Advertisement

ನಾಡಿನ ವಿವಿಧೆಡೆ ಸಂಪನ್ನಗೊಂಡ ಗೋಪೂಜೆ

10:26 AM Oct 30, 2019 | sudhir |

ಉಡುಪಿ: ನಾಡಿನ ವಿವಿಧ ಮಠ ಮಂದಿರಗಳು, ಮನೆಗಳು, ಗೊಶಾಲೆಗಳಲ್ಲಿ ಬಲಿಪಾಡ್ಯವಾದ ಸೋಮವಾರ ಗೋಪೂಜೆ ಸಂಪನ್ನಗೊಂಡಿತು. ಗೋವುಗಳಿಗೆ ಸ್ನಾನ ಮಾಡಿಸಿ ಮುದ್ರೆಗಳೊಂದಿಗೆ ಅಲಂಕಾರ ಮಾಡಿ ತಿನಿಸಿಗಳನ್ನು ನೀಡಿದರು. ಜತೆಗೆ ಮಂಗಳಾರತಿಯನ್ನೂ ಬೆಳಗಿ ಗೋಮಾತೆ ತಮ್ಮನ್ನು ಸಲಹುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

Advertisement

ಶ್ರೀಕೃಷ್ಣಮಠ
ಶ್ರೀಕೃಷ್ಣಮಠದ ಗೋಶಾಲೆಯ ದನಗಳನ್ನು ವಾದ್ಯ ಘೋಷ, ಬಿರುದು ಬಾವಲಿಗಳ ಸಹಿತ ರಥಬೀದಿಯಲ್ಲಿ ಮೆರವಣಿಗೆ ಮಾಡಿದ ಬಳಿಕ ಕನಕನ ಕಿಂಡಿ ಹೊರಗೆ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ತಿನಿಸುಗಳನ್ನು ನೀಡಿ ಪೂಜೆ ಸಲ್ಲಿಸಿದರು. ಗೋವುಗಳ ಮೆರವಣಿಗೆಯಲ್ಲಿ ಸ್ವತಃ ಸ್ವಾಮೀಜಿದ್ವಯರು ಪಾಲ್ಗೊಂಡಿ ದ್ದರು. ಪುರೋಹಿತ ಮಧುಸೂದನ ಆಚಾರ್ಯ ಧಾರ್ಮಿಕ ಕಾರ್ಯಕ್ರಮ ಗಳನ್ನು ನಡೆಸಿಕೊಟ್ಟರು.

ಅದಮಾರು ಮಠ
ಅದಮಾರು ಮಠದ ದೇಸೀ ತಳಿಗಳ ಗೋಶಾಲೆಯಲ್ಲಿ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಪೂಜೆ ಸಲ್ಲಿಸಿದರು. ದನಗಳಿಗೆ ತಿನಿಸುಗಳನ್ನು ನೀಡಿದ ಶ್ರೀಪಾದರು ಮಂಗಳಾರತಿ ಬೆಳಗಿದರು. ವಿದ್ವಾಂಸ ಡಾ|ವಂಶಿ ಕೃಷ್ಣಾಚಾರ್ಯ, ಅಧಿಕಾರಿಗಳಾದ ಗೋವಿಂದರಾಜ್‌, ಜನಾರ್ದನ ಕೊಟ್ಟಾರಿ ಉಪಸ್ಥಿತರಿದ್ದರು.

ಕೆ.ರಘುಪತಿ ಭಟ್‌
ಉಡುಪಿ: ಶಾಸಕ ಕೆ. ರಘುಪತಿ ಭಟ್‌ ಅವರಿಂದ ಕರಂಬಳ್ಳಿಯಲ್ಲಿರುವ ಮನೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಗೋಪೂಜೆ ನಡೆಯಿತು. ಕುಟುಂಬ ಸದಸ್ಯರು ಉಪಸ್ಥಿತರಿದ್ದರು. ಭಟ್‌ ಸಹೋದರ ರಮೇಶ ಬಾರಿತ್ತಾಯ ಪೂಜೆಯನ್ನು ನಡೆಸಿದರು.

