Advertisement

ಗೋವಾ ಬೀಚ್‌ನಲ್ಲಿ ಕಡಲೆಕಾಯಿ ಮಾರುತ್ತಿದ್ದ ಕರ್ನಾಟಕದ ಹುಡುಗ ಈಗ ಬ್ರಿಟನ್‌  ಸೈನಿಕ

09:26 PM Jul 06, 2021 | Team Udayavani |

ವರದಿ : ದತ್ತು ಕಮ್ಮಾರ

Advertisement

ಕೊಪ್ಪಳ: ಒಂದೊತ್ತಿನ ಊಟಕ್ಕೂ ಪರಿತಪಿಸಿ ಕಣ್ಣೀರಿಡುತ್ತಾ, ಗೋವಾ ಬೀಚ್‌ನಲ್ಲಿ ಕಡಲೆಕಾಯಿ ಮಾರಾಟ ಮಾಡಿ ಹೆತ್ತವರ ಹೊಟ್ಟೆ ತುಂಬಿಸುತ್ತಿದ್ದ ಭಾರತೀಯ ಯುವಕ ಇಂದು ಬ್ರಿಟನ್‌ ಪೌರತ್ವ ಪಡೆದು, ಆ ದೇಶದ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಇಷ್ಟಾದರೂ ಭಾರತದ ಮೇಲಿನ ಪ್ರೀತಿ, ಹುಟ್ಟಿ ಬೆಳೆದ ಮಣ್ಣಿನ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾನೆ.

ಜಿಲ್ಲೆಯ ಶಹಪುರ ಗ್ರಾಮದ ಗೋಪಾಲ್‌ ವಾಕೋಡಿ ಇಂದು ಬ್ರಿಟಿಷ್‌ ಸೈನಿಕನಾಗಿ ಅಲ್ಲಿಯೇ ಪತ್ನಿ, ಮಗುವಿನೊಂದಿಗೆ ನೆಲೆಸಿದ್ದಾರೆ. ಯಲ್ಲಪ್ಪ ಹಾಗೂ ಫಕೀರವ್ವ ದಂಪತಿಯ ಐವರು ಮಕ್ಕಳಲ್ಲಿ ಗೋಪಾಲ ವಾಕೋಡಿ ಕೂಡ ಒಬ್ಬರು. 30 ವರ್ಷಗಳ ಹಿಂದೆ ಐವರ ಮಕ್ಕಳ ಹಸಿವು ನೀಗಿಸಲು ದುಡಿಮೆ ಅರಸಿ ಗೋವಾಗೆ ಗುಳೆ ಹೋಗಿದ್ದರು. ಗೋವಾ ಬೀಚ್‌ನಲ್ಲಿ ಕಡಲೆ ಕಾಯಿ ಮಾರಿ ಜೀವನ ನಡೆಸುತ್ತಿದ್ದರು. ಪತಿ ನಿತ್ಯ ಮದ್ಯ ಸೇವಿಸಿ ತಾಯಿಗೆ ಕಿರುಕುಳ ಕೊಡುತ್ತಿದ್ದನ್ನು ಕಂಡು ಗೋಪಾಲ ವಾಕೋಡಿ ಕಣ್ಣೀರಿಡುತ್ತಿದ್ದ. ಒಂದೊತ್ತಿನ ಊಟವೂ ಸಿಗುತ್ತಿರಲಿಲ್ಲ. ಇಂತಹ ಪರಿಸ್ಥಿತಿಯನ್ನು ನೋಡಿ 10 ವರ್ಷದವನಾಗಿದ್ದಾಗಲೇ ಬೀಚ್‌ನಲ್ಲಿ ಕಡಲೆಕಾಯಿ ಮಾರಾಟ ಮಾಡುತ್ತಿದ್ದ.1995ರಲ್ಲಿ ತಂದೆ ತೀರಿಕೊಂಡಾಗ ಅಂತ್ಯಸಂಸ್ಕಾರ ಮಾಡಲೂ ಹಣವಿಲ್ಲದೇ ಪರದಾಡಿದ್ದಾರೆ.

