು ಬಂದ್ ಮಾಡಿಸಿದ್ದಕ್ಕೆ ಅಂಗಡಿ ಮಾಲಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕರ್ಫ್ಯೂ ವಾರಾಂತ್ಯಕ್ಕೆ ಘೋಷಣೆಯಾಗಿದೆ. ಯಾವುದೇ ಮುನ್ಸೂಚನೆ ಇಲ್ಲದೇ ಅಂಗಡಿಗಳನ್ನು ಬಂದ್ ಮಾಡಿಸಿದರೆ ನಮ್ಮ ಪಾಡೇನು ಎಂದು ಅ ಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಇದೇ ವೇಳೆ ಪರಿಶೀಲನೆಗೆ ಆಗಮಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅವರ ಬಳಿಯೂ ವರ್ತಕರು ಅಳಲು ತೋಡಿಕೊಂಡರು. ಸ್ಟೇಷನ್ ರಸ್ತೆ ಬಳಿ ಎಸ್ಪಿ ಕಾರು ತಡೆದ ವರ್ತಕರು, ಸದ್ಯ ಮದುವೆ ಸೀಸನ್ ಇದೆ. ಹತ್ತಾರು ಮದುವೆಗಳಿಗೆ ಚಿನ್ನಾಭರಣ ಪೂರೈಸಲು ಗ್ರಾಹಕರಿಂದ ಮುಂಗಡ ಹಣ ಪಡೆದಿದ್ದೇವೆ.
ಬಟ್ಟೆ ಅಂಗಡಿಗಳಿಗೂ ಸಾಕಷ್ಟು ಜನರು ಆಗಮಿಸುತ್ತಾರೆ. ಇಂತಹ ಸಂದರ್ಭದಲ್ಲಿ ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ಬೆಳಗ್ಗೆ 11 ಗಂಟೆಗೆ ಬಂದು ವ್ಯಾಪಾರ ಬಂದ್ ಮಾಡಿಸುವುದು ಎಷ್ಟು ಸರಿ? ಒಂದೆರಡು ದಿನ ಮುನ್ನವೇ ದ್ವನಿವರ್ಧಕಗಳ ಮೂಲಕ ಮಾಹಿತಿ ನೀಡಬೇಕಿತ್ತು ಎಂದು ಅಸಮಾಧಾನ ಹೊರ ಹಾಕಿದರು. ಜನರ ಗೋಳಾಟ: ಅವಳಿ ನಗರದ ಪ್ರಮುಖ ರಸ್ತೆ, ಮಾರುಕಟ್ಟೆ ಪ್ರದೇಶದಲ್ಲಿನ ಎಲ್ಲ ಬಗೆಯ ಅಂಗಡಿ-ಮುಂಗಟ್ಟುಗಳ ಬಾಗಿಲು ಮುಚ್ಚಿದ್ದವು. ಮದುವೆ ಮತ್ತಿತರೆ ಶುಭ ಕಾರ್ಯಗಳಿಗಾಗಿ ಚಿನ್ನ, ಬಟ್ಟೆ, ಇನ್ನಿತರೆ ಸಾಮಗ್ರಿಗಳ ಖರೀದಿಗೆ ಆಗಮಿಸಿದ್ದ ಗ್ರಾಹಕರು ಏಕಾಏಕಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರಿಂದ ದಿಕ್ಕು ತೋಚದಂತಾದರು. ಕೆಲ ಅಂಗಡಿಕಾರರು ಕದ್ದು ಮುಚ್ಚಿ ಅರ್ಧ ಬಾಗಿಲು ತೆರೆದು ವ್ಯಾಪಾರ ನಡೆಸುತ್ತಿದ್ದರು.
ಗಸ್ತು ಪೊಲೀಸರು ಕಣ್ಣಿಗೆ ಬೀಳುತ್ತಿದ್ದಂತೆ ಅಂಗಡಿ ಮುಚ್ಚುವ ದೃಶ್ಯ ಸಾಮಾನ್ಯವಾಗಿತ್ತು. ಸಮರ್ಪಕವಾಗಿ ಖರೀದಿಯಾಗದೇ ಜನರು ಪೇಚಿಗೆ ಸಿಲುಕಿದರು. ಏಕಾಏಕಿ ಇಂತಹ ನಿರ್ಧಾರ ಕೈಗೊಂಡಿರುವ ರಾಜ್ಯ ಸರಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು