ಹುಬ್ಬಳ್ಳಿ: ಪ್ರತಿ ಜಿಲ್ಲೆಯಲ್ಲಿ ಗೋಮಾಳ ಜಮೀನು ಗುರುತಿಸಿ ಗೋಶಾಲೆಗಳನ್ನು ಆರಂಭಿಸುವ ಕೆಲಸ ಪ್ರಾರಂಭವಾಗಿದ್ದು, ಇಂತಹ ಕಾರ್ಯಗಳ ಮೂಲಕ ಗೋವುಗಳನ್ನು ರಕ್ಷಿಸುವ ಕೆಲಸವನ್ನು ಸರ್ಕಾರ ಸಮರ್ಪಕವಾಗಿ ನಿರ್ವಹಿಸಲಿದೆ ಎಂದು ಪಶು ಸಂಗೋಪನಾ ಇಲಾಖೆ ಸಚಿವ ಪ್ರಭು ಚವ್ಹಾಣ ತಿಳಿಸಿದರು.
ಶ್ರೀ ಸಿದ್ಧಾರೂಢ ಮಠಕ್ಕೆ ಭೇಟಿ ಮಾಡಿ ಉಭಯ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ನಂತರ ಮಠದ ಆವರಣದಲ್ಲಿರುವ ಗೋಶಾಲೆಗೆ ತೆರಳಿ ಜಾನುವಾರು ವೀಕ್ಷಿಸಿ ಪೂಜೆ ಸಲ್ಲಿಸಿದರು. ಮೂರು ದಿನಗಳ ಹಿಂದೆ ಜನಿಸಿದ ಕರುವನ್ನು ಎತ್ತಿಕೊಂಡು ಸಂಭ್ರಮಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಗೋಶಾಲೆಗಳಿಗೆ ಇಲಾಖೆಯ ವೈದ್ಯರು ಯಾವ ರೀತಿ ಸ್ಪಂದಿಸುತ್ತಿದ್ದಾರೆ, ಚಿಕಿತ್ಸೆ ನೀಡುತ್ತಿದ್ದಾರೆ ಎನ್ನುವ ಕುರಿತು ಪರಿಶೀಲಿಸುವ ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ಪ್ರತಿಯೊಂದು ಗೋಶಾಲೆಗಳಿಗೆ ಅಧಿಕಾರಿಗಳ ಜತೆಗೆ ಭೇಟಿ ನೀಡಲಾಗುತ್ತಿದೆ. ಕುಂದು-ಕೊರತೆಗಳನ್ನು ಆಲಿಸುವ ಕೆಲಸ ಮಾಡುತ್ತಿದ್ದೇವೆ. ಅವುಗಳಿಗೆ ಸ್ಪಂದಿಸುವ ಕೆಲಸ ಆಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಗೋ ಶಾಲೆಗಳು ಆರಂಭವಾದರೆ ಬಿಡಾಡಿ ದನಗಳ ಹಾವಳಿಗೂ ಕಡಿವಾಣ ಬೀಳಲಿದೆ ಎಂದರು.
ಗೋವುಗಳ ರಕ್ಷಣೆಗಾಗಿ ಈಗಾಗಲೇ ಪ್ರಾಣಿ ಕಲ್ಯಾಣ ಮಂಡಳಿ ಆರಂಭಿಸಲಾಗಿದೆ. ಪಶು ಸಂಜೀವಿನಿ 1962 ಆಂಬ್ಯುಲೆನ್ಸ್ ವ್ಯವಸ್ಥೆ ಜಾರಿಗೆ ತರುವ ಕೆಲಸ ನಡೆಯುತ್ತಿದೆ. ಈ ಯೋಜನೆಯಿಂದ 275 ಆಂಬ್ಯುಲೆನ್ಸ್‌ಗಳನ್ನು ನೀಡಲಾಗುತ್ತಿದೆ. ಎರಡ್ಮೂರು ತಿಂಗಳಲ್ಲಿ ಪ್ರತಿ ತಾಲೂಕಿಗೂ ಈ ವ್ಯವಸ್ಥೆ ದೊರೆಯಲಿದೆ. ಇಂತಹ ಹಲವು ಕಾರ್ಯಕ್ರಮಗಳ ಮೂಲಕ ಗೋವು ಸಂಪತ್ತು ಉಳಿಸಬೇಕು ಎನ್ನುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಕಾಲು, ಬಾಯಿ ಜ್ವರ ಲಸಿಕೆ ಪೂರ್ಣಗೊಂಡಿದೆ ಎಂದರು.
