Advertisement

ದಿಲ್ಲಿಗೆ ಮಾಲಿನ್ಯದ ಲಾಕ್‌ಡೌನ್‌; ಪರಿಸರ ಸಚಿವ ಗೋಪಾಲ ರಾಯ್‌ ಘೋಷಣೆ

07:46 PM Nov 17, 2021 | Team Udayavani |

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೊರೊನಾ ಲಾಕ್‌ಡೌನ್‌ ಮುಗಿದು ಜನರು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಹೆಚ್ಚಿದ ಪರಿಸರ ಮಾಲಿನ್ಯದ ಕಾರಣದಿಂದಾಗಿ ಮುಂದಿನ ಆದೇಶದ ವರೆಗೆ ಶಾಲೆ, ಕಾಲೇಜುಗಳು ಮತ್ತು ಇನ್ನಿತರ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ನಿರ್ಧರಿಸಲಾಗಿದೆ.

Advertisement

ನ.21ರ ವರೆಗೆ ಕಟ್ಟಡ ನಿರ್ಮಾಣ ಮತ್ತು ನಿರುಪಯುಕ್ತ ಕಟ್ಟಡಗಳನ್ನು ಕೆಡವಿ ಹಾಕುವ ಪ್ರಕ್ರಿಯೆಗೆ ನಿಷೇಧ ಹೇರಲಾಗಿದೆ ಎಂದು ದೆಹಲಿಯ ಪರಿಸರ ಸಚಿವ ಗೋಪಾಲ ರಾಯ್‌ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ರಾಯ್‌, ನವದೆಹಲಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಾರಿಗೆ ಬಲಪಡಿಸುವ ನಿಟ್ಟಿನಲ್ಲಿ ಖಾಸಗಿಯವರಿಂದ 1 ಸಾವಿರ ಸಿಎನ್‌ಜಿ ಬಸ್‌ಗಳನ್ನು ಬಳಕೆ ಮಾಡಲು ನಿರ್ಧರಿಸಲಾಗಿದೆ. ಗುರುವಾರದಿಂದ ಅವುಗಳ ಸಂಚಾರ ಶುರುವಾಗಲಿದೆ.

ಶಾಲೆಗಳು, ಕಾಲೇಜುಗಳು, ಗ್ರಂಥಾಲಯಗಳು, ತರಬೇತಿ ಕೇಂದ್ರಗಳನ್ನು ಮುಂದಿನ ಆದೇಶದ ವರೆಗೆ ಮುಚ್ಚಲಾಗುತ್ತದೆ ಎಂದು ತಿಳಿಸಿದ್ದಾರೆ. ಜನರು ಮೆಟ್ರೋ ಮತ್ತು ದೆಹಲಿ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ನಿಂತುಕೊಂಡಾದರೂ ಪ್ರಯಾಣಿಸಲು ಅವಕಾಶ ನೀಡುವಂತೆ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ. ಡೀಸೆಲ್‌ ಮತ್ತು ಪೆಟ್ರೋಲ್‌ ಚಾಲಿತ ಕ್ರಮವಾಗಿ 10 ಹಾಗೂ 15 ವರ್ಷ ಮೀರಿದ ವಾಹನಗಳನ್ನು ರಸ್ತೆಯಲ್ಲಿ ಸಂಚರಿಸದಂತೆ ಮಾಡಲು ಪೊಲೀಸರಿಗೆ ಸೂಚಿಸಲಾಗಿದೆ ಎಂದಿದ್ದಾರೆ.

ವರ್ಕ್‌ ಫ್ರಂ ಹೋಮ್‌:
ನವದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಖಾಸಗಿ ಸಂಸ್ಥೆಗಳ ಸಿಬ್ಬಂದಿ ಶೇ.50 ಮಂದಿ ಮಾತ್ರ ಕಚೇರಿಗೆ ಬರುವಂತೆ ಸೂಚಿಸಲಾಗಿದೆ. ಇದರ ಜತೆಗೆ ದೆಹಲಿ ಸರ್ಕಾರಿ ಉದ್ಯೋಗಿಗಳಿಗೆ ಭಾನುವಾರದ ವರೆಗೆ ಮನೆಯಿಂದಲೇ ಕೆಲಸ ಮಾಡುವ (ವರ್ಕ್‌ ಫ್ರಂ ಹೋಮ್‌) ಅವಕಾಶ ಕಲ್ಪಿಸಲಾಗಿದೆ.

