Advertisement

“ಔಪಚಾರಿಕ ಮಾತು, ಸೋಗಲಾಡಿತನದ ಸೌಜನ್ಯ ದೂರವಿಟ್ಟವರು ಅಡಿಗರು’​​​​​​​

06:50 AM Jul 02, 2018 | |

ಉಡುಪಿ: ಔಪಚಾರಿಕವಾದ ಮಾತು, ಸೋಗಲಾಡಿತನದ ಸೌಜನ್ಯ  ಮೊದಲಾದವುಗಳನ್ನು  ತನ್ನ ಕಾವ್ಯದ ಹತ್ತಿರ ಸುಳಿಯದಂತೆ ಎಚ್ಚರ ವಹಿಸಿ ದವರು ಗೋಪಾಲಕೃಷ್ಣ  ಅಡಿಗರು. ಯಾವ ಬಗೆಯ ಕಸುಬುದಾರಿಕೆ ಕಾವ್ಯದ ಮಾತನ್ನು ನಿಜಗೊಳಿಸುತ್ತದೆ ಎನ್ನುವ  ಶೋಧನೆಯಲ್ಲಿ ನಿರಂತರ  ತೊಡಗಿಸಿ ಕೊಂಡಿದ್ದರು. ತನ್ನ ಅನುಭವವು ಓದುಗನಿಗೆ “ಅಹುದಹುದು’ ಅನ್ನಿಸು ವಂತೆ ವೇದ್ಯಗೊಳಿಸುವುದು ಹೇಗೆಂಬ ಬಗ್ಗೆ ಸದಾ ಯೋಚಿಸಿದವರು ಅಡಿಗರು ಎಂದು ಹಿರಿಯ ಸಾಹಿತಿ ಜಿ. ರಾಜಶೇಖರ ಅಭಿಪ್ರಾಯಪಟ್ಟರು.

Advertisement

ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ರಥಬೀದಿ ಗೆಳೆಯರು ಉಡುಪಿ  ಇದರ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ರವಿವಾರ ನಡೆದ ಗೋಪಾಲಕೃಷ್ಣ ಅಡಿಗರ ಜನ್ಮಶತಮಾನೋತ್ಸವವನ್ನು ಅವರು ಉದ್ಘಾಟಿಸಿ ಮಾತನಾಡಿದರು.
 
ಕಾವ್ಯ ತನ್ನ ಅನುಭವದ ಅಭಿ ವ್ಯಕ್ತಿಯಾಗಬೇಕೆ ಹೊರತೂ ಸರ್ವೇ ಸಾಮಾನ್ಯವಾದ ಮಾತುಗಳ ಲಯಬದ್ಧ ಹೆಣಿಗೆ ಆಗಕೂಡದೆಂದು ಹಠ ತೊಟ್ಟವರು ಅಡಿಗರು. “ಅಡಿಗರು ಒಂದು ಜನಾಂಗದ ಕಣ್ಣು ತೆರೆಸಿದ ಕವಿ’ ಎಂದು ಲಂಕೇಶ್‌ ಹೇಳಿದ್ದರು. 1969ರಲ್ಲಿ ಪ್ರಕಟವಾದ ಉಡುಪಿಯ ಆದ್ಯಗುರು ಆನಂದತೀರ್ಥರು, ಮತ್ತು ಅವರು ಪ್ರವರ್ತಿಸಿದ ಮಠಗಳ ಪರಂಪರೆ, ಜೀವನ ವೃತ್ತಾಂತಗಳನ್ನು ಬೆರಗಿನಲ್ಲಿ ಅಡಿಗರು ಬಣ್ಣಿಸಿದ್ದಾರೆ. ಹೀಗೆ ಎಲ್ಲ ಕ್ಷೇತ್ರಗಳ ವಿಚಾರಧಾರೆಗಳನ್ನು ಇಟ್ಟುಕೊಂಡು ಕಾವ್ಯದ ಮೂಲಕ ಜನರನ್ನು ಎಚ್ಚರಿಸುವ ಕಾರ್ಯ ಮಾಡಿದ ಓರ್ವ ಹೆಮ್ಮೆಯ ಕವಿ ಅಡಿಗರು ಎಂದರು.

