Advertisement

Gopilola Movie Review: ಹೆಣ್ಣು ಮಣ್ಣಿನ ಮಧ್ಯೆ ಗೋಪಿ ಆಟ

11:31 AM Oct 05, 2024 | Team Udayavani |

ಕೆಲಸವಿಲ್ಲದ ಹುಡಗನೊಬ್ಬನಿಗೆ ಪೋರಿಯರ ಹಿಂದೆ ಸುತ್ತುವುದೇ ಖಯಾಲಿ. ಅದರ ಹಿಂದೆ ಕಾರಣವಿರಬಹುದು. ಮನೆಗೆ ಮಾರಿಯಾಗಿ ಊರಿಗೆ ಉಪಕಾರಿಯಾಗಿ ಸಾಗುವ ನಾಯಕನ ದೊಡ್ಡ ಸಾಧನೆಯೇ ಗೋಪಿಲೋಲ ಸಿನಿಮಾದ ಕೇಂದ್ರ ಬಿಂದು. ಚಿತ್ರವೆಂದರೆ ಕೇವಲ ಮನರಂಜನೆ ಅಲ್ಲ, ಅದರ ಮೂಲಕ ಜಾಗೃತಿಯನ್ನು ಮೂಡಿಸಬಹುದು ಎಂದು ನಿರೂಪಿಸಿದ ಸಿನಿಮಾ ಇದು. ಇಲ್ಲಿ ಹೆಣ್ಣು ಮಣ್ಣಿನ ಅಂಶಗಳೇ ಪ್ರಧಾನ.

Advertisement

ಒಕ್ಕಲುತನವೇ ಸಂಸ್ಕೃತಿಯಾಗಿರುವ ಈ ನಾಡಿನಲ್ಲಿ, ರಸಾಯನಿಕ ಪದ್ಧತಿಗಳಿಗೆ ಕಡಿವಾಣ ಹಾಕಿ, ನೈಸರ್ಗಿಕ ಕೃಷಿ ಬಗ್ಗೆ ಜಾಗೃತಿ ಮೂಡಿಸುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ನಾಯಕ-ನಾಯಕಿಯರ ಪ್ರೇಮಕಥೆ… ಹೀಗೆ ಎರಡೂ ಸಮಾಂತರವಾಗಿ ಸಾಗಿ ಕೊನೆಗೆ ಅಂತ್ಯ ಕಾಣುತ್ತದೆ. ಅಪ್ಪ ಆದರ್ಶ ಕೃಷಿಕ. ಅವನಿಗೆ ಬೇಜವಾಬ್ದಾರಿಯ ಮಗ… ಇವರಿಬ್ಬರ ನಡುವೆ ಕಲಹ ನಿತ್ಯ, ನಿರಂತರ. ಅಂದವೆನಿಸುವ ಪ್ರೇಮಕಥೆಯಲ್ಲಿ ಪ್ರೇಮಿಗಳ ನಡುವಿನ ಬಿರುಕು, ಇವೆರಡೂ ಸನ್ನಿವೇಶಗಳು ಪ್ರೇಕ್ಷಕನಲ್ಲಿ ಪ್ರಶ್ನೆ ಹುಟ್ಟಿಸುತ್ತವೆ. ಉತ್ತರಗಳನ್ನು ಸಿನಿಮಾ ನೋಡಿ ತಿಳಿದುಕೊಂಡರೆ ಚೆಂದ.

ಸರಳ ನಿರೂಪಣೆಯ ಚಿತ್ರದ ಸನ್ನಿವೇಶಗಳು ಎರಡನೇ ಭಾಗದಲ್ಲಿ ಮಹತ್ವ ಪಡೆಯುತ್ತ ಸಾಗುತ್ತದೆ. ಇಲ್ಲಿ ಪ್ರತಿ ಅರ್ಥವೂ ಅಪಾರ್ಥ ಸೃಷ್ಟಿಸುತ್ತವೆ. ಈ ಅಪಾರ್ಥಗಳಿಗೆ ಸ್ಪಷ್ಟನೆ ಸಿಗುವುದು ಕ್ಲೈಮ್ಯಾಕ್ಸ್‌ನಲ್ಲಿ. ಸ್ನೇಹ, ಪ್ರೀತಿ, ಹಾಡು, ಹರಟೆ ಈ ಮನರಂಜನೆಗಳ ಜೊತೆಗೆ ಗಹನವಾದ ವಿಷಯವೊಂದರ ಬಗ್ಗೆ ಜಾಗೃತಿ ಮೂಡಿಸಿದ್ದಕ್ಕೆ ಚಿತ್ರತಂಡಕ್ಕೊಂದು ಮೆಚ್ಚುಗೆ ವ್ಯಕ್ತಪಡಿಸಬಹುದು.

ಎಸ್‌.ನಾರಾಯಣ ಅವರ ಅನುಭವಿ ನಟನೆ ಹಾಗೂ ಕ್ಲೈಮ್ಯಾಕ್ಸ್‌ ಚಿತ್ರದ ಹೈಲೈಟ್ಸ್‌ಗಳು. ನಾಯಕ ನಟ ಮಂಜುನಾಥ ಅರಸ್‌ ಹಾಗೂ ನಾಯಕಿ ನಿಮಿಷಾ ಅವರ ನಟನೆ ಅಚ್ಚುಕಟ್ಟಾಗಿದೆ. ಉಳಿದಂತೆ ಪದ್ಮಾ ವಾಸಂತಿ, ಸಪ್ತಗಿರಿ, ಕೆಂಪೇಗೌಡ, ಡಿಂಗ್ರಿ ನಾಗರಾಜ್‌ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next