ಗೋರಿಗುಡ್ಡೆ: ರಾಷ್ಟ್ರೀಯ ಹೆದ್ದಾರಿ 66ರ ಪಂಪ್ ವೆಲ್ – ಎಕ್ಕೂರು ಹೆದ್ದಾರಿ ನಡುವಿನ ಬಹುಚರ್ಚಿತ ಗೋರಿಗುಡ್ಡೆಯಲ್ಲಿರುವ ಗುಡ್ಡ ತೆರವುಗೊಳಿಸುವ ಕಾಮಗಾರಿ ಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆರಂಭಿಸಿದೆ. ಈ ಮೂಲಕ ಸ್ಥಳೀಯರ ಬಹುಬೇಡಿಕೆಯ ಸರ್ವಿಸ್ ರಸ್ತೆಗೆ ಕಾಯಕಲ್ಪ ದೊರೆಯಲಿದೆ.
ಸುಮಾರು 12 ವರ್ಷಕ್ಕೂ ಹಿಂದೆ ತಲಪಾಡಿ – ಮಂಗಳೂರು ಹೆದ್ದಾರಿ ಕಾಮಗಾರಿ ನಡೆದಿದ್ದರೂ, ಗೋರಿಗುಡ್ಡೆಯಲ್ಲಿ ಗುಡ್ಡ ತೆರವು ಮಾಡದ ಕಾರಣದಿಂದ ಹೆದ್ದಾರಿ ವಿಸ್ತರಣೆ/ಸರ್ವಿಸ್ ರಸ್ತೆ ಆಗಿರಲಿಲ್ಲ. ಈ ಕಾರಣದಿಂದ ಪಂಪ್‌ವೆಲ್‌ನಿಂದ ಎಕ್ಕೂರು ಕಡೆಗೆ ಸುಮಾರು 1 ಕಿ.ಮೀ. ಉದ್ದಕ್ಕೆ ಮಾತ್ರ ಸರ್ವಿಸ್ ರಸ್ತೆ ಕಾಮಗಾರಿ ನಡೆಸಲಾಯಿತಾದರೂ ಗುಡ್ಡ ಇರುವುದರಿಂದ ಸರ್ವಿಸ್ ರಸ್ತೆಯನ್ನು ಅಲ್ಲಿಗೆ ಸ್ಥಗಿತಗೊಳಿಸಲಾಗಿತ್ತು.
ಇದೀಗ ಪಂಪ್‌ವೆಲ್‌ನಿಂದ ಗೋರಿ ಗುಡ್ಡೆಯವರೆಗೆ ಮಾತ್ರ ಇರುವ ಸರ್ವಿಸ್ ರಸ್ತೆಯನ್ನು ಎಕ್ಕೂರುವರೆಗೂ ವಿಸ್ತರಿಸಲಾಗುತ್ತಿದೆ. ಇದಕ್ಕಾಗಿ ತೊಡಕಾಗಿದ್ದ ಗುಡ್ಡ ತೆರವು ಮಾಡುವ ಕೆಲಸ ಶುರು ಮಾಡಲಾಗಿದೆ. ಈ ಮೂಲಕ ಸಂಚಾರಕ್ಕೆ ಅನುಕೂಲವಾಗಲು ಎಕ್ಕೂರು – ಪಂಪ್‌ವೆಲ್ ಮಧ್ಯೆ ರಸ್ತೆ ವಿಸ್ತರಣೆ ಸಾಕಾರವಾಗಲಿದೆ.
ರಸ್ತೆಗೆ ಸಮಸ್ಯೆಯಾಗದಂತೆ ಕ್ರಮ ಶಾಸಕ ವೇದವ್ಯಾಸ ಕಾಮತ್ ಅವರು “ಸುದಿನ’ ಜತೆಗೆ ಮಾತನಾಡಿ, ಗೋರಿಗುಡ್ಡೆಯಲ್ಲಿ ಬಹುಕಾಲದಿಂದ ಸಮಸ್ಯೆ ಆಗಿದ್ದ ಗುಡ್ಡ ತೆರವು ಮಾಡುವ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದೆ. ಸ್ಥಳೀಯವಾಗಿ ಇಲ್ಲಿ ಎರಡು ರಸ್ತೆಗಳಿದ್ದು, ಅವರಿಗೆ ಯಾವುದೇ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ರಾ. ಹೆದ್ದಾರಿ ಪ್ರಾಧಿಕಾರದವರಿಗೆ ಸೂಚನೆ ನೀಡಲಾಗಿದೆ. ಈ ಕುರಿತಂತೆ ಸ್ಥಳೀಯರು, ಪಾಲಿಕೆ ಸದಸ್ಯರ ಜತೆಗೂ ಸಭೆ ನಡೆಸಲಾಗಿದೆ ಎಂದರು.