Advertisement

ನೀರು ಸಿಂಪಡಿಸಲು ಕ್ರಮ:
ನವದೆಹಲಿಯಲ್ಲಿ ಹೆಚ್ಚಿನ ಪ್ರಮಾಣದ ಮಾಲಿನ್ಯ ಹೊಂದಿರುವ ಸ್ಥಳಗಳನ್ನು ಗುರುತಿಸಲಾಗಿದೆ. ಅಲ್ಲಿ 372 ಟ್ಯಾಂಕರ್‌ಗಳ ಮೂಲಕ ನೀರು ಚಿಮುಕಿಸಲು ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ:ಹಲ್ಲೆ ನಡೆಸಿದವರಿಗೆ 1 ಲಕ್ಷ ರೂ.: ತಮಿಳು ನಟ ಸೂರ್ಯ ನಿವಾಸಕ್ಕೆ ಬಿಗಿ ಭದ್ರತೆ

ಕಾಮಗಾರಿ ಸ್ಥಗಿತ:
ನವದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ವ್ಯಾಪ್ತಿ ಪ್ರದೇಶ (ಎನ್‌ಸಿಆರ್‌)ಗಳಲ್ಲಿ ಕಟ್ಟಡ ನಿರ್ಮಾಣ ಮತ್ತು ನಿರುಪಯುಕ್ತ ಕಟ್ಟಡಗಳನ್ನು ಕೆಡವಿ ಹಾಕುವ ಕೆಲಸಗಳನ್ನು ನ.21ರ ವರೆಗೆ ನಿಷೇಧಿಸಲು ನಿರ್ಧರಿಸಲಾಗಿದೆ. ಆದರೆ, ರೈಲ್ವೆ ಇಲಾಖೆಯ ನಿರ್ಮಾಣ ಕಾಮಗಾರಿ, ಮೆಟ್ರೋ ನಿಲ್ದಾಣ ನಿರ್ಮಾಣ ಕೆಲಸವನ್ನು ಮುಂದುವರಿಸಲು ಅವಕಾಶ ನೀಡಲಾಗಿದೆ. ನವದೆಹಲಿ ಮಹಾನಗರ ವ್ಯಾಪ್ತಿಯಿಂದ 300 ಕಿಮೀ ದೂರದಲ್ಲಿರುವ 11 ವಿದ್ಯುತ್‌ ಉತ್ಪಾದನಾ ಕೇಂದ್ರಗಳ ಪೈಕಿ ಆರನ್ನು ನ.30ರ ವರೆಗೆ ಕಾರ್ಯನಿರ್ವಹಿಸಲು ಪರಿಸರ ಸಚಿವಾಲಯದ ವಾಯು ಮಾಲಿನ್ಯ ಗುಣಮಟ್ಟ ನಿರ್ವಹಣಾ ಆಯೋಗ ಸೂಚಿಸಿದೆ.

