ಚಾಮರಾಜನಗರ: ದೀಪಗಳ ಹಬ್ಬ ದೀಪಾವಳಿ ಸಂದರ್ಭದಲ್ಲಿ ನಾಡಿನ ವಿವಿಧ ಪ್ರದೇಶಗಳಲ್ಲಿ ವಿಶಿಷ್ಟ ಆಚರಣೆಗಳನ್ನು ನಡೆಸಲಾಗುತ್ತದೆ. ಪಟಾಕಿ, ದೀಪ ಹಚ್ಚುವುದು ಮಾತ್ರವಲ್ಲದೇ ಬೇರೆ ರೀತಿಯ ಹಬ್ಬಗಳೂ ನಡೆಯುತ್ತವೆ. ಈ ರೀತಿಯ ವೈಶಿಷ್ಟ್ಯವಿರುವ ಹಬ್ಬ ಜಿಲ್ಲೆಗೆ ಸಮೀಪ ಇರುವ ತಮಿಳುನಾಡಿನ ತಾಳವಾಡಿಯ ಗುಮಟಾಪುರ ಗ್ರಾಮದಲ್ಲಿ ನಡೆಯುವ ಗೊರೆ ಹಬ್ಬ.
ಜನರು ಪರಸ್ಪರರ ಮೇಲೆ ಸೆಗಣಿ ಎರಚಾಡುತ್ತಾ, ಸಡಗರ ಸಂಭ್ರಮದಿಂದ ಸೆಗಣಿಯಲ್ಲೇ ಹೊಡೆದಾಡುವ ವಿಶಿಷ್ಟವಾದ ಗೊರೆ ಹಬ್ಬವನ್ನು ಅಚ್ಚಕನ್ನಡಿಗರು ವಾಸಿಸುವ ತಮಿಳುನಾಡಿಗೆ ಸೇರಿದ ಗುಮಟಾಪುರದಲ್ಲಿ ಹಲವಾರು ತಲೆಮಾರುಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ಪ್ರತಿ ವರ್ಷದ ದೀಪಾವಳಿಯ ಬಲಿಪಾಡ್ಯಮಿ ಮುಗಿದ ಮಾರನೇ ದಿನ ಈ ಗೊರೆಹಬ್ಬ ನಡೆಯುತ್ತದೆ. ಪಂಚಾಗ ನೋಡುವ ಹಾಗಿಲ್ಲ, ಯಾವ ನಕ್ಷತ್ರ ತಿಥಿ ಎಂಬ ಗೊಡವೆಯಿಲ್ಲ. ಬಲಿಪಾಡ್ಯಮಿಯ ಮಾರನೆಯ ದಿನ ಈ ಗ್ರಾಮದಲ್ಲಿ ಗೊರೆ ಹಬ್ಬ ನಡೆಯುತ್ತದೆ. ಗ್ರಾಮದ ಪುರುಷರು ಸಗಣಿಯ ಗುಡ್ಡೆಯಲ್ಲಿ ನಿಂತು ಪರಸ್ಪರ ಸೆಗಣಿಯನ್ನು ಎರಚಿಕೊಂಡು, ಉಂಡೆ ಮಾಡಿ ಎಸೆದುಕೊಂಡು ವಿನೋದ ಪಡುವ ಹಬ್ಬವೇ ಗೊರೆ ಹಬ್ಬ.
ಈ ಬಾರಿ ಬಲಿಪಾಡ್ಯಮಿಯ ಮಾರನೆಯ ದಿನ ಅಂದರೆ ಮಂಗಳವಾರ ಗ್ರಾಮದಲ್ಲಿ ಈ ಹಬ್ಬ ನಡೆಯುತ್ತದೆ. ಅಂದು ಮಧ್ಯಾಹ್ನ ಹಬ್ಬದ ಆಚರಣೆಗಳು ಶುರುವಾಗುತ್ತದೆ. ಗ್ರಾಮದ ಕೆರೆ ಪಕ್ಕದಲ್ಲಿರುವ ಕಾರಪ್ಪ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಕೆರೆಯಿಂದ ಕೊಂಡಕ್ಕಾರ ಎಂಬ ವೇಷ ಧರಿಸಿದ ಇಬ್ಬರನ್ನು ಕತ್ತೆಯ ಮೇಲೆ ಕೂರಿಸಿಕೊಂಡು ಸಗಣಿ ಗುಡ್ಡೆ ಹಾಕಿರುವ ಜಾಗಕ್ಕೆ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ. ಕೊಂಡಕ್ಕಾರ ಕೃತಕ ಗಡ್ಡ ಮೀಸೆ ಧರಿಸಿ ಅಶ್ಲೀಲ ಸಂಜ್ಞೆ ಮಾಡುತ್ತಿರುತ್ತಾರೆ. ನಗು ತಮಾಷೆಯ ನಡುವೆ ಮೆರವಣಿಗೆ ಸಾಗುತ್ತದೆ.
