ಗೊರೇಬಾಳ : ಉಪ್ಪಳ, ಮುಕುಂದ, ಸಿಂಗಪುರ, ಹಾಗೂ ಇತರೆಡೆ ಸೋಮವಾರ ರಾತ್ರಿ ಸುರಿದ ಅಕಾಲಿಕ ಆಲಿಕಲ್ಲು ಮಳೆಗೆ ಅಪಾರ ಪ್ರಮಾಣದ ಭತ್ತ ಹಾನಿಯಾಗಿದೆ. ಕೃಷಿ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಸರ್ವೇ ಕಾರ್ಯ ಆರಂಭಿಸಿದೆ. ಸುಮಾರು ಸಾವಿರ ಎಕರೆ ಪ್ರದೇಶದ ಭತ್ತ ಆಲಿಕಲ್ಲು ಮಳೆಗೆ ಧರೆಗುರುಳಿದೆ. ಇನ್ನೂ ವಾರದಲ್ಲಿ ಕಟಾವು ಮುಗಿದು ಇನ್ನೇನು ರೈತನ ಕೈಸೇರಿತು ಎನ್ನುವಷ್ಟರಲ್ಲಿ ಅಕಾಲಿಕ ಆಲಿಕಲ್ಲು ಮಳೆಗೆ ಮಣ್ಣು ಪಾಲಾಗಿದೆ.
ರೈತರ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ. ಕೊಪ್ಪಳ ಸಂಸದ ಸಂಗಣ್ಣ ಕರಡಿ, ಶಾಸಕ ವೆಂಕಟರಾವ ನಾಡಗೌಡ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಕಾಡಾ ಅಧ್ಯಕ್ಷ ಬಸನಗೌಡ ತುರ್ವಿಹಾಳ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವಿರುಪಾಪುರ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಸಂಗಣ್ಣ ಕರಡಿ, ಅಕಾಲಿಕ ಆಲಿಕಲ್ಲು ಮಳೆಗೆ ಅಪಾರ ಪ್ರಮಾಣದ ಭತ್ತ ಹಾನಿಯಾಗಿದೆ. ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸರ್ವೇ ನಡೆಸುತ್ತಿದ್ದಾರೆ. ಕಳೆದ ವಾರದ ಹಿಂದೆ ಬಿರುಗಾಳಿ ಮಳೆಗೆ ಹಾನಿಯಾದ ಭತ್ತಕ್ಕೆ ಈಗಾಗಲೇ ರಾಜ್ಯ ಸರ್ಕಾರದಿಂದ ಪ್ರತಿ ಹೆಕ್ಟೇರ್‌ಗೆ 13,500 ರೂ. ಪರಿಹಾರ ಘೋಷಣೆಯಾಗಿದೆ. ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ರೈತರಿಗೂ ಪರಿಹಾರ ಕೊಡಲಾಗುವುದು. ಹೆಚ್ಚಿನ ಪರಿಹಾರ ರೈತರು ನಿರೀಕ್ಷೆ ಮಾಡುತ್ತಿದ್ದಾರೆ. ಆದರೆ ಕೊರೊನಾ ವೈರಸ್‌ನಿಂದ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಹೆಚ್ಚಿನ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಪರಮೇಶ ಆದಿಮನಿ, ತಹಶೀಲ್ದಾರ್ ಮಂಜುನಾಥ ಭೋಗಾವತಿ, ಸಹಾಯಕ ಕೃಷಿ ನಿರ್ದೇಶಕ ಟಿ.ಸಿ. ಜಯಪ್ರಕಾಶ ಇದ್ದರು.