Advertisement

ಗೋಸಂಜೀವಿನಿ ಯೋಜನೆಯಿಂದ  ಗೋಸಂರಕ್ಷಣೆ : ರಾಘವೇಶ್ವರ ಶ್ರೀ

06:50 AM Aug 13, 2017 | Team Udayavani |

ವಿಟ್ಲ: ಮಲೆಮಹದೇಶ್ವರ ಬೆಟ್ಟದ ಪರಿಸರದಲ್ಲಿ 70 ಸಾವಿರಕ್ಕೂ ಅಧಿಕ ಗೋವುಗಳನ್ನು ಶ್ರೀ ರಾಮಚಂದ್ರಾಪುರ ಮಠದ ನೇತೃತ್ವದಲ್ಲಿ ಎಲ್ಲರ ಸಹಕಾರದಲ್ಲಿ ಸಂರಕ್ಷಿಸಲಾಗಿದೆ. ಅಲ್ಲೇ ಪಕ್ಕದ ಅಂದಿಯೂರಿನಲ್ಲಿ  ನಡೆದ  ಆಡಿಜಾತ್ರೆಯಲ್ಲಿ ಗೋವುಗಳನ್ನು ಕಟುಕರು ಖರೀದಿಸಿ, ಗೋಮಾಂಸಕ್ಕಾಗಿ ಬಳಸುತ್ತಾರೆ. ಇದರ ಬದಲಾಗಿ ಶಾಂತಿ, ಸಮಾಧಾನದಲ್ಲಿ ರೈತರು ಮಾರುವ ಗೋವುಗಳನ್ನು ರೈತರೇ ಖರೀದಿಸುವಂತೆ ಶ್ರೀಮಠ ಪ್ರೇರೇಪಿಸಲಿದೆ. ಅಸಾಧ್ಯವೆಂದಾದಲ್ಲಿ ಶ್ರೀಮಠ ಗೋಸಂಜೀವಿನಿ ಯೋಜನೆ ಮೂಲಕ ಗೋಸಂರಕ್ಷಣೆ ಮಾಡಲಿದೆ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದರು.

Advertisement

ಅವರು ಬೆಂಗಳೂರು ಗಿರಿನಗರ ರಾಮಾಶ್ರಮದಲ್ಲಿ ವಿಟ್ಲ, ಕೇಪು, ಕಲ್ಲಡ್ಕ, ಕುಂದಾಪುರ ವಲಯಗಳ ಸರ್ವಸೇವೆ ಯನ್ನು ಸ್ವೀಕರಿಸಿ, ಪ್ರತಿಭಾ ಪುರಸ್ಕಾರ ನೆರವೇರಿಸಿ, ಆಶೀರ್ವಚನ ನೀಡಿದರು. ಬೆಟ್ಟದಲ್ಲಿ 15 ವರ್ಷಗಳಿಂದ ಮಳೆ ಸುರಿಯದೇ ರೈತರು ಕಂಗಾಲಾಗಿದ್ದರು. ಬೆಟ್ಟಕ್ಕೆ ಬೇಲಿ ಹಾಕಿದ್ದರು. ಇದೆಲ್ಲದರ ಪರಿಣಾಮ ಗೋವುಗಳಿಗೆ ಮೇವು ಇರಲಿಲ್ಲ. ಮಠವು ಗೋಪ್ರೇಮಿಗಳ ಸಹಾಯಹಸ್ತದಿಂದ ಮೇವು ಪೂರೈಸಿದೆ. ಮಳೆಯೂ ಬಂದಿದೆ. ಮೇವು ಲಭ್ಯವಾಗುತ್ತಿದೆ. ಸೇವೆ ಮತ್ತು ಶುದ್ಧ ಮನಸ್ಸಿನ ಭಕ್ತಿಯು ದೈವಾನುಗ್ರಹಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಇದೇ ಉದಾಹರಣೆ ಎಂದರು.

ಗೋಸಂಜೀವಿನಿ ಯೋಜನೆಗೆ ಭಕ್ತರು ಉದಾರ ಕೊಡುಗೆ ನೀಡಿ, ಆಡಿಜಾತ್ರೆಗೆ ಪರ್ಯಾಯವಾಗಿ ಹನೂರು ಸಮೀಪದ ಕೆಂಪಯ್ಯನಹಟ್ಟಿಯಲ್ಲಿ ಮಠದ ನೇತೃತ್ವದಲ್ಲಿ ನಡೆದ  ಅಭಯಜಾತ್ರೆಯಲ್ಲಿ ಗೋವುಗಳನ್ನು ರಕ್ಷಿಸಬೇಕು. ಮನೆಮನೆಗೆ ಗೋವುಗಳನ್ನು ಸ್ವಾಗತಿಸಬೇಕು. ಅಥವಾ ಗೋಸಂರಕ್ಷಣೆಯಲ್ಲಿ ಪಾಲುದಾರನಾಗ ಬೇಕು ಎಂದವರು ಕರೆ ನೀಡಿದರು.

