Advertisement
ಪ್ರಧಾನ ಅರ್ಚಕ ಡಾ. ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಮುಂಜಾನೆ ದೇವಿಗೆ ಮಹಾನ್ಯಾಸ ರುದ್ರಾಭಿಷೇಕ, ಪಂಚಾಭಿಷೇಕ ಸೇರಿದಂತೆ ನಾನಾ ಪೂಜಾ ಕಾರ್ಯಗಳು ನಡೆದವು. ನಂತರ ದೇವಿಯ ದರ್ಶನಕ್ಕಾಗಿ ಬೆಳಗ್ಗೆ 8ರಿಂದ ರಾತ್ರಿ 9ರವರೆಗೆ ಭಕ್ತರು ದೇವಿಯ ದರ್ಶನ ಪಡೆದರು. ಹರಕೆ ಹೊತ್ತಿದ್ದ ಮಹಿಳೆಯರು ದೀಪದಾರತಿ ಬೆಳಗಿ ಹರಕೆ ತೀರಿಸಿದರು.
Related Articles
Advertisement
ಭಕ್ತರ ಸಂಖ್ಯೆ ವಿರಳ: ಮೊದಲ ಹಾಗೂ ಎರಡನೇ ಆಷಾಢ ಶುಕ್ರವಾರಕ್ಕೆ ಹೋಲಿಸಿದರೆ, ಬುಧವಾರ ನಡೆದ ಚಾಮುಂಡೇಶ್ವರಿ ವರ್ಧಂತ್ಯೋತ್ಸವದಲ್ಲಿ ಭಕ್ತರ ಸಂಖ್ಯೆ ಕಡಿಮೆಯಿತ್ತು. ಹೆಚ್ಚು ಸರತಿ ಸಾಲು ಇಲ್ಲದ ಪರಿಣಾಮ, ಭಕ್ತರು ಬಹು ಬೇಗನೆ ದೇವಿಯ ದರ್ಶನ ಹಾಗೂ ಪಲ್ಲಕ್ಕಿ ಉತ್ಸವ ನೋಡಿಕೊಂಡು ತೆರಳಿದರು. ದಾಸೋಹ ಭವನ, ಸರತಿ ಸಾಲು, ಬೆಟ್ಟದ ಆವರಣ, ಬಸ್ ನಿಲ್ದಾಣದಲ್ಲಿ ನಿರೀಕ್ಷಿಸಿದಷ್ಟು ಜನಜಂಗುಳಿ ಇಲ್ಲದೇ, ಜನಸಂಖ್ಯೆ ವಿರಳವಾಗಿತ್ತು.
ಬಸ್ ವ್ಯವಸ್ಥೆ: ಹೆಲಿಪ್ಯಾಡ್‌ನಿಂದ ಚಾಮುಂಡಿಬೆಟ್ಟಕ್ಕೆ ಭಕ್ತರನ್ನು ಕರೆದೊಯ್ಯಲು ಜಿಲ್ಲಾಡಳಿತ 22ಕ್ಕೂ ಹೆಚ್ಚು ಉಚಿತ ಬಸ್ ವ್ಯವಸ್ಥೆಯನ್ನು ಮಾಡಿತ್ತು. ಇದರೊಂದಿಗೆ ನಗರ ಬಸ್ ನಿಲ್ದಾಣದಿಂದ 10 ವೋಲ್ವೋ ಬಸ್, 35 ಸಾಮನ್ಯ ಬಸ್ ವ್ಯವಸ್ಥೆ ಕಲ್ಪಿಸಿತ್ತು. ಪ್ರತಿ ಐದು ನಿಮಿಷಕ್ಕೊಂದು ಬಸ್ ಚಾಮುಂಡಿಬೆಟ್ಟಕ್ಕೆ ಹೊರಡುವ ವ್ಯವಸ್ಥೆಯನ್ನು ಮಾಡಿತ್ತು.
