ಶಿವಮೊಗ್ಗ: ಸ್ವಾತಂತ್ರ್ಯ ಸಂಭ್ರಮದ ದಿನ ಶಿವಮೊಗ್ಗದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಗೂಂಡಾ ಕಾಯ್ದೆ ಹಾಕಲಾಗುವುದು ಮತ್ತು ಅವರ ಆಸ್ತಿ ಮುಟ್ಟುಗೋಲು ಹಾಕಲಾಗುವುದು ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರೇಮ್ ಸಿಂಗ್ ಚಾಕು ಇರಿತ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿದ್ದೇವೆ. ಒಟ್ಟು ನಾಲ್ಕು ಜನರು ಇದರಲ್ಲಿ ಭಾಗಿಯಾಗಿದ್ದು, ಮತ್ತಿಬ್ಬರ ಬಂಧನಕ್ಕೆ ಕ್ರಮ ಕೈಗೊಂಡಿದ್ದೇವೆ. ಸಂಘಟನೆ, ಆರೋಪಿಗಳ ಹಿನ್ನೆಲೆ ತನಿಖೆಯಿಂದ ಗೊತ್ತಾಗಲಿದೆ ಎಂದು ಹೇಳಿದರು.
ಶಿವಮೊಗ್ಗದ ದೊಡ್ಡಪೇಟೆ, ಕೋಟೆ, ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಗ್ರಾಮಾಂತರ ಠಾಣೆ ವ್ಯಾಪ್ತಿಯ ರಾಗಿಗುಡ್ಡದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಶಿವಮೊಗ್ಗದಲ್ಲಿ ಇಂತಹ ಪ್ರಕರಣ ಹೆಚ್ಚಾಗುತ್ತಿವೆ. ಈ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಆಸ್ತಿ ಮುಟ್ಟುಗೋಲು ಸಂಬಂಧ ಡಿಸಿ ಜೊತೆ ಚರ್ಚಿಸುತ್ತೇವೆ ಎಂದು ಎಡಿಜಿಪಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:28ವರ್ಷದ ಹಿಂದೆ ಚಿನ್ನಕ್ಕಾಗಿ ನಾಲ್ವರನ್ನು ಕೊಲೆಗೈದ ಪ್ರವೀಣ್‌ಗೆ ಸಿಕ್ಕಿಲ್ಲ ಬಿಡುಗಡೆ ಭಾಗ್ಯ
21 ಪ್ಲಟೂನ್ ಗಳನ್ನು ಬಂದೋಬಸ್ತ್ ಗೆ ನಿಯೋಜನೆಯಾಗಿದೆ. 15 ಪ್ಲಟೂನ್ ಬಂದಿದೆ. ಇನ್ನೂ ಕೆಲವು ಬರುತ್ತಿದೆ. ನಗರದಲ್ಲಿ ಎಲ್ಲಾ ವಾಹನಗಳನ್ನು ತೀವ್ರ ತಪಾಸಣೆ ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ ಓರ್ವ ಎಸ್ಪಿ, ಮೂವರು ಎಎಸ್ಪಿ, ಸಿಐಡಿ ಯ 3 ಡಿವೈಎಸ್ಪಿ, 10 ಇನ್ಸ್ಪೆಕ್ಟರ್ ನಿಯೋಜನೆ ಮಾಡಲಾಗಿದೆ ಎಂದರು.