ಬ್ರಿಟಿಷ್‌ ದಂಪತಿ ಮಡಿಲು ಸೇರಿದ ಗೋಪಾಲ: ಗೋವಾ ಬೀಚ್‌ನಲ್ಲಿ ಗೋಪಾಲ್‌ ವಿದೇಶಿ ಪ್ರವಾಸಿಗರಿಗೆ ಕಡಲೆಕಾಯಿ ತಗೊಳಿ ಎಂದು ಗೋಗರೆದಿದ್ದಾನೆ. ಹೀಗೆ ಕಡಲೆ ಮಾರುವ ವೇಳೆ ಬ್ರಿಟ್ಸ್‌ಕೊರೊಲ್‌ ಥಾಮಸ್‌ ಮತ್ತು ಕೊಲಿನ್‌ ಹ್ಯಾನ್ಸನ್‌ ಎನ್ನುವ ಬ್ರಿಟಿಷ್‌ ದಂಪತಿ ಕಣ್ಣಿಗೆ ಬಿದ್ದಿದ್ದಾನೆ. ತಮ್ಮ ನಿಕಟವರ್ತಿ ಲಿಂಡಾ ಹ್ಯಾನ್ಸನ್‌ ಜತೆ ಭಾರತ ಪ್ರವಾಸದಲ್ಲಿದ್ದ ಈ ದಂಪತಿ ಬಾಲಕನ ಸ್ಥಿತಿ ನೋಡಿದ್ದಾರೆ. ಬಿಸಿಲನ್ನೂ ಲೆಕ್ಕಿಸದೆ ಬೀಚ್‌ನಲ್ಲಿ ಬಾಲಕ ಗೋಪಿ ಪ್ರವಾಸಿಗರಿಗೆ ಕಡಲೆ ತಗೊಳ್ಳಿ ಎಂದು ವಿನಂತಿಸುವ ಪರಿ, ಮುಗ್ಧತೆ, ಅವನಲ್ಲಿನ ಜೀವನ ಪ್ರೀತಿ ಕಂಡು ಆತನಿಗೆ ಹತ್ತಿರದ ಬಟ್ಟೆ ಅಂಗಡಿಗೆ ಕರೆದುಕೊಂಡು ಹೋಗಿ ಹೊಸ ಬಟ್ಟೆ, ಬಿದಿರಿನ ಬುಟ್ಟಿ, ವಾಚ್‌ ಕೊಡಿಸಿದ್ದಾರೆ. ನಂತರ ಆತನ ತಾಯಿ ವಾಸವಾಗಿದ್ದ ಸ್ಥಳಕ್ಕೆ ತೆರಳಿ ಅವರ ಕುಟುಂಬದ ಸ್ಥಿತಿ ನೋಡಿ ಆರ್ಥಿಕ ನೆರವು ನೀಡಿ ಮುಂದಿನ ವರ್ಷ ಮತ್ತೆ ಪ್ರವಾಸಕ್ಕೆ ಬರುವ ಭರವಸೆ ನೀಡಿ ತೆರಳಿದ್ದಾರೆ.

ಗೋಪಾಲನಿಗೆ ಕ್ರಿಕೆಟ್‌ ತರಬೇತಿ: ಮರುವರ್ಷ ಭಾರತ ಪ್ರವಾಸ ಕೈಗೊಂಡಿದ್ದ ಬ್ರಿಟನ್‌ ದಂಪತಿ ಗೋವಾದಲ್ಲಿ ಗೋಪಾಲ್‌ ಅವರ ಕುಟುಂಬವನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ್ದಾರೆ. ಆ ಕಷ್ಟದ ಸ್ಥಿತಿಯನ್ನು ನೋಡಿದ ಕುಟುಂಬ ಗೋಪಾಲನನ್ನು ನಮಗೆ ಕೊಡುವಂತೆಯೂ ಮನವಿ ಮಾಡಿದ್ದಾರೆ. ಆತನ ಭವಿಷ್ಯ ರೂಪಿಸುವ ಹೊಣೆ ನೀಡುವಂತೆಯೂ ತಾಯಿ ಫಕೀರಮ್ಮ ಅವರೊಂದಿಗೆ ಕಾನೂನಿನ ಪ್ರಕಾರವೇ ಒಡಂಬಡಿಕೆ ಮಾಡಿಕೊಂಡಿದ್ದಾರೆ.

Advertisement

12ನೇ ವಯಸ್ಸಿಗೆ ಗೋಪಾಲನನ್ನು ಹೆತ್ತ ಮಗನಂತೆ ನೋಡಿಕೊಂಡ ಬ್ರಿಟನ್‌ ದಂಪತಿ ಇಂಗ್ಲೆಂಡ್‌ ಗೆ ಕರೆದೊಯ್ದಿದ್ದಾರೆ. ನಂತರ 18ನೇ ವರ್ಷದವರೆಗೂ ಭಾರತ ಮತ್ತು ಇಂಗ್ಲೆಂಡ್‌ ಎರಡೂ ಕಡೆ ವಾಸವಾಗಿದ್ದರು. 2009ರಲ್ಲಿ ಇಂಗ್ಲೆಂಡ್‌ ಪೌರತ್ವ ಪಡೆದಿದ್ದಾರೆ. ಅಲ್ಲಿಂದ ತಾಯಿಗೆ ಆರ್ಥಿಕ ನೆರವೂ ನೀಡಿದ್ದಾರೆ. ಪರಿಪೂರ್ಣ ಶಿಕ್ಷಣ ಇಲ್ಲದ್ದರಿಂದ ಗೋಪಾಲನಿಗೆ ಇಂಗ್ಲೆಂಡ್‌ನ‌ ಸ್ಥಳೀಯ ಮಿಲಿಟರಿ ಬ್ಯಾರಕ್‌ನಲ್ಲಿ ಕ್ರಿಕೆಟ್‌ ತರಬೇತಿ ಕೊಡಿಸಿದ್ದಾರೆ. ಹಂತ ಹಂತವಾಗಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಗೋಪಿ ಸ್ಥಳೀಯ ಕ್ರಿಕೆಟ್‌ ತಂಡದ ನಾಯಕನಾಗಿ ಹೊರಹೊಮ್ಮಿದ್ದಾನೆ. ಆತನ ಆಟದ ಮೇಲಿನ ಶ್ರದ್ಧೆ, ಪ್ರತಿಭೆಗೆ ಸಂಘ-ಸಂಸ್ಥೆಗಳು ಅಭಿನಂದಿಸಿವೆ.

