Advertisement
ಆ ಕಾಲದಲ್ಲಿ ಅಡಿಗ ಓರ್ವ ಪ್ರಶ್ನಾತೀತ ಕವಿಯಾಗಿದ್ದರು. ಕಾವ್ಯ ಬರೆಯುವವರಿಗೆ ಅವರೇ ಆದರ್ಶ. ಆದರೆ, ಅವರಂತೆ ಬರೆಯುವುದು ಕಷ್ಟಸಾಧ್ಯವಾದುದರಿಂದ ಎ.ಕೆ. ರಾಮಾನುಜನ್, ಪಿ. ಲಂಕೇಶರನ್ನು ತರುಣರು ಹೆಚ್ಚಾಗಿ ಅನುಸರಿಸುತ್ತ (ಅನುಕರಿಸುತ್ತ!) ಇದ್ದರು. ಜೊತೆಗೆ ನಿಸಾರ್ ಅಹಮದರು. ನಾನೂ ಪ್ರಾರಂಭದಲ್ಲಿ ಈ ಮೂವರು ಕವಿಗಳ ಶೈಲಿಯನ್ನು ನನ್ನ ಮೇಲೆ ಆರೋಪಿಸಿಕೊಂಡು ಕವಿತೆ ಬರೆಯಲು ಶುರುಮಾಡಿದೆ! ಆ ಕಾಲದಲ್ಲಿ ಕಾವ್ಯ, ಕಥೆ, ಕಾದಂಬರಿ, ವಿಮರ್ಶೆ ಎಲ್ಲವೂ ಅಡಿಗರ ಒಂದು ವಾಕ್ಯದ ಒಪ್ಪಿಗೆಗೆ ಹಾತೊರೆಯುತ್ತಿದ್ದವು. ಅವರ ಮಾತೇ ಆಖೈರ್ ಮಾತಾಗುತ್ತಿತ್ತು. “ಸಾಕ್ಷಿ’, “ಪ್ರಜಾವಾಣಿ’ ಪತ್ರಿಕೆಗಳಲ್ಲಿ ತಮ್ಮ ಬರಹ ಪ್ರಕಟವಾಗಬೇಕೆಂಬುದು ಹೊಸಲೇಖಕರ ತಹತಹವಾಗಿತ್ತು! (“ಪ್ರಜಾವಾಣಿ’ಯಲ್ಲಿ ವೈ.ಎನ್.ಕೆ ಇದ್ದರಲ್ಲ!). ನವ್ಯಕಾವ್ಯ ಅಡಿಗರ ಮೂಲಕ ತನ್ನ ಕಾವ್ಯಮೀಮಾಂಸೆಯನ್ನು ಗಟ್ಟಿಯಾಗಿ ರೂಪಿಸಿಕೊಂಡಿತ್ತು. ಆಡುಮಾತು, ಮಣ್ಣಿನವಾಸನೆ, ಭಾಷೆಯಲ್ಲಿ ಭಾವಾಭಿನಯ, ಭಾವಕ್ಕೆ ತಕ್ಕ ಲಯ, ಹಾಡುವಂತೆ ಬರೆಯಬಾರದೆಂಬ ಛಲ, ತನಗೆ ದಕ್ಕಿದ್ದನ್ನು ಪ್ರಾಮಾಣಿಕವಾಗಿ ಸಮಗ್ರವಾಗಿ ಭಾಷೆಯ ಮೂಲಕ ಅಭಿವ್ಯಕ್ತಿಸಬೇಕೆಂಬ ಹಠ, ನಾವು ಬರೆಯಬೇಕಾದದ್ದು ಮೌಲ್ಯಾರಾಧನೆಯ ಕಾವ್ಯವನ್ನಲ್ಲ; ಮೌಲ್ಯಶೋಧಕ ಕಾವ್ಯವನ್ನೆಂಬ ನಿಲುವು ಎಲ್ಲವನ್ನೂ ನಾನೂ ಸಾರಾಸಗಟಾಗಿ ಆವಾಹಿಸಿಕೊಂಡವನೇ!
