Advertisement

ವೈಭವದ ಕೊಟ್ಟೂರೇಶ್ವರ ರಥೋತ್ಸವ

12:20 PM Feb 12, 2018 | |

ಕೊಟ್ಟೂರು: ರಾಜ್ಯದ ಸುಪ್ರಸಿದ್ಧ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ ಭಾನುವಾರ ಮೂಲಾ ನಕ್ಷತ್ರದ ಶುಭ ಮುಹೂರ್ತದಲ್ಲಿ ಸಂಜೆ 5.15ಕ್ಕೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

Advertisement

ಕಳೆದ ವರ್ಷ ರಥೋತ್ಸವದ ವೇಳೆ ನಡೆದ ಅವಘಡದ ನಂತರ ಹೊಸ ರಥ ನಿರ್ಮಿಸಲಾಗಿತ್ತು. ಈ ರಥದ ಮೂಲಗಡ್ಡೆ, ಚಕ್ರ ಸೇರಿ ಎಲ್ಲವನ್ನೂ ನುರಿತ ಶಿಲ್ಪಿಗಳು ಕೇವಲ ಒಂದು ವರ್ಷದಲ್ಲಿ ಹೊಸದಾಗಿ ನಿರ್ಮಿಸಿದ್ದರು. ಕಳೆದ ವರ್ಷ ನಡೆದ ಅವಘಢ ಮರೆತು ಲಕ್ಷಾಂತರ ಭಕ್ತರು 64 ಅಡಿ ಎತ್ತರದ ಹೊಸ ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು.

ಶ್ರೀ ಸ್ವಾಮಿಯ ನೂತನ ರಥವನ್ನು ವಿವಿಧ ಬಗೆಯ ಫಲಪುಷ್ಪಗಳೊಂದಿಗೆ ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ರಥೋತ್ಸವದದ ಅಂಗವಾಗಿ ಹಲವು ಧಾರ್ಮಿಕ ವಿವಿಧಿವಿಧಾನಗಳು ನಡೆದವು.

ದಲಿತ ಮಹಿಳೆಯಿಂದ ಆರತಿ: ಅರ್ಚಕರು ಪೂಜೆ ಸಲ್ಲಿಸಿದ ನಂತರ ಕೊಟ್ಟೂರೇಶ್ವರರ ಉತ್ಸವ ಮೂರ್ತಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿಟ್ಟು ಸಮಾಳ ನಂದಿಕೋಲು ಮತ್ತಿತರ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಐದು ದಿನಗಳ ಕಾಲ ಶ್ರೀಸ್ವಾಮಿಗೆ ಹರಕೆ ಹೊತ್ತು ಉಪವಾಸ ನಡೆಸಿದ ದಲಿತ ಮಹಿಳೆ ದುರುಗಮ್ಮ ಶ್ರೀಸ್ವಾಮಿಗೆ ಕಳಸದಾರತಿ ಬೆಳಗಿದಳು.

ನಂತರ ಪಲ್ಲಕ್ಕಿ ತೇರು ಬಜಾರ್‌ ಮೂಲಕ ಸಂಚರಿಸಿ ರಥಬೀದಿಗೆ ತಲುಪಿತು. ನಂತರ ರಥಕ್ಕೆ ಐದು ಪ್ರದಕ್ಷಿಣೆ ಹಾಕಿದ ನಂತರ ಉತ್ಸವ ಮೂರ್ತಿಯನ್ನು ರಥದೊಳಗೆ ಪ್ರತಿಷ್ಠಾಪಿಸಲಾಯಿತು. ಕೊಟ್ಟೂರೇಶ್ವರ ಸ್ವಾಮಿ ರಥಾರೂಢರಾಗುತ್ತಿದ್ದಂತೆ “ಕೊಟ್ಟೂರೇಶ್ವರ ದೊರೆಯೇ, ನಿನಗಾರು ಸರಿಯೇ, ಸರಿ ಸರಿ ಎಂದವರ ಹಲ್ಲು ಮುರಿಯೇ ಬಹುಪರಾಕ್‌’ ಎಂಬ ಘೋಷಣೆ ಮುಗಿಲು ಮುಟ್ಟಿತು.

Advertisement

ದೈವ ಪ್ರೇರಣೆಯಂತೆ ಕ್ಷಣ ಮಾತ್ರದಲ್ಲಿ ರಥ ಮುಂದೆ ಸಾಗುತ್ತಿದ್ದಂತೆ ಲಕ್ಷಾಂತರ ಭಕ್ತರು ಮಿಣಿ ಹಿಡಿದೆಳೆದು ಸಂಭ್ರಮಿಸಿದರು. ರಥ ಸಾಗುತ್ತಿದ್ದಂತೆ ಭಕ್ತರು ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ನಂದಿಕೋಲು, ಸಮಾಳ, ಮಂಗಳವಾದ್ಯಗಳು ರಥೋತ್ಸವದ ಮೆರಗು ಹೆಚ್ಚಿಸಿದ್ದವು. ಲಕ್ಷಾಂತರ ಜನ ರಥಬೀದಿಯ ಇಕ್ಕೆಲಗಳಲ್ಲಿ ನಿಂತು ಹೊಸ ರಥವನ್ನು ವೀಕ್ಷಿಸಿ ಪುಳಕಿತರಾದರು.

ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಪಾದಯಾತ್ರೆ ಮೂಲಕ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರು. ನೂತನ ರಥವು ರಥ ಬೀದಿಯಲ್ಲಿ ಸಾಗಿ ಪುನಃ ಕೇಂದ್ರ ಸ್ಥಾನಕ್ಕೆ ಸರಾಗವಾಗಿ ಬಂದು ತಲುಪಿತು. ರಥೋತ್ಸವದ ಮಿಣಿ (ಹಗ್ಗ) ಎಳೆಯಲು ಜನಸಾಗರ ಮುಗಿ ಬಿದ್ದು ನೂಕು ನುಗ್ಗಲು ಉಂಟಾದರೂ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಸಲಿಲ್ಲ.

ಉಜ್ಜಯಿನಿ ಜಗದ್ಗುರು ಶ್ರೀಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ, ಕ್ರಿಯಾಮೂರ್ತಿ ಶಂಕರ ಸ್ವಾಮೀಜಿ, ಚಾನುಕೋಟಿ ಮಠಾಧ್ಯಕ್ಷ ಡಾ| ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ನಂದಿಪುರ ಮಹೇಶ್ವರ ಸ್ವಾಮೀಜಿ, ಶಾಸಕ ಎಸ್‌.ಭೀಮಾನಾಯ್ಕ, ಜಿಲ್ಲಾಧಿಕಾರಿ ಡಾ| ರಾಮ್‌ಪ್ರಸಾತ್‌ ಮನೋಹರ್‌, ಎಸ್‌ಪಿ ಆರ್‌.ಚೇತನ್‌, ಜಿಪಂ ಸದಸ್ಯ ಎಂ.ಎಂ.ಜೆ.ಹರ್ಷವರ್ಧನ್‌, ಪಪಂ ಅಧ್ಯಕ್ಷ ಅನಿಲ್‌ ಹೊಸಮನಿ, ಸದಸ್ಯರಾದ ಬಿ.ಎಸ್‌.ವೀರೇಶ್‌, ಕರಡಿ ಕೊಟ್ರಯ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next