ಕ್ರಿಕೆಟ್‌ ನಲ್ಲಿ ಗೋಪಾಲನ ಚಾಣಾಕ್ಷತೆಯನ್ನು ಕಂಡ ಮಿಲಿಟರಿ ಪಡೆ ಅಧಿ ಕಾರಿಯೊಬ್ಬರು ಸೈನ್ಯಕ್ಕೆ ಸೇರುವ ಆಹ್ವಾನ ನೀಡಿದ್ದಾರೆ. ಇದಕ್ಕೊಪ್ಪಿದ ಗೋಪಾಲ ಕಳೆದ 10 ವರ್ಷಗಳಿಂದ ಬ್ರಿಟಿಷ್‌ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಭಾರತದ ಮೇಲಿನ ಪ್ರೀತಿ ಮರೆತಿಲ್ಲ: ಇಂಗ್ಲೆಂಡ್‌ನ‌ಲ್ಲಿ ಜಾಸ್ಮಿನ್‌ ಎಂಬ ಯುವತಿ ವಿವಾಹವಾಗಿರುವ ಗೋಪಾಲ್‌ ಅವರಿಗೆ ಡೈಸಿ ಎಂಬ ಹೆಣ್ಣು ಮಗಳಿದ್ದಾಳೆ. 10 ವರ್ಷದಿಂದ ಇಂಗ್ಲೆಂಡ್‌ನ‌ಲ್ಲಿ ವಾಸ ಮಾಡಿಕೊಂಡಿದ್ದು, ಕ್ರಿಕೆಟ್‌ ಮತ್ತು ಮಿಲಿಟರಿ ಸೇವೆಗಾಗಿ ಅಫ್ಘಾನಿಸ್ತಾನ್‌, ಕೀನ್ಯಾ ಮತ್ತು ಜರ್ಮನಿಗೂ ಸಂಚರಿಸಿದ್ದಾರೆ. ಬ್ರಿಟಿಷ್‌ ಪೌರತ್ವ ಪಡೆದು ಅಲ್ಲಿಯೇ ನೆಲೆಸಿದ್ದಾರೆ. ಇಷ್ಟಾದರೂ ಭಾರತದ ಬಗ್ಗೆ ಹೆಮ್ಮೆ, ಹುಟ್ಟೂರಿನ ಬಗ್ಗೆ ಅಭಿಮಾನ ಮರೆತಿಲ್ಲ. ಪ್ರತಿ ಮೂರು ವರ್ಷಕ್ಕೊಮ್ಮೆ ಕೊಪ್ಪಳ ಜಿಲ್ಲೆಯ ಶಹಪುರಕ್ಕೆ ಆಗಮಿಸಿ ಇಲ್ಲಿ ಸಂಬಂಧಿಕರನ್ನು ಭೇಟಿ ಮಾಡಿ ಕುಷಲೋಪರಿ ವಿಚಾರಿಸುತ್ತಾರೆ. ಜೀವನದಲ್ಲಿ ಅನುಭವಿಸಿದ ಕಷ್ಟ, ಬೆಳೆದು ಬಂದ ಹಾದಿಯೇ ರೋಚಕ. ಕೊಪ್ಪಳದ ಕುಗ್ರಾಮವೊಂದರಲ್ಲಿ ಜನಿಸಿ ಬ್ರಿಟಿಷ್‌ ಮಿಲಿಟರಿ ಹೇಗೆ ಸೇರಿದ ಎನ್ನುವ ಇವರ ಜೀವನಗಾಥೆ ಶೀಘ್ರದಲ್ಲೇ ಚಿತ್ರೀಕರಣವಾಗಲಿದೆ. ಜು.12ರಂದು ಈತನ ಸ್ಫೂರ್ತಿದಾಯಕ ಕಥೆ ಆಲಿಸಲು ದೇಶ, ವಿದೇಶಗಳ ಮಾಧ್ಯಮ ಪ್ರತಿನಿಧಿಗಳು, ಮಿಲಿಟರಿ ಪಡೆ ಅಧಿ ಕಾರಿಗಳು ಸಿದ್ಧತೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next