ಬೆಂಗಳೂರು ಅಡಿಗ ಟ್ರಸ್ಟಿನ ಜಯರಾಮ ಅಡಿಗ ಮಾತನಾಡಿ, ಅಡಿಗರ ಜೀವನ ಚರಿತ್ರೆ ಬರೆಯುವುದಕ್ಕೆ ಬೇಕಾದ ಸಾಕಷ್ಟು ಅಂಶಗಳು ಪ್ರಸ್ತುತ ಲಭ್ಯವಿವೆ. ಅಡಿಗರು ಪ್ರೌಢಶಾಲೆಗೆ ತೆರಳುತ್ತಿರುವ ಕಾಲದಿಂದಲೂ ಬರೆದ ದಿನಚರಿ ದೊರಕಿದ್ದು, ಅದರಲ್ಲಿ ಕುತೂಹಲಕಾರಿ ಸನ್ನಿವೇಶಗಳಲ್ಲದೆ, ಅವರ ಬಗ್ಗೆ ಇದುವರೆಗೆ ತಿಳಿಯದ ಹಲವಾರು ವಿಚಾರಧಾರೆಗಳನ್ನು ಅವರೇ ಬರೆದಿದ್ದರು ಎಂದರು. 

ಅಧ್ಯಕ್ಷತೆ ವಹಿಸಿದ್ದ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಅರವಿಂದ ಮಾಲಗುತ್ತಿ ಮಾತನಾಡಿ, ಅಡಿಗರು ಕನ್ನಡದ ಓರ್ವ ಧೀಮಂತ ಕವಿ. ಆದುದರಿಂದ ಅವರ ಶತಮಾನೋತ್ಸವ ಕಾರ್ಯಕ್ರಮವನ್ನು ನಾಡಿನಾದ್ಯಂತ ಹಮ್ಮಿಕೊಳ್ಳಲಾಗಿದೆ. ಅಡಿಗರ ಬಗ್ಗೆ ಇನ್ನಷ್ಟು ವಿಚಾರ ಸಂಕಿರಣ ನಡೆದರೂ ಅವರಿಗೆ ನಾವು ಕೊಡುವ ಗೌರವ ಕಡಿಮೆಯೇ ಆಗುತ್ತದೆ. ಎಲ್ಲ ಕವಿಗಳಿಗೂ ಕಲಶಪ್ರಾಯವಾದ ಕವಿತೆಗಳನ್ನು ಬರೆದಿದ್ದ ಅವರನ್ನು “ಮಹಾಕವಿ’ಯೆಂದು ಕರೆಯಬಹುದು ಎಂದರು. 

ಅಕಾಡೆಮಿ ಸದಸ್ಯ ಸಂಚಾಲಕಿ ಮುಮ್ತಾಜ್‌ ಬೇಗಂ, ರಥಬೀದಿ ಗೆಳೆಯರು ಸಂಸ್ಥೆಯ ಅಧ್ಯಕ್ಷ ಮುರಳೀಧರ ಉಪಾಧ್ಯ ಹಿರಿಯಡಕ ಉಪಸ್ಥಿತರಿದ್ದರು. ಅಕಾಡೆಮಿ ರಿಜಿಸ್ಟ್ರಾರ್‌ ಕರಿಯಪ್ಪ ಎನ್‌. ಸ್ವಾಗತಿಸಿದರು. ರಥಬೀದಿ ಗೆಳೆಯರು ಸಂಸ್ಥೆಯ ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಷಿ ನಿರೂಪಿಸಿ, ವಂದಿಸಿದರು.

Advertisement

“ಭಾವಗೀತಕ್ಕಷ್ಟೇ ಹೊಸಗನ್ನಡ ರುದ್ರಕ್ಕೆ ಗಂಭೀರಕ್ಕೆ ಸುದೀರ್ಘ‌ಕ್ಕೆ ಹಳೆಗನ್ನಡ ಸೊನ್ನೆ ವ್ಯಂಜನದ ರುಚಿ ಹತ್ತಿತೇಕೆ 
ಅರ್ಥ ಗೌರವವಿರದ ವಾಗಾಡಂಬರಕ್ಕೆ, ಬೂಟಾಟಿಕೆಗೆ ನಾಂದಿ ಹಾಕಿದ್ದೇಕೆ ಹೇಳಿ, ಗುರುವೇ’ಎಂದು ಬಿಎಂಶ್ರೀ ಅವರ ವ್ಯಕ್ತಿತ್ವದ ದ್ವಂದ್ವ, ವಿರೋಧಾಭಾಸಗಳನ್ನು ಅಡಿಗರು ಹೀಗೆ ಬರೆದಿದ್ದರೆಂದು ಹಿರಿಯ ಸಾಹಿತಿ ಜಿ. ರಾಜಶೇಖರ್‌ ನೆನಪಿಸಿಕೊಂಡರು.  

Advertisement

Udayavani is now on Telegram. Click here to join our channel and stay updated with the latest news.

Next