ಇದನ್ನೂ ಓದಿ:ರಸ್ತೆಯಿಲ್ಲದ ಗದ್ದೆಯಲ್ಲಿ ಬಂದು ನಿಂತಿದೆ ಮಾಯಾವಿ ಕಾರು! ಪರ್ಕಳದ ಗದ್ದೆಯಲ್ಲಿ ನಿಗೂಢ ಕಾರು!
ಇದಕ್ಕೂ ಮೊದಲು ಗ್ರಾಮದ ಗೋವುಗಳು ಹಾಕಿದ ಸಗಣಿಯನ್ನು ಮನೆ ಮನೆಗಳಿಂದ ಸಗಣಿ ಗುಡ್ಡೆಗಳಿಂದ ತಂದು ಬೀರೇಶ್ವರ ದೇವಸ್ಥಾನದ ಬಳಿ ಸುರಿಯಲಾಗುತ್ತದೆ. ಸೆಗಣಿಯನ್ನು ಚಾಮರಾಜನಗರ ಪ್ರದೇಶದಲ್ಲಿ ತೊಪ್ಪೆ ಎಂದು ಕರೆಯುತ್ತಾರೆ. ಮಕ್ಕಳು ಬೇರೆ ಮನೆಗಳಿಂದ ಬೇಡಿ ತಂದ ಎಣ್ಣೆಯಿಂದ ಪೂಜೆ ಸಲ್ಲಿಸುತ್ತಾರೆ.
ನಂತರ ಮಧ್ಯಾಹ್ನ 3 ಗಂಟೆ ಸಮಯಕ್ಕೆ ಗ್ರಾಮದ ಬೀರೇಶ್ವರ ದೇವಾಲಯದ ಸಮೀಪದಲ್ಲಿ ಸೆಗಣಿ ರಾಶಿ ಹಾಕಿರುವ ಜಾಗದಲ್ಲಿ ಗ್ರಾಮಸ್ಥರೆಲ್ಲ ಸಂಜೆ ಸೇರುತ್ತಾರೆ. ಪುರುಷರು ಚಡ್ಡಿ ಧರಿಸಿ, ಬರಿಮೈಯಲ್ಲಿ ಸೆಗಣಿಯಲ್ಲಿ ಆಟವಾಡಲು ಸಿದ್ದರಾಗುತ್ತಾರೆ. ಸೆಗಣಿ ರಾಶಿಗೆ ಪೂಜೆ ಸಲ್ಲಿಸಿದ ಬಳಿಕ ಸೆಗಣಿ ಎರಚಾಟ ಶುರುವಾಗುತ್ತದೆ. ದೊಡ್ಡ ದೊಡ್ಡ ಸೆಗಣಿ ಉಂಡೆಗಳನ್ನು ಪರಸ್ಪರ ಎರಚಾಡುತ್ತಾರೆ. ಸೆಗಣಿಯ ಗುಂಡುಗಳನ್ನು ಒಬ್ಬರ ಮೇಲೊಬ್ಬರು ಎತ್ತಿಹಾಕುತ್ತಾರೆ. ಈ ಸಗಣಿ ಹಬ್ಬದ ಸಂಭ್ರಮ ಈ ಸಂದರ್ಭದಲ್ಲಿ ಪರಾಕಾಷ್ಠೆ ತಲುಪುತ್ತದೆ. ನೂರಾರು ಮಂದಿ ಒಬ್ಬರ ಮೇಲೊಬ್ಬರು ತೊಪ್ಪೆ (ಸೆಗಣಿ) ಎತ್ತಿಹಾಕುತ್ತಾ ವಿನೋದಿಸುತ್ತಾರೆ. ಸುತ್ತ ನಿಂತ ಗ್ರಾಮಸ್ಥರು ಹರ್ಷೋದ್ಗಾರ ಮಾಡುತ್ತಾ ಅವರನ್ನು ಹುರಿದುಂಬಿಸುತ್ತಾರೆ.
ಸೂರ್ಯ ಪಶ್ಚಿಮದ ದಿಗಂತದ ಅಂಚಿಗೆ ಬರುವವರೆಗೂ ಈ ಸಗಣಿ ಎರಚಾಟ ನಡೆಯುತ್ತದೆ. ತೊಪ್ಪೆ ಎರಚಾಟ ಮುಗಿದ ಬಳಿಕ, ಸಗಣಿಯಲ್ಲಿ ಹೊಡೆದಾಡಿ ಆಯಾಸಗೊಂಡ ಜನರು ಗ್ರಾಮದ ಕೆರೆಯ ದಡಕ್ಕೆ ಬರುತ್ತಾರೆ. ಈ ಸಂದರ್ಭದಲ್ಲಿ ಅಶ್ಲೀಲ ಬೈಗುಳಗಳನ್ನು ಹೇಳುತ್ತಾರೆ! ಇದಾದ ನಂತರ ಗೊರೆಹಬ್ಬಕ್ಕೆ ತೆರೆಬೀಳುತ್ತದೆ.