ಐಶಾರಾಮಿ ರೈತರ ಮೇಲೆ ಆರೋಪ
ಕೃಷಿ ತ್ಯಾಜ್ಯ ಸುಡದಂತೆ ಸರ್ಕಾರ ರೈತರ ಮನವೊಲಿಕೆ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಈ ನಿಟ್ಟಿನಲ್ಲಿ ರೈತರನ್ನು ಶಿಕ್ಷಿಸಲು ಬಯಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ. ನ್ಯಾಯಪೀಠದಲ್ಲಿದ್ದ ನ್ಯಾ.ಸೂರ್ಯಕಾಂತ್‌ ದಿಲ್ಲಿಯ ಪಂಚತಾರಾ ಹೊಟೇಲ್‌ಗ‌ಳಲ್ಲಿ ನಿದ್ರಿಸುವ ವರ್ಗದವರು ಸದ್ಯದ ಪರಿಸ್ಥಿತಿಗೆ ರೈತರನ್ನು ದೂರುತ್ತಿದ್ದಾರೆ. ಸಣ್ಣ ಪ್ರಮಾಣದ ಹಿಡುವಳಿ ಹೊಂದಿರುವವರು ಅಂಥ ಪ್ರಯತ್ನ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಪ್ರತಿಕ್ರಿಯೆ ನೀಡಿ, ಸುದ್ದಿವಾಹಿನಿಗಳಲ್ಲಿ ಮಾಲಿನ್ಯ ಬಗ್ಗೆ ನಡೆಯುವ ಚರ್ಚೆಗಳಿಂದಲೇ ಮಾಲಿನ್ಯ ಉಂಟಾಗುತ್ತದೆ. ವಾಹಿನಿಗಳಿಗೆ ಪರಿಸ್ಥಿತಿ ಏನು ಮತ್ತು ಏನಾಗುತ್ತಿದೆ ಎನ್ನುವುದೇ ಗೊತ್ತಾಗುವುದಿಲ್ಲ. ಕೆಲವೊಂದು ಹೇಳಿಕೆಗಳಿಗೆ ಮತ್ತು ಪರಿಸ್ಥಿತಿಗಳಿಗೆ ಸಂಬಂಧವೇ ಇರುವುದಿಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆಗಿರುವ ಕಾರ್ಯಸೂಚಿ ಇರುತ್ತದೆ’ ಸಿಜೆಐ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಮಾಲಿನ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ನ್ಯಾಯಪೀಠ ಹೇಳಿತು. ಆಡಳಿತಶಾಹಿ ಏನೂ ನಿರ್ಧಾರ ಕೈಗೊಳ್ಳುವುದಿಲ್ಲ. ಎಲ್ಲವನ್ನೂ ಕೋರ್ಟ್‌ಗಳೇ ಸೂಚಿಸಬೇಕು ಎಂಬ ಧೋರಣೆ ಹೊಂದಿವೆ ಎಂದು ನ್ಯಾಯಪೀಠ ಟೀಕಿಸಿದೆ.

ಜಾಹೀರಾತೇ ಹೆಚ್ಚು; ಕೆಲಸ ಕಮ್ಮಿ: ಬಿಜೆಪಿ
ವಾಯು ಮಾಲಿನ್ಯ ಪ್ರಮಾಣ ತಡೆಯಲು ಸಿಎಂ ಅರವಿಂದ ಕೇಜ್ರಿವಾಲ್‌ ನೇತೃತ್ವದ ಸರ್ಕಾರ ಕೆಲಸ ಮಾಡಿದ್ದಕ್ಕಿಂತ ಪ್ರಚಾರ ಮಾಡಿದ್ದೇ ಹೆಚ್ಚು ಎಂದು ಬಿಜೆಪಿ ಆರೋಪಿಸಿದೆ.

ಪಕ್ಷದ ವಕ್ತಾರ ಸಂಭಿತ್‌ ಪಾತ್ರ ಮಾತನಾಡಿ ದೆಹಲಿ ಸರ್ಕಾರ ಕೃಷಿ ತ್ಯಾಜ್ಯವನ್ನು ವಾಯು ಮಾಲಿನ್ಯವಿಲ್ಲದೆ ನಾಶ ಮಾಡುವ ವ್ಯವಸ್ಥೆ, ಬಯೋ-ಡಿಕಂಪೋಸರ್‌ ಬಗ್ಗೆ ಪ್ರಚಾರ ಮಾಡಲು 4 ಸಾವಿರ ಪಾಲು ಹೆಚ್ಚು ವೆಚ್ಚ ಮಾಡಿದೆ ಎಂದು ದೂರಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ಮೂಲಕ ಲಭಿಸಿದ ಮಾಹಿತಿಯನ್ನು ಉಲ್ಲೇಖಿಸಿ ಪಾತ್ರಾ ಈ ಆರೋಪ ಮಾಡಿದ್ದಾರೆ.