ಬಿಗಿ ಬಂದೋಬಸ್ತ್: ಅಧಿಕ ಸಂಖ್ಯೆಯಲ್ಲಿ ಭಕ್ತರು ಏಕಕಾಲಕ್ಕೆ ಚಾಮುಂಡಿಬೆಟ್ಟಕ್ಕೆ ಆಗಮಿಸುವುದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅಲ್ಲದೆ ಗುಂಪು ಚದುರಿಸಲು ಅಶ್ವರೋಹಿ ದಳದ ಸಿಬ್ಬಂದಿ ನಿಯೋಜಿಸಲಾಗಿತ್ತು. ಸರಗಳ್ಳರು, ಜೇಬುಗಳ್ಳರ ಕೃತ್ಯಕ್ಕೆ ಬ್ರೇಕ್ ಹಾಕಲು ಮಫ್ತಿಯಲ್ಲಿ ಪೊಲೀಸರ ಗಸ್ತು ಆಯೋಜಿಸಲಾಗಿತ್ತು.
ಸರಗಳ್ಳರ ಕೈಚಳಕ: ಚಾಮುಂಡಿಬೆಟ್ಟದಲ್ಲಿ ವರ್ಧಂತಿ ಉತ್ಸವದ ವೇಳೆ ಸರಗಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಚಿನ್ನದ ಪಲ್ಲಕ್ಕಿ ಉತ್ಸವ ನಡೆಯುವ ವೇಳೆ ವೃದ್ಧೆಯೊಬ್ಬರ ಚಿನ್ನದ ಸರ ಲಪಟಾಯಿಸಿದ್ದಾರೆ. ಸಿದ್ದಾರ್ಥ ನಗರದ ನಿವಾಸಿ ಚಾಮಮ್ಮ (75) ಅವರು ಉತ್ಸವ ನೋಡುತ್ತಾ ಕೈ ಮುಗಿಯುತ್ತಿದ್ದಾಗ ಕಳ್ಳರು 35 ಗ್ರಾಂ ಚಿನ್ನದ ಸರ ಕಸಿದು ಪರಾರಯಾಗಿದ್ದಾರೆ. ಈ ಸಂಬಂಧ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಸೋಹ ಭವನದಲ್ಲಿ ಪ್ರಸಾದ: ಬೆಂಗಳೂರು ಮೂಲದ ಉದ್ಯಮಿ ನಾಗಾರ್ಜುನ್ ಅವರು ದಾಸೋಹ ಭವನದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದ್ದರು. ಇವರು ಕಳೆದ ಐದು ವರ್ಷಗಳಿಂದ ಚಾಮುಂಡೇಶ್ವರಿ ವರ್ಧಂತಿಯಂದು ಪ್ರಸಾದ ಸಂತರ್ಪಣೆ ಮಾಡುತ್ತಾ ಬಂದಿದ್ದಾರೆ. ಅನ್ನಸಂತರ್ಪಣೆ ಬೆಳಗ್ಗೆಯಿಂದ ರಾತ್ರಿರವರೆಗೂ ನಡೆಯಿತು.
ಬೆಳಗ್ಗೆ ಕೇಸರಿಬಾತ್, ಉಪ್ಪಿಟ್ಟು, ಮೊಸರನ್ನ, ಪಲಾವ್, ಬಿಸಿಬೇಳೆ ಬಾತ್ ಹಾಗೂ ಮಧ್ಯಾಹ್ನ ಹೋಳಿಗೆ ಊಟದ ವ್ಯವಸ್ಥೆಯನ್ನು ಮಾಡಿದ್ದರು. ಜತೆಗೆ ಬೆಟ್ಟದ ಬಸ್ ನಿಲ್ದಾಣದ ಬಳಿ ದೇವಿಗೆ ಹರಕೆ ಹೊತ್ತಿದ್ದ ಸಾರ್ವಜನಿಕರು ಆಟೋ ಮತ್ತು ಕಾರುಗಳ ಮೂಲಕ ಭಕ್ತರಿಗೆ ಪ್ರಸಾದ ವಿತರಿಸಿದರು.