Advertisement

ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ಗೋಪಾಲಕೃಷ್ಣ

04:12 PM Sep 04, 2018 | Team Udayavani |

ಕೂಡ್ಲಿಗಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಕೆಡಿಪಿ ತ್ತೈಮಾಸಿಕ ಸಭೆಯಲ್ಲಿ ಶಾಸಕ ಎನ್‌.ವೈ. ಗೋಪಾಲಕೃಷ್ಣ ಜಿಡ್ಡುಗಟ್ಟಿದ ಅಧಿಕಾರಿಗಳಿಗೆ ನಯವಾಗಿಯೇ ಚಾಟಿ ಬೀಸುವ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದರು.

Advertisement

ಸಭೆಯಲ್ಲಿ ಮಾತನಾಡಿದ ಶಾಸಕರು, ನನ್ನ ಕ್ಷೇತ್ರ ವ್ಯಾಪ್ತಿಯ ಕೊಟ್ಟೂರು ಸಮೀಪದ ಜೋಳದಕೂಡ್ಲಿಗಿ ಗ್ರಾಮದಲ್ಲಿರುವ ಹಗರಿಗೆ ಸೇತುವೆ ಇಲ್ಲದ ಕಾರಣ ಈ ಭಾಗದ ಹಳ್ಳಿಗಳ ರೈತರು ಮಳೆಗಾಲದಲ್ಲಿ ಈ ಗ್ರಾಮದ ಮೂಲಕ ರಸ್ತೆಯಲ್ಲಿ ದಾಟುವುದೇ ಕಷ್ಟಕರವಾಗಿತ್ತು. ಇದನ್ನರಿತು ನಬಾರ್ಡ್‌ ಯೋಜನೆಯಡಿ 1 ಕೋಟಿ ವೆಚ್ಚದ ಸೇತುವೆ ಕಾಮಗಾರಿ ಮುಂಜೂರು ಮಾಡಿಸಿರುವುದಾಗಿ ತಿಳಿಸಿದರು.

ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ಕೂಡ್ಲಿಗಿ ತಾಲೂಕಿನಲ್ಲಿ ಭವನ ನಿರ್ಮಾಣಕ್ಕೆ 1 ಕೋಟಿ ರೂ. ಬಂದರೂ
ಅಧಿಕಾರಿಗಳು ಸೂಕ್ತ ನಿವೇಶನ ನೀಡದೇ ಇರುವುದರಿಂದ ಮಂಜೂರು ಆಗಿರುವ ಹಣ ವಾಪಾಸ್‌ ಹೋದರೆ ಹೇಗೆ ಎಂದು ಶಾಸಕ ಗೋಪಾಲಕೃಷ್ಣ ಅವರು ಬಿಸಿಎಂ ಅಧಿಕಾರಿ ಪಂಪಾಪತಿಯವರಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.

ಕೆರೆಗಳನ್ನು ರಕ್ಷಿಸಿ: ಕೂಡ್ಲಿಗಿ ತಾಲೂಕಿನಲ್ಲಿ ಕೆರೆಗಳು ಅತಿಕ್ರಮಣವಾಗುತ್ತಿದ್ದು, ಕೆಲ ಕೆರೆಗಳಲ್ಲಿ ಜಾಲಿ ಗಿಡಗಳು ಬೆಳೆದು ಕೆರೆಗಳು ದುಸ್ಥಿತಿಯಲ್ಲಿವೆ. ಸಣ್ಣನೀರಾವರಿ ಇಲಾಖೆಯವರು ಏನು ಮಾಡುತ್ತೀರಿ, ಬೆಂಗಳೂರಿನಲ್ಲಿ ಕೆರೆಗಳು ಮಾಯವಾಗುವ ಹಾಗೇ ಕೂಡ್ಲಿಗಿ ತಾಲೂಕಿನಲ್ಲಿ ಕೆರೆಗಳು ಮಾಯವಾಗುವ ಹಂತಕ್ಕೆ ಬರಬಾರದು ಎಂದು ಶಾಸಕ ಗೋಪಾಲಕೃಷ್ಣ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚ್ಯವಾಗಿಯೇ ಕೆರೆ ರಕ್ಷಣೆಯ ಪಾಠ ಮಾಡಿದರು. ಅಲ್ಲದೇ ಶುದ್ಧ ಕುಡಿಯುವ ನೀರಿನ ಕಾಮಗಾರಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಶಾಸಕರು, ಶುದ್ಧ ಕುಡಿಯುವ ನೀರಿನ ಕಾಮಗಾರಿಯನ್ನು ನಾಲ್ಕಾರು ಕಂಪನಿಗಳಿಗೆ ನೀಡುವುದರಿಂದ ಬರೀ ಒಬ್ಬರ ಮೇಲೊಬ್ಬರು ಹೇಳುವುದಷ್ಟೇ
ಮಾಡುತ್ತಾರೆ. ಕೆಲಸಗಳು ಆಗುತ್ತಿಲ್ಲ. ಅಧಿಕಾರಿಗಳು ವಿಶ್ವಾಸದಿಂದ ಕೆಲಸ ಮಾಡಿ ಎಂದರು.

ಇದೇ ಸಂದರ್ಭದಲ್ಲಿ ದಕ್ಷಿಣ ಪಶ್ಚಿಮ ಏಷಿಯನ್‌ ಕ್ರೀಡಾಕೂಟದಲ್ಲಿ ಬೆಳ್ಳಿ, ಕಂಚಿನ ಪದಕ ಗಳಿಸಿದ ತಾಲೂಕಿನ ಅಂಗವಿಕಲ ಯುವಕ ಕೆ.ಎಂ. ಶರಣೇಶ ಅವರನ್ನು ಶಾಸಕ ಎನ್‌.ವೈ. ಗೋಪಾಲಕೃಷ್ಣ ಸಭೆಯಲ್ಲಿ ಸನ್ಮಾನಿಸಿದರು.
 
ತಾಪಂ ಅಧ್ಯಕ್ಷ ವೆಂಕಟೇಶ್‌ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ, ಇಒ ಬಸಣ್ಣ, ತಾಪಂ ಅಧಿಕಾರಿ ಬೋರಯ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕಿನ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next