ಪ್ರತಿಯೊಂದು ಬಯೋ- ಡೀಕಂಪೋಸರ್‌ಗೆ 40 ಸಾವಿರ ರೂ. ವೆಚ್ಚ ಮಾಡಲಾಗಿದೆ ಮತ್ತು ರಾಷ್ಟ್ರೀಯ ರಾಜಧಾನಿ ವ್ಯಾಪ್ತಿ ಪ್ರದೇಶ (ಎನ್‌ಸಿಆರ್‌)ದ 310 ಮಂದಿ ಮಾತ್ರ ಪ್ರಯೋಜನಪಡೆದುಕೊಂಡಿದ್ದಾರೆ ಎಂದರು. 15.80 ಕೋಟಿ ರೂ. ಮೊತ್ತವನ್ನು ದೆಹಲಿ ಸರ್ಕಾರ ರೈತರಿಗೆ ಈ ವಿಚಾರದಲ್ಲಿ ತರಬೇತಿ ನೀಡಲು ವೆಚ್ಚ ಮಾಡಿದೆ ಎಂದು ದೂರಿದ್ದಾರೆ.

ಮಾಲಿನ್ಯದಿಂದ ದಿಲ್ಲಿಗೆ ಪ್ರತಿ ವರ್ಷ 1 ಲಕ್ಷ ಕೋಟಿ ನಷ್ಟ
ಮಾಲಿನ್ಯದಿಂದಾಗಿ ನವದೆಹಲಿಗೆ ಪ್ರತಿವರ್ಷ 1 ಲಕ್ಷ ಕೋಟಿ ರೂ. ನಷ್ಟ ಉಂಟಾಗುತ್ತಿದೆ ಎಂದು ಅಧ್ಯಯನವೊಂದರಲ್ಲಿ ಉಲ್ಲೇಖೀಸಲಾಗಿದೆ. ಮಾಲಿನ್ಯದಿಂದಾಗಿ ದೇಶಕ್ಕೆ ಜಿಡಿಪಿಯ ಒಟ್ಟು ಶೇ.4.5ರಷ್ಟು ನಷ್ಟವಾಗುತ್ತದೆ ಎಂದು ಲಾನ್ಸೆಟ್‌ ಮತ್ತು ಹಾರ್ವರ್ಡ್‌ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. ಲಾನ್ಸೆಟ್‌ ಅಧ್ಯಯನ ಪ್ರಕಾರ ಕೊರೊನಾದಿಂದಾಗಿ ದೆಹಲಿಯಲ್ಲಿ 18 ತಿಂಗಳ ಅವಧಿಯಲ್ಲಿ 25 ಸಾವಿರ ಮಂದಿ ಅಸುನೀಗಿದ್ದಾರೆ. ಆದರೆ, ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದಂತೆ 2020ರಲ್ಲಿ 54 ಸಾವಿರ ಮಂದಿ ಅಸುನೀಗಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

ಏನೇನು ನಿಯಂತ್ರಣ ಕ್ರಮ?
– ಶಾಲೆ, ಕಾಲೇಜು, ತರಬೇತಿ ಕೇಂದ್ರಗಳು, ಗ್ರಂಥಾಲಯಗಳು ಬಂದ್‌ ಶೇ.50- ಇಷ್ಟು ಸಿಬ್ಬಂದಿಯಲ್ಲಿ ಕಾರ್ಯನಿರ್ವಹಿಸಲು ಖಾಸಗಿ ಸಂಸ್ಥೆಗಳಿಗೆ ಸೂಚನೆ
-ಸರ್ಕಾರಿ ಉದ್ಯೋಗಿಗಳಿಗೆ ವರ್ಕ್‌ ಫ್ರಂ ಹೋಮ್‌
-ಕಟ್ಟಡ ನಿರ್ಮಾಣ, ಕೆಡವಿ ಹಾಕುವ ಕೆಲಸ ನ.21ರ ವರೆಗೆ ಬಂದ್‌
-ನ.30ರ ವರೆಗೆ 6 ವಿದ್ಯುತ್‌ ಸ್ಥಾವರಗಳು ಕಾರ್ಯನಿರ್ವಹಣೆ
-ಇಂದಿನಿಂದ 1 ಸಾವಿರ ಸಿಎನ್‌ಜಿ ಬಸ್‌ ಸಂಚಾರ
13- ಮಾಲಿನ್ಯ ಹಾಟ್‌ಸ್ಪಾಟ್‌
371- ಟ್ಯಾಂಕರ್‌ಗಳ ಮೂಲಕ ನೀರು ಚಿಮುಕಿಸಲು ಕ್ರಮ

Advertisement

Udayavani is now on Telegram. Click here to join our channel and stay updated with the latest news.

Next