Advertisement

ಬರಪೀಡಿತ ಎಲ್ಲಾ ತಾಲೂಕಲ್ಲೂ ಗೋಶಾಲೆ

11:12 AM Aug 06, 2019 | Suhan S |

ದಾವಣಗೆರೆ: ಬರಪೀಡಿತ ಎಲ್ಲಾ ತಾಲೂಕುಗಳಲ್ಲೂ ಗೋಶಾಲೆ ತೆರೆಯಲು ಹೈಕೋರ್ಟ್‌ ಆದೇಶಿಸಿದ್ದು, ಅದರಂತೆ ಆ ತಾಲೂಕಿನಲ್ಲಿ ಸೂಕ್ತ ಸ್ಥಳ ಗುರುತಿಸಿ, ಒಂದೊಂದು ಗೋಶಾಲೆ ತೆರೆಯುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್‌.ಆರ್‌ ಉಮಾಶಂಕರ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಸೋಮವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬರ ನಿರ್ವಹಣೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಗಳೂರು ತಾಲೂಕಿನಲ್ಲಿ ಈಗಾಗಲೇ ಗೋಶಾಲೆ ತೆರೆಯಲಾಗಿದೆ. ಜಿಲ್ಲೆಯಲ್ಲಿ ವಾಡಿಕೆಯಷ್ಟು ಮಳೆಯಾಗದೆ, ಇತರೆ ತಾಲೂಕಗಳಲ್ಲಿ ಮೇವಿನ ಕೊರತೆಯಾಗಿರಬಹುದು. ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ, ರೈತರೊಂದಿಗೆ ಚರ್ಚಿಸಿ, ಮೇವು ಒದಗಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು.

ಹೈಕೋರ್ಟ್‌ ಆದೇಶದಂತೆ ಜಿಲ್ಲೆಯ ಬರ ಪೀಡಿತ ಎಲ್ಲಾ ತಾಲೂಕುಗಳಲ್ಲಿ ಗೋಶಾಲೆ ತೆರೆದು, ಎರಡು ಲೋಡ್‌ಗಳಷ್ಟು ಮೇವು ಸಂಗ್ರಹಿಸಬೇಕು. ಎರಡು ವಾರಗಳ ಕಾಲ ನೋಡಿ, ರೈತರು ಗೋಶಾಲೆಗೆ ಬಂದು ಮೇವು ತೆಗೆದುಕೊಂಡು ಹೋದರೆ ಸರಿ. ಇಲ್ಲವಾದಲ್ಲಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ. ಗೋಶಾಲೆ ಅವಶ್ಯಕತೆ ಇಲ್ಲದಿದ್ದಲ್ಲಿ ಮುಚ್ಚಿ ಎಂದು ತಿಳಿಸಿದರು.

ಜಗಳೂರು ತಾಲೂಕಿನ ತಹಶೀಲ್ದಾರ್‌ ತಿಮ್ಮಣ್ಣ ಮಾತನಾಡಿ, ತಾಲೂಕಿನಲ್ಲಿ ಮೇವಿನ ಕೊರತೆ ಹೆಚ್ಚಿರುವ ಮೂರು ಪ್ರದೇಶಗಳಲ್ಲಿ ಗೋಶಾಲೆ ತೆರೆಯಲಾಗಿದೆ. ಇನ್ನುಳಿದ ಎರಡು ಕಡೆಗಳಲ್ಲಿ ಮೇವಿನ ಬ್ಯಾಂಕ್‌ ತೆರೆದು ಮೇವಿನ ಕೊರತೆ ನೀಗಿಸಲಾಗುತ್ತಿದೆ. ಬಳ್ಳಾರಿ, ಕೊಪ್ಪಳ, ರಾಯದುರ್ಗ ಪ್ರದೇಶಗಳಿಂದ ಸಜ್ಜೆ, ಮೆಕ್ಕೆಜೋಳ ಸಪ್ಪೆಯ ಹಸಿ ಮೇವು ಪೂರೈಸಲಾಗುತ್ತಿದೆ. ತಾಲೂಕಿನಲ್ಲಿ ಮುಂದಿನ 8 ವಾರಗಳಿಗಾಗುವಷ್ಟು ಮೇವು ಇದ್ದು, ಮಳೆ ಬಂದು ಅಲ್ಲಲ್ಲಿ ಮೇವು ಚಿಗುರುತ್ತಿರುವ ಪರಿಣಾಮ ಮುಂದಿನ ದಿನಗಳಲ್ಲಿ ಮೇವಿನ ಕೊರತೆ ಆಗುವ ಸಂಭವವಿಲ್ಲ ಎಂದರು.