Related Articles
Advertisement
ಅಡಿಗರು ಕಾವ್ಯರಚನೆಯಲ್ಲಿ ನೂರಕ್ಕೆ ನೂರು ಗಹನಗಂಭೀರ. ಆದರೆ ನಿತ್ಯವ್ಯವಹಾರದಲ್ಲಿ ತಮಾಷೆ, ಚೇಷ್ಟೆ, ವ್ಯವಹಾರಶೂನ್ಯತೆ ಅವರನ್ನು ನಮ್ಮೆಲ್ಲರ ಹತ್ತಿರ ತರುತ್ತಿತ್ತು. ಯಾರನ್ನಾದರೂ ಟೀಕಿಸುವಾಗ ಅವರು ಕಣ್ಣು ಹೊಡೆಯುವ ರೀತಿ ನೋಡುವಂತಿರುತ್ತಿತ್ತು. ಒಬ್ಬ ಹಿರಿಯ ಕವಿ ಒಮ್ಮೆ ಅಡಿಗರ ಮನೆಗೆ ಬಂದಾಗ ತಿಳಿಯದೆ ಅವರು ಯಾವಾಗಲೂ ಕೂತುಕೊಳ್ಳುವ ಕುರ್ಚಿಯಲ್ಲಿ ಕೂತು ಬಿಟ್ಟಿದ್ದಾರೆ. ಅವರು ಮಾತಾಡಿ ಹೋದಮೇಲೆ, ಅಡಿಗರು ನಮ್ಮನ್ನು ನೋಡಿ ಕಣ್ಣು ಹೊಡೆದು ಹೇಳಿದ್ದು , “ನೋಡಿದಿರಾ? ಅವರಿಗೆ ನನ್ನ ಕುರ್ಚಿಯ ಮೇಲೆ ಕಣ್ಣು!’
ಪುಂಖಾನುಪುಂಖವಾಗಿ ಅಡಿಗರು ಸಿಗರೇಟು ಸುಡುತ್ತ ಕೂತಿದ್ದಾರೆ. ನಾನು, “ಸರ್, ನಿಮಗೆ ಹೇಗೆ ಇಂಥ ಅದ್ಭುತ ಪ್ರತೀಕಗಳು ಹೊಳೆಯುತ್ತವೆ’ ಎಂದು ಮುಗ್ಧವಾಗಿ ಕೇಳುತ್ತೇನೆ. ಅಡಿಗರು ಒಂದು ಕ್ಷಣ ತಡೆದು ತಣ್ಣಗೆ ನಗುತ್ತಾರೆ, “ಅವೆಲ್ಲ ನನ್ನ ಬೆನ್ನ ಹಿಂದೆ ನಿಂತ ಯಾರೋ ಥಟ್ಟನೆ ನನ್ನ ಟೇಬಲ್ಲಿನ ಮೇಲೆ ಹಾಕುತ್ತಾರೆ’. ನಾನು ತಿಳಿದಂತೆ ಟೈರಹಿತ ಸೂಟುಧಾರಿ ಕವಿಗಳಲ್ಲಿ ಅಡಿಗರೇ ಮೊದಲಿಗರು. ಅವರು ಗಾಂಧಿಬಜಾರಿಗೆ ತರಕಾರಿ ವ್ಯಾಪಾರ ಮತ್ತು ನಾಡಿಗರ ಕರ್ನಾಟಕ ಬುಕ್ ಹೌಸಿನಲ್ಲಿ ಸ್ನೇಹಿತರನ್ನು ಭೆಟ್ಟಿ ಮಾಡಿ ಸರಸ-ಸಲ್ಲಾಪ ನಡೆಸಲು ನಿತ್ಯವೂ ಬರುತ್ತ ಇದ್ದರು. ಅವರೊಂದಿಗೆ ಸ್ವಲ್ಪ ಕಾಲ ಕಳೆಯುವುದಕ್ಕೆ ನಾನು ಬಿಡುವಾದಾಗ ಗಾಂಧಿಬಜಾರಿಗೆ ಹೋಗುತ್ತಿದ್ದೆ. ಸ್ವಲ್ಪ ಹೊತ್ತು ತಮ್ಮನ್ನು ನೋಡಲು ಬರುವ ತರುಣರೊಂದಿಗೆ ಮುಕ್ತವಾಗಿ ಹರಟಿದ್ದಾದ ಮೇಲೆ ಗುಂಪು ಗಾಂಧಿಬಜಾರಿನ ಪಶ್ಚಿಮ ತುದಿಯಲ್ಲಿದ್ದ ಅಷ್ಟೇನು ರಶ್ ಇರದ ಹೊಟೇಲ್ಲಿಗೆ ಹೋಗುವುದು. “ನನಗೆ ಅರ್ಧ ದೋಸೆ ಸಾಕಪ್ಪಾ’ ಅನ್ನುವರು ಅಡಿಗರು. ಅಲ್ಲಿ ಅರ್ಧ ಮಸಾಲೆ ತಿಂದು ಸಿಗರೇಟು ಸುಟ್ಟು ತರಕಾರಿ ಚೀಲ ಸಮೇತ ಅವರು ರಿಕ್ಷಾದಲ್ಲಿ ಮನೆಗೆ ಹೊರಟಾಗ ನಾನಂತೂ ಬೆರಗಿನಿಂದ ಈ ಕವಿಯನ್ನು ನೋಡುತ್ತಾ ಇದ್ದೆ. ಹಿರಿಮೆ ಕಾವ್ಯದಲ್ಲಿ, ಸರಳಸಾಮಾನ್ಯತೆ ನಿತ್ಯ ಬದುಕಿನಲ್ಲಿ!