ಹೊಸ ಗೋಹತ್ಯೆ ಕಾಯ್ದೆ ಹಾಗೂ ಕಸಾಯಿಖಾನೆ ಕುರಿತು ಕೆಲವರು ಕೋರ್ಟ್ ಮೊರೆ ಹೋಗಿದ್ದಾರೆ. ಆದರೂ ಹಳೆಯ ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸಿ ಗೋವುಗಳನ್ನು ಉಳಿಸುವ ಕೆಲಸ ಮಾಡಲಾಗುತ್ತಿದೆ. ಇದರಲ್ಲಿ ನಮ್ಮ ಪರವಾಗಿ ತೀರ್ಪು ಬರಲಿದೆ ಎನ್ನುವ ವಿಶ್ವಾಸವಿದ್ದು, ಹೊಸ ಕಾಯ್ದೆ ಪ್ರಕಾರದ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಲಾಗುವುದು. ಇಲ್ಲಿಯವರೆಗೆ 10 ಸಾವಿರ ಗೋವುಗಳನ್ನು ರಕ್ಷಿಸಲಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರ 1964ರಲ್ಲಿ ಗೋಹತ್ಯೆ ಕಾಯ್ದೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದರೂ ಅದನ್ನು ಸಮರ್ಪಕ ಅನುಷ್ಠಾಕ್ಕೆ ತಂದಿರಲಿಲ್ಲ. ಅವರಿಗೆ ಗೋವುಗಳ ಬಗ್ಗೆ ಯಾವುದೇ ಕಾಳಜಿ ಇರಲಿಲ್ಲ. ಆದರೆ ಕೆಲ ಲೋಪದೋಷ ಸರಿಪಡಿಸಿ ಸಮರ್ಪಕವಾಗಿ ದಂಡ, ಶಿಕ್ಷೆಯನ್ನು ಹೆಚ್ಚಿಸಲಾಗಿದೆ. ಈ ಕಾನೂನು ಜಾರಿಯಾದರೆ ಗೋವುಗಳ ರಕ್ಷಣೆ ಹೆಚ್ಚಾಗಿ, ಕಸಾಯಿಖಾನೆಗೆ ಸಾಗಾಣಿಕೆಯಲ್ಲಿ ಸಾಕಷ್ಟು ಕಡಿಮೆಯಾಗಲಿದೆ.ಅವರ ಕಾಲದಲ್ಲಿ ಕಸಾಯಿಖಾನೆಗಳು ಸಾಕಷ್ಟು ಸಂಖ್ಯೆಯಲ್ಲಿ ಹುಟ್ಟಿಕೊಂಡಿವೆ. ಇದೀಗ ಅದ್ಯಾವ ನೈತಿಕತೆ ಇಟ್ಟುಕೊಂಡು ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವಂತೆ ಆಗ್ರಹಿಸುತ್ತಿದ್ದಾರೆ ಎಂದರು.
ಜಂಟಿ ನಿರ್ದೇಶಕ ಡಾ| ಕೆ.ಚಂದ್ರಶೇಖರ, ಉಪ ನಿರ್ದೇಶಕ ಡಾ| ಉಮೇಶ ಕೊಂಡಿ, ಉಪ ನಿರ್ದೇಶಕ ಕೊಂಡಿ, ಸಹಾಯಕ ನಿರ್ದೇಶಕ ಡಾ| ಎಸ್.ಜಿ. ರೋಣ,
ವೈದ್ಯಾಧಿಕಾರಿ ಡಾ| ಎಚ್.ವೈ. ಹೊನ್ನೆನಾಯ್ಕರ, ಮಠದ ಟ್ರಸ್ಟ್ ಕಮಿಟಿ ಸದಸ್ಯರು ಇದ್ದರು ಸೇರಿದಂತೆ ಇನ್ನಿತರರಿದ್ದರು.