ಸಂಗೀತ ನಿರ್ದೇಶಕ ವಿ. ಮನೋಹರ್‌ ಅವರು ಭಾಗವಹಿಸಿ, ಶ್ರೀಮಠದ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಅಭಯಾಕ್ಷರ ಅಭಿಯಾನದಲ್ಲಿ ಪಾಲ್ಗೊಳ್ಳಲು ಆಸಕ್ತಿಯಿದೆ ಎಂದರು. ಇದೇ ಸಂದರ್ಭ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರ ವೇರಿಸಲಾಯಿತು. ವಿವಿಧ ಯೋಜನೆಗಳಿಗೆ ಶಿಷ್ಯ ಭಕ್ತರಿಂದ ಸಮರ್ಪಣೆ ನಡೆಯಿತು. ಮಠದ ಅಕ್ಷರದೀಕ್ಷೆ ಯೋಜನೆಯಲ್ಲಿ ಅನೇಕ ಮಂದಿ ಸೇರ್ಪಡೆಗೊಂಡು, ಶ್ರೀಗಳಿಂದ ದೀಕ್ಷಾ ಪ್ರತಿಜ್ಞೆ ಸ್ವೀಕರಿಸಿದರು.

ವಲಯ ಸಭೆ 
ಇದಕ್ಕೂ ಮುನ್ನ ಹವ್ಯಕ ಮಹಾ ಮಂಡಲ, ಮಂಗಳೂರು ಹವ್ಯಕ ಮಂಡಲ ಮಾರ್ಗದರ್ಶನದಲ್ಲಿ ವಿಟ್ಲ, ಕೇಪು, ಕಲ್ಲಡ್ಕ, ಕುಂದಾಪುರ ವಲಯಗಳ ಜಂಟಿ ಸಭೆಯನ್ನು ಆಯೋಜಿಸಲಾಗಿತ್ತು. ಹವ್ಯಕ ಮಹಾಮಂಡಲ ಅಧ್ಯಕ್ಷೆ ಈಶ್ವರೀ ಬೇರ್ಕಡವು ಅಧ್ಯಕ್ಷತೆ ವಹಿಸಿದ್ದರು. ಕೋಶಾಧ್ಯಕ್ಷ ಜಿ.ಎಸ್‌. ಹೆಗಡೆ ವಿಜಯ ನಗರ, ಮಾತೃಪ್ರಧಾನ ಕಲ್ಪನಾ ತಲವಾಟ, ಮುಷ್ಟಿಭಿಕ್ಷೆ ಪ್ರಧಾನ ಮಲ್ಲಿಕಾ ಜಿ.ಭಟ್‌, ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್‌, ಪ್ರಧಾನ ಕಾರ್ಯದರ್ಶಿ ಪೆದಮಲೆ ನಾಗರಾಜ ಭಟ್‌, ಕೋಶಾಧ್ಯಕ್ಷ ನೂಜಿಬೈಲು ರಮೇಶ ಭಟ್‌, ಮಾತೃಪ್ರಧಾನ ಸುಮಾ ರಮೇಶ್‌, ಸಂಸ್ಕಾರ ಪ್ರಧಾನ ಪಾರ್ವತೀ ಮೋಂತಿಮಾರು, ಮುಷ್ಟಿಭಿಕ್ಷೆ ಪ್ರಧಾನ ಜಯಲಕ್ಷ್ಮೀ ಕುಕ್ಕಿಲ, ಕೇಪು ವಲಯ ಅಧ್ಯಕ್ಷ ಜನಾರ್ದನ ಭಟ್‌ ಅಮೈ, ಕೋಶಾಧ್ಯಕ್ಷ  ಸುಬ್ಬರಾಜ ಶಾಸ್ತ್ರಿಮಣಿಲ, ವಿಟ್ಲ ವಲಯ ಅಧ್ಯಕ್ಷ ಚಂದ್ರಶೇಖರ ಭಟ್‌ ಪಡಾರು, ದಿಗªರ್ಶಕ ಸತೀಶ ಪಂಜಿಗದ್ದೆ, ಕಲ್ಲಡ್ಕ ವಲಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಭಟ್‌, ಕಲ್ಲಡ್ಕ ಗೇರುಕಟ್ಟೆ ಶ್ರೀಉಮಾಶಿವ ಕ್ಷೇತ್ರ ಅಧ್ಯಕ್ಷ ರಾಕೋಡಿ ಈಶ್ವರ ಭಟ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

ಕೇಪು ವಲಯ ಪ್ರಧಾನ ಕಾರ್ಯದರ್ಶಿ ಮೋಹನ ಎ., ವಿಟ್ಲ ವಲಯ ಪ್ರಧಾನ ಕಾರ್ಯದರ್ಶಿ ರಾಜನಾರಾಯಣ ಸರವು, ಕಲ್ಲಡ್ಕ ವಲಯ ಅಧ್ಯಕ್ಷ ಯು.ಎಸ್‌.ಚಂದ್ರಶೇಖರ ಭಟ್‌ ನೆಕ್ಕಿದರವು ಹಾಗೂ ಕುಂದಾಪುರ ವಲಯ ಪ್ರಧಾನ ಕಾರ್ಯದರ್ಶಿ ಗುರುದತ್ತ ರಾವ್‌ ವರದಿ ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next