ಅಡಿಗರು ನಾನು ಅವರ ಮನೆಗೆ ಹೋದಾಗ ತಮ್ಮ ಕಾವ್ಯದ ಬಗ್ಗೆ ಯಾವತ್ತೂ ಮಾತಾಡಿದವರಲ್ಲ. ತಮ್ಮ ಮನೆಯಲ್ಲಿ ಮನೆವಂದಿಗರಾಗಿ ನೆಲೆಸಿರುವ ನಾಯಿ-ಬೆಕ್ಕುಗಳ ಮೇಲೇ ಅವರ ಮಾತು. “ಪುಟ್ಟ’ ಎಂಬ ನಾಯಿಯಂತೂ ಅವರಿಗೆ ಅತ್ಯಂತ ಪ್ರಿಯವಾಗಿತ್ತು. “ಪುಟ್ಟನಿಗೆ ಪಪ್ಪಾಯಿ ಎಂದರೆ ತುಂಬ ಇಷ್ಟ’, “ಪುಟ್ಟನಿಗೆ ಕೊಳಕರನ್ನು ಕಂಡರಾಗುವುದಿಲ್ಲ’, “ಪುಟ್ಟನಿಗೆ ಕನ್ನಡ ಹೇಗೆ ಅರ್ಥವಾಗುತ್ತೆ’ ಎಲ್ಲವನ್ನೂ ಬಣ್ಣಿಸಿ ಬಣ್ಣಿಸಿ ಮಾತಾಡುತ್ತಿದ್ದರು. ಇದು ತನ್ನ ಬಗ್ಗೆಯೇ ಅಡಿಗರು ಹೇಳುತ್ತಿರುವ ಮಾತು ಎಂದು ಆ ಮೂಕಜೀವಿಗೆ ಹೇಗೆ ತಿಳಿಯುತ್ತಿತ್ತೋ. ಅದು ಮಾತುಗಳನ್ನು ಆಲಿಸುತ್ತ ಬಾಲ ಗುಂಡಾಡಿಸುತ್ತ ನಮ್ಮ ಮುಂದೇ ಕೂತಿರುತ್ತಿತ್ತು.
