ಗೋರಖ್ಪುರ: ಎರಡು ದಿನಗಳಲ್ಲಿ 30 ಮಕ್ಕಳ ಸಾವಿಗೆ ಕಾರಣವಾದ ಗೋರಖ್ಪುರದ ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜಿನಲ್ಲಿ ಕಳೆದ ಆರು ದಿನಗಳಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ ಭಾನುವಾರ 79ಕ್ಕೇರಿದೆ.
ಆಸ್ಪತ್ರೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವೈದ್ಯರ ಬಳಿ ಮಾಹಿತಿ ಪಡೆದು ಎಲ್ಲಾ ತುರ್ತು ಅಗತ್ಯಗಳನ್ನು ಪೂರೈಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಿದ್ದವಿದೆ ಎಂದರು.
ಭಾನುವಾರ ಒಂದೇ ದಿನ ಚಿಂತಾಜನಕ ಸ್ಥಿತಿಯಲ್ಲಿದ್ದ 16 ಮಕ್ಕಳು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಸಿಎಂ ಆದಿತ್ಯನಾಥ್ ಅವರು ಈ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದು, ವರದಿಯಲ್ಲಿ ಯಾರದ್ದೇ ಕರ್ತವ್ಯ ಲೋಪ ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೂ ಮಕ್ಕಳ ಸಾವಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು ಕೇಂದ್ರದ ಅಧಿಕಾರಿಗಳಿಗೆ ಎಲ್ಲಾ ರೀತಿಯ ತುರ್ತು ನೆರವು ನೀಡಲು ಸೂಚನೆ ನೀಡಿದ್ದಾರೆ.
ಮೆದುಳಿನ ಉರಿಯೂತಕ್ಕೆ ಕಾರಣವಾಗುವ ಎನ್‌ಸೆಫಲಿಟೀಸ್ ಎನ್ನುವ ಮಾರಣಾಂತಿಕ ಕಾಯಿಲೆಗೆ ಮಕ್ಕಳು ಬಲಿಯಾಗಿದ್ದಾರೆ ಎನ್ನಲಾಗಿದೆ.