ಆಗ, ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ, ಅಗತ್ಯವಿದ್ದರೆ ಜಗಳೂರು ತಾಲೂಕಿನಲ್ಲಿ ಇನ್ನೊಂದು ಮೇವಿನ ಬ್ಯಾಂಕ್‌ ತೆರೆಯಿರಿ. ಅನುದಾನಕ್ಕಂತೂ ಕೊರತೆಯಿಲ್ಲ. ಎಲ್ಲಾ ತಾಲೂಕುಗಳಲ್ಲಿ ಗೋಶಾಲೆ ತೆರಯಲು ತಕ್ಷಣ ಅನುದಾನ ಬಿಡುಗಡೆ ಮಾಡಲಾಗುವುದು. ಮುಂಜಾಗ್ರತಾ ಕ್ರಮವಾಗಿ ಒಂದು ಅಥವಾ ಎರಡು ಟನ್‌ಗಳಷ್ಟು ಮೇವು ಸಂಗ್ರಹಿಸಿ, ಸಿಬ್ಬಂದಿ ನಿಯೋಜಿಸಿ, ರೈತರು ಬಂದರೆ ಮೇವು ನೀಡಿ. ಬಾರದಿದ್ದಲ್ಲಿ ಜಿಲ್ಲಾಡಳಿತ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

Advertisement

ಎಲ್ಲಾ ತಾಲೂಕಿನ ಇಓ ಮತ್ತು ತಹಶೀಲ್ದಾರ್‌ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ, ಮೇವಿನ ಕೊರತೆ-ಲಭ್ಯತೆ ಪರಿಶೀಲಿಸಬೇಕು. ಮೇವು ಬೇಕು ಎನ್ನುವ ರೈತರ ಹೆಸರು ನೋಂದಾಯಿಸಿಕೊಂಡು ಮೊಬೈಲ್ ಬ್ಯಾಂಕ್‌ ಮೂಲಕ ಮೇವು ಒದಗಿಸಿ. ಅಲ್ಲದೇ ಅಲ್ಲಿಯ ರೈತರಿಗೆ ಮಿನಿಕಿಟ್‌ನ ಮಾಹಿತಿ ನೀಡಿ, ಮಿನಿಕಿಟ್‌ಗಳನ್ನು ವಿತರಿಸಿ. ಮುಂದಿನ ದಿನಗಳಲ್ಲಿ ಅಲ್ಲಿನ ರೈತರಿಂದಲೇ ಮೇವು ಖರೀದಿಸುವ ವ್ಯವಸ್ಥೆ ಮಾಡಿಕೊಳ್ಳಿ. ಇದರಿಂದ ಹಣ ಉಳಿತಾಯವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಲಹೆ ನೀಡಿದರು.

ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಬಿ ಮುದುಗಲ್ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಶೇ.34ರಷ್ಟು ಮಳೆ ಕಡಿಮೆಯಾಗಿದೆ. ಜಿಲ್ಲೆಯಾದ್ಯಂತ ನೀರಾವರಿ ಪ್ರದೇಶದಲ್ಲಿ ಶೇ.5 ಹಾಗೂ ಬೆದ್ದಲು ಪ್ರದೇಶದಲ್ಲಿ ಶೇ.86ರಷ್ಟು ಬಿತ್ತನೆಯಾಗಿದೆ. ಕಳೆದ ಬಾರಿಗಿಂತ ಈ ಬಾರಿಯೂ ಮುಸುಕಿನ ಜೋಳ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಮಾಹಿತಿ ನೀಡಿದರು.