ಅಡಿಗರ ಮನೆಯಲ್ಲಿ ಒಂದು ಬೆಕ್ಕಲ್ಲ; ಬೆಕ್ಕಿನ ಸಂಸಾರವೇ ಇತ್ತು! ಯಜಮಾನ ಬೆಕ್ಕನ್ನು “ಗುಂಡ’ ಎಂದು ಅವರು ಕರೆಯುತ್ತಿದ್ದರು ಎಂದು ನನ್ನ ನೆನಪು. ಅವರು ಮನೆ ಬದಲಿಸಿ ಬಾಡಿಗೆ ಮನೆಯಿಂದ ಸ್ವಗೃಹಕ್ಕೆ ಬಂದಾಗ ಗುಂಡ ಎಲ್ಲಿ ಹೋಗಿದ್ದನೋ! ಎಷ್ಟು ಕಾದರೂ ಅವನು ಹಿಂದಿರುಗಿಲ್ಲ. ಮನೆ ಬದಲಿಸಿದ ಮೇಲೂ ಗುಂಡನನ್ನು ಕರೆತರಲು ಅಡಿಗರು ಎಷ್ಟೋ ಬಾರಿ ತಾವು ಹಿಂದಿದ್ದ ಮನೆಗೆ ಹೋಗಿದ್ದಾರೆ. ಒಮ್ಮೆ ಮಾತ್ರ ಗುಂಡ ಸಿಕ್ಕನಂತೆ. ಅಡಿಗರು ಕರೆದಾಗ ನೀವ್ಯಾರೋ ನನಗೆ ಗೊತ್ತೇ ಇಲ್ಲ ಎಂಬಂತೆ ಹೊರಟು ಹೋದನಂತೆ. ಅಡಿಗರು ನೊಂದುಕೊಂಡು ಹೇಳಿದರು, “ನಾಯಿಗಳಿಗೆ ಮನುಷ್ಯ ಮುಖ್ಯ. ಬೆಕ್ಕುಗಳಿಗೆ ಸ್ಥಳ ಮುಖ್ಯ. ನೋಡಿ, ಗುಂಡ ನಾನು ಕರೆದರೂ ನನ್ನೊಂದಿಗೆ ಬರಲೇ ಇಲ್ಲ’
ಅಡಿಗರ ಕಾವ್ಯ ಎಲಿಯೆಟ್, ಏಟ್ಸ್ ಮೊದಲಾದ ಇಂಗ್ಲಿಷ್ ಕವಿಗಳತ್ತ ಕೈಚಾಚಿದ್ದರೂ ಅದರ ಬೇರು ನಮ್ಮ ಋಷಿಪರಂಪರೆಯಲ್ಲಿ ಇತ್ತು. ಅದಕ್ಕೇ ಅಡಿಗರು ಪ್ರಧಾನವಾಗಿ ಆಷೇìಯ ಕವಿ ಎಂದು ಅನಂತಮೂರ್ತಿ ಹೇಳಿದ್ದು. ಕಡೆಕಡೆಯ ದಿನಗಳಲ್ಲಿ ಅಡಿಗರು ತುಂಬ ಮಿದುವಾಗಿದ್ದರು. ಆಪ್ತರನ್ನು ನೋಡಿದಾಗ ಅವರ ಕಣ್ಣಲ್ಲಿ ನೀರೇ ಬಂದುಬಿಡುತ್ತ ಇತ್ತು. ನಿಷ್ಠೆ ಎಂಬುದು ಅವರು ಮೆಚ್ಚುವ ಬಹುದೊಡ್ಡ ಮೌಲ್ಯವಾಗಿತ್ತು. ಸ್ನೇಹ, ಪ್ರೀತಿ, ಭಕ್ತಿ ಎಲ್ಲದರಲ್ಲಿಯೂ ದೃಢವಾದ ನಿಷ್ಠೆ ಇರಬೇಕಯ್ನಾ ಎಂದು ಯಾವಾಗಲೂ ಹೇಳುತ್ತಿದ್ದರು.
ಅವರ ಸಮಗ್ರ ಕಥೆಗಳ ಸಂಗ್ರಹಕ್ಕೆ ನಾನು ಮುನ್ನುಡಿ ಬರೆದದ್ದು ಅವರು ನನ್ನ ಮೇಲಿಟ್ಟಿದ್ದ ಪ್ರೀತಿಯನ್ನು ತೋರುವುದೆಂದು ನಾನು ನಂಬಿದ್ದೇನೆ. ಅವರ ಬರವಣಿಗೆಗೆ ಯಾರ ಮುನ್ನುಡಿಯ ಅಗತ್ಯವಿತ್ತು? ಇವೆಲ್ಲ ಪ್ರೀತಿಯ ಅಭಿವ್ಯಕ್ತಿಗೆ ನಾವು ಹುಡುಕಿಕೊಂಡ ಉಪಾಯಗಳಲ್ಲವೇ ಎಂದು ನಾನು ಅನೇಕ ಬಾರಿ ಅಂದುಕೊಳ್ಳುತ್ತೇನೆ.