ತಮಿಳುನಾಡಿಗೆ ಸೇರಿದ್ದರೂ, ಅಚ್ಚಕನ್ನಡ ಪ್ರದೇಶ
ತಾಳವಾಡಿ ಪ್ರದೇಶ ತಮಿಳುನಾಡಿಗೆ ಸೇರಿ ಹೋಗಿದ್ದರೂ ಇದು, ಅಚ್ಚಕನ್ನಡ ಪ್ರದೇಶ. ತಾಳವಾಡಿ ಫಿರ್ಕಾ (ಹೋಬಳಿ)ದ 48 ಹಳ್ಳಿಗಳಲ್ಲಿ ಕನ್ನಡಿಗರೇ ಇದ್ದಾರೆ. ಭಾಷಾವಾರು ಪ್ರಾಂತ್ಯ ವಿಂಗಡಣೆ ಸಂದರ್ಭದಲ್ಲಿ ಈ ಪ್ರದೇಶ ತಮಿಳುನಾಡಿಗೆ ಸೇರಿ ಹೋಯಿತು. ಆದರೆ ಸರ್ಕಾರಿ ವ್ಯವಹಾರಗಳಿಗೆ ತಮಿಳುನಾಡನ್ನು ಅವಲಂಬಿಸಿರುವ ಈ ಜನರ ನಂಟು, ಸಂಬಂಧಗಳೆಲ್ಲ ಕರ್ನಾಟಕದ ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಹರಡಿವೆ.
ತಾಳವಾಡಿ ಫಿರ್ಕಾದ ಗುಮಟಾಪುರ ಗ್ರಾಮದಲ್ಲಿ ನಡೆಯುವ ಗೊರೆ ಹಬ್ಬ ಈ ಭಾಗದಲ್ಲೇ ವಿಶಿಷ್ಟವಾದ ಹಬ್ಬ. ಸೆಗಣಿಯಿಂದ ಹೊಡೆದಾಡುವ ಈ ರೀತಿಯ ಹಬ್ಬ ಈ ಭಾಗದಲ್ಲಿ ಇನ್ನಾವ ಗ್ರಾಮದಲ್ಲೂ ಇಲ್ಲ.
ತೊಪ್ಪೆಯಲ್ಲಿ ಹೊಡೆಯುವ ಹಬ್ಬದ ಹಿನ್ನೆಲೆ ಏನು?
ಎಲ್ಲ ಆಚರಣೆಗಳಿಗೂ ಒಂದು ಹಿನ್ನೆಲೆ ಐತಿಹ್ಯ ಇರುವಂತೆ ಈ ಹಬ್ಬಕ್ಕೂ ಒಂದು ಐತಿಹ್ಯವಿದೆ. ಗುಮಟಾಪುರ ಗ್ರಾಮದಲ್ಲಿ ನೂರಾರು ವರ್ಷಗಳ ಹಿಂದೆ ದೇವರಗುಡ್ಡನೊಬ್ಬ ಗೌಡರಮನೆಯಲ್ಲಿ ಆಳು ಮಗನವಾಗಿ ಕೆಲಸಕ್ಕಿದ್ದನಂತೆ. ಆತ ಮೃತನಾದ ನಂತರ ಆತನ ಜೋಳಿಗೆಯನ್ನು ಸೆಗಣಿಯ ತಿಪ್ಪೆಗೆ ಎಸೆಯಲಾಗುತ್ತದೆ. ಅದಾದ ನಂತರ ಗೌಡನ ಎತ್ತಿನಗಾಡಿಯು ಮಾರ್ಗದಲ್ಲಿ ಸಾಗುವಾಗ ಗಾಡಿಯ ಚಕ್ರ ಆ ಜೋಳಿಗೆ ಮೇಲೆ ಹರಿಯುತ್ತದೆ. ತಿಪ್ಪೆಯೊಳಗೆ ಲಿಂಗರೂಪದ ಕಲ್ಲಿನಿಂದ ರಕ್ತ ಬರುತ್ತದೆ. ಅಂದು ರಾತ್ರಿ ದೇವರು ಕನಸಿನಲ್ಲಿ ಬಂದು ಈ ದೋಷ ಪರಿಹಾರಕ್ಕಾಗಿ ಗುಡಿ ಕಟ್ಟಿಸಬೇಕು. ದೀಪಾವಳಿ ಹಬ್ಬದ ಮರುದಿನ ಸಗಣಿ ಹಬ್ಬ ಅಚರಿಸಬೇಕು ಎಂದು ಗೌಡನಿಗೆ ಹೇಳಿತಂತೆ.
ನಂತರದ ವರ್ಷದಿಂದಲೇ ಈ ಆಚರಣೆ ಶುರುವಾಯಿತು ಎಂಬ ಪ್ರತೀತಿ ಇದೆ. ಹೀಗಾಗಿ ತಲತಲಾಂತರದಿಂದ ಈ ಆಚರಣೆ ನಡೆದು ಬಂದಿದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.
(ಸಂಗ್ರಹ ಚಿತ್ರಗಳು)
ವರದಿ: ಕೆ.ಎಸ್. ಬನಶಂಕರ ಆರಾಧ್ಯ