ಬೆಳೆವಿಮೆ ಯೋಜನೆಯಡಿ ಈ ಬಾರಿ ಜಿಲ್ಲೆಯಲ್ಲಿ 28 ಸಾವಿರ ರೈತರು ನೋಂದಾಯಿಸಿದ್ದಾರೆ. ಹಿಂದಿನ ವರ್ಷಗಳ ಬೆಳೆವಿಮೆಯ ಮಾಹಿತಿ ಹಾಗೂ ಬಾಕಿ ಹಣದ ಮಾಹಿತಿ ಮತ್ತು ಕಿಸಾನ್‌ ಸಮ್ಮಾನ್‌ ಯೋಜನೆ ಕುರಿತು ಸಭೆ ಗಮನಕ್ಕೆ ತಂದರು.

ನಗರ ಪ್ರದೇಶಗಳ ಕುಡಿಯುವ ನೀರು ಸರಬರಾಜು ಕುರಿತು ಮಾಹಿತಿ ನೀಡಿದ ಡಿ.ಯು.ಡಿ.ಸಿ. ಯೋಜನಾ ನಿರ್ದೇಶಕಿ ನಜ್ಮಾ, ನಗರ ಪ್ರದೇಶಗಳಲ್ಲಿ ಎಲ್ಲಿಯೂ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಲಾಗುತ್ತಿಲ್ಲ. ಸದ್ಯಕ್ಕೆ ದಾವಣಗೆರೆ ನಗರದಲ್ಲಿ 41 ವಾರ್ಡ್‌ಗಳಿಗೆ ವಾರಕೊಮ್ಮೆ ನೀರು ಸರಬರಾಜಾಗುತ್ತಿದೆ. ಇನ್ನುಳಿದ ಪ್ರದೇಶಗಳಲ್ಲಿ 5 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.

ಜಗಳೂರು ತಾಲ್ಲೂಕಿನಲ್ಲಿ ಇಂದಿಗೂ 77 ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕವೇ ನೀರು ಸರಬರಾಜು ಮಾಡಲಾಗುತ್ತಿದೆ. ದಾವಣಗೆರೆ ಗ್ರಾಮಾಂತರ ಪ್ರದೇಶಗಳಲ್ಲಿ ಚಾನೆಲ್ಗಳಿಗೆ ಭದ್ರಾ ಜಲಾಶಯದ ನೀರು ಬಿಡದ ಪರಿಣಾಮ 27 ಪ್ರದೇಶಗಳಲ್ಲಿ (ಅಣಜಿ, ಆನಗೋಡು, ಮಾಯಕೊಂಡ ಇತರೆ ಪ್ರದೇಶಗಳಲ್ಲಿ) ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಲಾಗುತಿತ್ತು. ಕೆಲವು ಪ್ರದೇಶಗಳಲ್ಲಿ ಬೋರ್‌ವೆಲ್ ಕೊರೆಸಲಾಗಿದ್ದು, ಪೈಪ್‌ಲೈನ್‌ ಮೂಲಕ ಸರಬರಾಜಿಗೆ ವ್ಯವಸ್ಥೆ ಮಾಡಲಾಗುವುದು ಎಂದರು.

ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿದ ಬಿಲ್ ಪಾವತಿಯಾಗಿದೆ. ಕೆಲವು ಜಿ.ಪಿ.ಎಸ್‌. ಸರಿಯಾಗಿ ಇಲ್ಲದಿರುವ ಕಡೆ ಹಣ ಮಂಜೂರು ಮಾಡಿಲ್ಲ. ಈಗಾಗಲೇ ಜಿಲ್ಲಾಡಳಿತ ತಂಡದಿಂದ ಪರಿಶೀಲಿಸಲಾಗಿದ್ದು, ಪುನಃ ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್‌ ತಿಮ್ಮಣ್ಣ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಜಿಲ್ಲಾ ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ‌ ವ್ಯವಸ್ಥಾಪಕ ಷರೀಫ್‌, ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಜಿಲ್ಲಾ ಸಂಖ್ಯಾಧಿಕಾರಿ ರಾಜೇಶ್ವರಿ, ವಿವಿಧ ತಾಲೂಕಿನ ತಹಶೀಲ್ದಾರ್‌, ಇತರೆ ಅಧಿಕಾರಿಗಳು ಸಭೆಯಲ್ಲಿದ್ದರು.

ಜಲಾಮೃತ ಯೋಜನೆ; ಪ್ರತಿ ಶಾಲೆಗೆ 5,000 ರೂ.

ಜಿಲ್ಲೆಯಲ್ಲಿ ಜಲಶಕ್ತಿ ಮತ್ತು ಜಲಾಮೃತ ಕಾರ್ಯಕ್ರಮದಡಿ ಶಾಲೆ, ಹಾಸ್ಟೆಲ್ ಹಾಗೂ ಸಾರ್ವಜನಿಕರಿಗೆ ಹೆಚ್ಚು ಅರಿವು ಮೂಡಿಸಿ, ಹಸಿರೀಕರಣಕ್ಕೆ ಒತ್ತು ನೀಡಿ. ಜಲಾಮೃತ ಕಾರ್ಯಕ್ರಮದಡಿ ಮುಂದಿನ ದಿನಗಳಲ್ಲಿ ಪ್ರತಿ ಶಾಲೆಗೆ 5,000 ರೂ. ಅನುದಾನ ನೀಡಲಿದ್ದು, ಈ ಅನುದಾನದಲ್ಲಿ ಕಿಚನ್‌ಗಾರ್ಡ್‌ನ್‌ ನಿರ್ಮಿಸಿ, ಅಲ್ಲಿನ ಮಕ್ಕಳಿಗೆ ಅನುಕೂಲವಾಗುವಂತೆ ಪಪ್ಪಾಯಿ, ನುಗ್ಗೆಕಾಯಿ, ಸಪೋಟ, ಮಾವು, ಹುಣಸೆ, ನೇರಳೆ ಮರ ಬೆಳೆಸಬೇಕು. ಈ ಕುರಿತು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸಹಕಾರದೊಂದಿಗೆ ಕ್ರಿಯಾಯೋಜನೆ ರೂಪಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್‌ ಸಲಹೆ ನೀಡಿದರು.
ಅಧಿಕಾರಿಗಳ ನಡೆ ಹಳ್ಳಿಯ ಕಡೆ:

ಜಗಳೂರು ತಾಲೂಕಿನಲ್ಲಿ ಅಧಿಕಾರಿಗಳ ನಡೆ ಹಳ್ಳಿಯ ಕಡೆ…ಕಾರ್ಯಕ್ರಮದ ಮೂಲಕ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ, ಅಹವಾಲು ಆಲಿಸಿ, ಅವುಗಳಿಗೆ ವಾರದಲ್ಲಿಯೇ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗಿತ್ತು. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಉದ್ಯೋಗಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ಹೆಚ್ಚಿನ ಗಮನಹರಿಸಿ ಸಮಸ್ಯೆ ಬಗೆಹರಿಸಲಾಯಿತು. ಮುಂದಿನ ದಿನಗಳಲ್ಲಿ ಇನ್ನುಳಿದ ತಾಲೂಕುಗಳಿಗೂ ಭೇಟಿ ನೀಡಿ, ಸಮಸ್ಯೆ ಪರಿಹಾರಕ್ಕೆ ಮುಂದಾಗಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ ಸಭೆಯಲ್ಲಿ ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next