ಅಡಿಗರಿಗೆ ತಮಗಿಂತ ಹಿರಿಯರು, ತಮ್ಮ ಸಮಕಾಲೀನರು ಆದ ಲೇಖಕರಿಗಿಂತ ತಮಗಿಂತ ಕಿರಿಯರೊಂದಿಗೇ ಹೆಚ್ಚಿನ ಒಡನಾಟ. ಯು. ಆರ್. ಅನಂತಮೂರ್ತಿ, ಪಿ. ಲಂಕೇಶ್, ಎಂ.ಜಿ. ಕೃಷ್ಣಮೂರ್ತಿ , ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಜಿ. ಎಚ್. ನಾಯಕ, ಚಂದ್ರಶೇಖರ ಕಂಬಾರ, ಕೆ. ಸದಾಶಿವ, ಟಿ. ಜಿ. ರಾಘವ, ಆಲನಹಳ್ಳಿ ಕೃಷ್ಣ, ಎಂ. ಎನ್. ವ್ಯಾಸರಾವ್, ಎಸ್. ದಿವಾಕರ, ಬಿ. ಆರ್. ಲಕ್ಷ್ಮಣ ರಾವ್, ಕೆ. ಸತ್ಯನಾರಾಯಣ, ಎ. ಎನ್. ಪ್ರಸನ್ನ- ಹೀಗೆ ಬಹು ದೊಡ್ಡ ತರುಣರ ಗುಂಪೇ ಅವರ ಹಿಂದೆ ಇರುತ್ತ ಇತ್ತು. ಬಿ. ಆರ್. ಲಕ್ಷ್ಮಣರಾಯರ ಪತ್ನಿಯ ತಂಗಿಯೇ ಅಡಿಗರ ಸೊಸೆಯಾದ ಮೇಲೆ ಅಡಿಗ ಮತ್ತು ಅವರ ಸಂಬಂಧ ಇನ್ನಷ್ಟು ನಿಕಟವಾಗಿತ್ತು. ಆ ವರ್ಷಗಳಲ್ಲಿ ಲಕ್ಷ್ಮಣರಾವ್ ಚಿಂತಾಮಣಿಯಲ್ಲಿ ತಮ್ಮ ಗೆಳೆಯರ ಗುಂಪು ಕಟ್ಟಿಕೊಂಡು ಬೆಂಗಳೂರಿನಿಂದ ಅನೇಕ ಲೇಖಕರನ್ನು ಚಿಂತಾಮಣಿಗೆ ಕರೆಸಿಕೊಳ್ಳುತ್ತಿದ್ದರು! ಬಹಳ ಸಲ ಹಿರಿಯ ಕವಿ ರಾಮಚಂದ್ರಶರ್ಮರ ಕಾರಲ್ಲಿ ! (ಶರ್ಮ ತಮ್ಮ ಕಾರನ್ನು ಶರ್ಮ ಟ್ರಾನ್ಸ್‌ಪೊàರ್ಟ್ ಎಂದು ತಾವೇ ಗೇಲಿಮಾಡಿಕೊಳ್ಳುತ್ತಿದ್ದರು!). ಅಡಿಗರೊಂದಿಗೆ ನಾನು ಅದೆಷ್ಟು ಬಾರಿ ಚಿಂತಾಮಣಿಗೆ ಹೋಗಿದ್ದೇನೋ. ಒಮ್ಮೆ ಸಾಹಿತಿಗಳ ದೊಡ್ಡ ಗುಂಪೇ ಚಿಂತಾಮಣಿಯಲ್ಲಿ ಸೇರಿತ್ತು. ಸಂಜೆ ಸಭೆಯಲ್ಲಿ ಅಡಿಗರು ಮಾತಾಡುವಾಗ ಸಭೆಯಲ್ಲಿ ಇದ್ದ ಯಾರೋ ಗೃಹಿಣಿಯ ಮುಖ ಅವರ ಮನಸ್ಸನ್ನು ಆಕ್ರಮಿಸಿದೆ. ಈಕೆಯನ್ನು ನಾನು ಎಲ್ಲೋ ನೋಡಿದ್ದೇನೆ, ಇದು ನಾನು ಕಂಡು ಯಾವಾಗಲೋ ಕಳೆದುಕೊಂಡ ಅತ್ಯಾಪ್ತ ದ್ವಿತೀಯಾರ್ಧ ಎಂದು ಅವರಿಗೆ ಬೋಧೆಯಾಗಿದೆ. ಆ ಅನಿಸಿಕೆಯೇ ಮುಂದೆ ಮಜಭೂತಾದ ಅದ್ಭುತ ಕವಿತೆಯಾಗಿ ರೂಪತಾಳಿದ್ದು. ಚಿಂತಾಮಣಿಯಲ್ಲಿ ಕಂಡ ಮುಖ ಎಂಬುದು ಕವಿತೆಯ ಶೀರ್ಷಿಕೆ. ಅಡಿಗರ ಅಜರಾಮರ ಕವಿತೆಗಳಲ್ಲಿ ಅದೂ ಒಂದು.