ಗೋರಿಗುಡ್ಡೆ ಭಾಗದಲ್ಲಿರುವ ಉಳ್ಳಾಲಕ್ಕೆ ಸಂಪರ್ಕವಿರುವ ನೀರಿನ ಪೈಪ್‌ಲೈನ್ ಅನ್ನು ತೆರವುಗೊಳಿಸಿ ಅದಕ್ಕೆ ಪ್ರತ್ಯೇಕ ಪೈಪ್‌ಲೈನ್ ಹಾಕಿ ಸರ್ವಿಸ್ ರಸ್ತೆ ಮಾಡಲಾಗುತ್ತದೆ. ನೀರಿನ ಪೈಪ್‌ಲೈನ್ ತೆರವು, ಹೊಸದಾಗಿ ಜೋಡಣೆಯನ್ನು ಕೂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ನಡೆಸಲಿದೆ. ಅಪಾಯಕಾರಿ ಜಂಕ್ಷನ್ ಗೋರಿಗುಡ್ಡೆ ಜಂಕ್ಷನ್ ಬಳಿ ಹೆದ್ದಾರಿ ಅಗಲವೇ ಕಿರಿದಾಗಿತ್ತು. ಇಲ್ಲಿ ಹೆದ್ದಾರಿ ನಿರ್ಮಾಣವೂ ಸಮರ್ಪಕವಾಗಿ ನಡೆದಿಲ್ಲ. ಪಂಪ್‌ವೆಲ್ ಕಡೆಯಿಂದ ಎಕ್ಕೂರು ಕಡೆಗೆ ಸಾಗುವ ಸರ್ವಿಸ್ ರಸ್ತೆ ಗೋರಿಗುಡ್ಡೆಗಿಂತ ಮೊದಲೇ ಅರ್ಧಕ್ಕೆ ಸ್ಥಗಿತಗೊಂಡಿದೆ. ಈ ಸರ್ವಿಸ್ ರಸ್ತೆಯಿಂದ ಹೆದ್ದಾರಿ ಪ್ರವೇಶಿಸುವ ಸ್ಥಳ ಅಪಾಯಕಾರಿ. ಸರ್ವಿಸ್ ರಸ್ತೆ ಕೆಳಮಟ್ಟದಲ್ಲಿದ್ದು, ಅಲ್ಲಿಂದ ಹೆದ್ದಾರಿ ಪ್ರವೇಶಿಸುವಾಗ ವಾಹನಗಳು ವೇಗ ಹೆಚ್ಚಿಸಿಕೊಳ್ಳುತ್ತವೆ. ಇತ್ತ ನಂತೂರು ಕಡೆಯಿಂದ ಹೆದ್ದಾರಿಯಲ್ಲಿ ಬರುವ ವಾಹನಗಳು ಸಹಜವಾಗಿಯೇ ವೇಗವಾಗಿ ಧಾವಿಸುತ್ತವೆ. ಈ ಎರಡೂ ರಸ್ತೆಗಳು ಸಂಧಿಸುವ ಸ್ಥಳದಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಈ ಮಧ್ಯೆ ಇಲ್ಲಿ ಗುಡ್ಡ ಕುಸಿಯುವ ಅಪಾಯವೂ ಇತ್ತು.
ಉಳ್ಳಾಲದ ನೀರಿನ ಪೈಪ್‌ಲೈನ್ ಕಗ್ಗಂಟು!
ತುಂಬೆ ವೆಂಟೆಡ್‌ಡ್ಯಾಂನಿಂದ ಉಳ್ಳಾಲ ವ್ಯಾಪ್ತಿಗೂ ಕುಡಿಯುವ ನೀರಿನ ಸಂಪರ್ಕವಿದೆ. ನಿತ್ಯ ಸುಮಾರು 1.60 ಎಂಎಲ್‌ಡಿ ನೀರು ಸರಬರಾಜಾಗುತ್ತದೆ. ತುಂಬೆಯಿಂದ ಸರಬರಾಜಾದ ನೀರು ಪಡೀಲ್‌ನ ಪಂಪ್ ಹೌಸ್‌ನಲ್ಲಿ ಸಂಗ್ರಹವಾಗಿ ಅಲ್ಲಿಂದ ಪ್ರತ್ಯೇಕ ಪೈಪ್‌ಲೈನ್ ಮೂಲಕ ಉಳ್ಳಾಲಕ್ಕೆ ಸರಬರಾಜು ಮಾಡಲಾಗುತ್ತದೆ. ಎಡಿಬಿ 1 ಯೋಜನೆಯಡಿ 2009ರಲ್ಲಿ ಈ ಪೈಪ್‌ಲೈನ್ ಅಳವಡಿಸಲಾಗಿತ್ತು. 500 ಎಂಎಂ ವ್ಯಾಸದ ಈ ಪೈಪ್ ಗೋರಿಗುಡ್ಡೆಯಲ್ಲಿ ಅಳವಡಿಸಲಾಗಿದೆ. ಇಲ್ಲಿ ಎತ್ತರ ಪ್ರದೇಶವಿರುವ ಕಾರಣದಿಂದ ಪೈಪ್‌ಲೈನ್ ಅನ್ನು 7 ಮಾದರಿಯಲ್ಲಿ ಅಳವಡಿಸಲಾಗಿದೆ. ಹೀಗಾಗಿ ಗುಡ್ಡ ತೆರವು ಮಾಡುವ ಸಂದರ್ಭ ಸವಾಲು ಎದುರಾಗಿದೆ.
ಗುಡ್ಡ ತೆರವು ಆರಂಭ
ರಾಷ್ಟ್ರೀಯ ಹೆದ್ದಾರಿಯ ಗೋರಿಗುಡ್ಡದಲ್ಲಿ ಗುಡ್ಡ ತೆರವು ಮಾಡದ ಕಾರಣದಿಂದ ಹೆದ್ದಾರಿ ವಿಸ್ತರಣೆ/ಸರ್ವಿಸ್ ರಸ್ತೆ ಆಗಿರಲಿಲ್ಲ. ಇದೀಗ ಗುಡ್ಡ ತೆರವು ಮಾಡುವ ಕಾರ್ಯ ಆರಂಭಿಸಲಾಗಿದೆ. ನೀರಿನ ಪೈಪ್‌ಲೈನ್ ಕೂಡ ಪ್ರಾಧಿಕಾರದಿಂದಲೇ ತೆರವು ಮಾಡಲಾಗುತ್ತದೆ.
-ಲಿಂಗೇಗೌಡ, ಯೋಜನ ನಿರ್ದೇಶಕರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ-ಮಂಗಳೂರು
ದಿನೇಶ್ ಇರಾ