ಪ್ರಮೋದ್‌ ಮಧ್ವರಾಜ್‌
ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಹಲವು ವರ್ಷಗಳಿಂದ ಮನೆಯಲ್ಲಿಯೇ ಗೋಶಾಲೆಯನ್ನು ನಡೆಸುತ್ತಿದ್ದು ಸೋಮವಾರ ವಿಶೇಷ ಪೂಜೆ ಸಲ್ಲಿಸಿದರು. ಕುಟುಂಬದ ಸದಸ್ಯರ ಉಪಸ್ಥಿತಿಯಲ್ಲಿ ಪೂಜೆ ನಡೆಯಿತು.
ಉಡುಪಿ ಡಾ|ಟಿಎಂಎ ಪೈ ಆಸ್ಪತ್ರೆಯ ಮಕ್ಕಳ ತಜ್ಞ ಡಾ|ದಿನೇಶ ನಾಯಕ್‌, ಮಣಿಪಾಲದ ಉದ್ಯಮಿ ಪ್ರಶಾಂತ ಶೆಣೈ ಅತಿಥಿಗಳಾಗಿದ್ದರು. ಗೋಸೇವಾ ಕೇಂದ್ರದ ಕಾರ್ಯದರ್ಶಿ ಕೆ.ಮಂಜುನಾಥ ಹೆಬ್ಟಾರ್‌ ಸ್ವಾಗತಿಸಿದರು.

Advertisement

ದೇಸೀ ದನಗಳ ಹಾಲು ಸರ್ವರೋಗಹರ
ಭಾರತೀಯ ತಳಿಗಳ (ದೇಸೀ) ದನಗಳ ಹಾಲು ಸರ್ವರೋಗಹರ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕುಟುಂಬ ಪ್ರಬೋಧನ್‌ ಪ್ರಮುಖ್‌ ಸಂಜೀವ ನಾಯಕ್‌ ಹೇಳಿದರು.

ಆರೂರು ಪುಣ್ಯಕೋಟಿ ಗೋಸೇವಾ ಕೇಂದ್ರದಿಂದ ಉಡುಪಿ ಬೈಲಕೆರೆಯಲ್ಲಿ ನಡೆದ ಸಾಮೂಹಿಕ ಗೋಪೂಜಾ ಕಾರ್ಯಕ್ರಮದಲ್ಲಿ ಸಂದೇಶ ನೀಡಿದ ಅವರು, ದೇಸೀ ದನಗಳ ಹಾಲು ಸರ್ವರೋಗಹರ ಮಾತ್ರವಲ್ಲದೆ, ಅದರ ಪ್ರತಿಯೊಂದು ಉತ್ಪನ್ನವೂ ಅಮೂಲ್ಯವಾದುದು. ಸತ್ತ ಬಳಿಕವೂ ಅದನ್ನು ಹೂತರೆ 20 ಎಕ್ರೆಗಳಿಗೆ ಬೇಕಾಗುವಷ್ಟು ಗೊಬ್ಬರ ದೊರೆಯುತ್ತದೆ ಎಂದರು.

ನಮ್ಮ ಪ್ರಾಚೀನರು ಪ್ರಕೃತಿಯಿಂದ ಅರಿತು ಅದನ್ನೇ ಆರಾಧಿಸಿಕೊಂಡು ಬಂದವರು. “ಪರೋಪಕಾರಂ ಇದಂ ಶರೀರಂ|’ ಎಂಬ ವಾಕ್ಯದ ಹಿಂದೆ ವೃಕ್ಷ, ನದಿ, ಗೋವುಗಳ ಹಿನ್ನೆಲೆಯಿದೆ. ಇವುಗಳೆಲ್ಲವೂ ಪರರಿಗಾಗಿ ಸೇವೆ ಸಲ್ಲಿಸುತ್ತಿರುವಾಗ ಮಾನವರೂ ಪರೋಪಕಾರಿಗಳಾಗಬೇಕೆಂಬ ಸಂದೇಶ ಮೂಡಿಬಂತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next