ಲಕ್ಷ್ಮಣ ರಾವ್ ತನ್ನ ಯಾವತ್ತಿನ ತಮಾಷೆ ಮತ್ತು ಚೇಷ್ಟೆಯ ಧಾಟಿಯಲ್ಲಿ ಅಡಿಗರನ್ನು ಕೇಳಿದ್ದು: “ಚಿಂತಾಮಣಿಯಲ್ಲಿ ನನಗೇ ಕಾಣದ ಅದ್ಯಾವ ಮುಖ ನಿಮಗೆ ಕಂಡಿದ್ದು ಸರ್?’ ಅಡಿಗರು ನಗುತ್ತ ಹೇಳಿದರು: “ಅದು ನಿನಗೆ ಕಾಣುವ ಮುಖ ಅಲ್ಲವಯ್ನಾ! ನನಗೆ ಮಾತ್ರ ಕಾಣುವಂಥದ್ದು!’ ಅಡಿಗರ ಉತ್ತರದಿಂದ ಲಕ್ಷ್ಮಣರಾವ್ ಕೂಡ ಸೇರಿದಂತೆ ನಾವೆಲ್ಲ ನಕ್ಕಿದ್ದೂನಕ್ಕಿದ್ದೆ!
ಅಡಿಗರು ಕೊನೆಗಾಲದಲ್ಲಿ ಅನಾರೋಗ್ಯದಿಂದ ತುಂಬ ನರಳಿದರು. ಅವರು ತೀರಿಕೊಂಡಾಗ ಅವರ ಮನೆಯ ಮುಂದೆ ಜನಜಾತ್ರೆ. ಅಡಿಗರು ತೀರಿಕೊಂಡಿಲ್ಲ. ಇದು ಸುಳ್ಳು ಸುದ್ದಿ- ಎಂದು ಕಿರಂ ಮತ್ತೆ ಮತ್ತೆ ಹೇಳುತ್ತ ಶತಪಥ ಹಾಕುತ್ತ ಇದ್ದರು. ರತ್ನಮಾಲಾಪ್ರಕಾಶ್ ಅಡಿಗರ ಪಾದಮೂಲದಲ್ಲಿ ಕುಳಿತು, ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು ಎಂಬ ಅವರ ಜನಪ್ರಿಯ ಕವಿತೆಯನ್ನು ಹಾಡಿದಾಗ ನೆರೆದಿದ್ದವರ ಕಣ್ಣಲ್ಲೆಲ್ಲ ನೀರು ತುಂಬುತ್ತ ಇತ್ತು.
ನನಗೆ ಕಿರಂ ಮಾತು ನೂರಕ್ಕೆ ನೂರು ನಿಜ ಎನ್ನಿಸಿತು. ಕವಿಯು ತೀರಿದ ಮೇಲೆ ಕವಿತೆಯೇ ನಾಲಗೆ ! ಎಂದು ವಟಗುಟ್ಟುತ್ತ ಅಡಿಗರ ಕೂಪಮಂಡೂಕ ಪದ್ಯ ಹಿಡಿದು ಏಕಾಂತದಲ್ಲಿ ಮುಳುಗಿದೆ. ಅಡಿಗರು ಮಾತ್ರ ನಿಜ; ಉಳಿದೆಲ್ಲ ಜಗತ್ತು ಸುಳ್ಳು ಅನ್ನಿಸಿತು, ಆ ಮುಳುಗಡೆಯ ಎದೆಗುದಿಯ ಕ್ಷಣ.
ಎಚ್. ಎಸ್. ವೆಂಕಟೇಶಮೂರ್ತಿ