ದೋಹಾ: ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಫಿಫಾ ವಿಶ್ವಕಪ್ ಫೈನಲ್ ಪಂದ್ಯವು ಹಲವು ಕಾರಣಗಳಿಗೆ ಮಹತ್ವ ಪಡೆದಿದೆ. ಅತ್ಯಂತ ರೋಮಾಂಚನಕಾರಿಯಾಗಿ ನಡೆದ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್ ನಲ್ಲಿ ಅರ್ಜೆಂಟೀನಾ ತಂಡವು ಗೆಲುವು ಸಾಧಿಸಿತು. ಮೆಸ್ಸಿ ಮತ್ತು ಎಂಬಪ್ಪೆ ನಡುವಿನ ಕಾಳಗದಲ್ಲಿ ಗೆದ್ದ ಮೆಸ್ಸಿ ಮೊದಲ ವಿಶ್ವಕಪ್ ಗೆದ್ದು ಸಂಭ್ರಮಿಸಿದರು.
ಇದೇ ವೇಳೆ ಈ ವಿಶ್ವಕಪ್ ಫೈನಲ್ ಪಂದ್ಯವು ಗೂಗಲ್ ಹುಡುಕಾಟದಲ್ಲಿಯೂ ದಾಖಲೆ ಬರೆದಿದೆ. ಸ್ವತಃ ಗೂಗಲ್ ಸಿಇಒ ಸುಂದರ್ ಪಿಚೈ ಟ್ವೀಟ್ ಮಾಡಿ ಈ ವಿಚಾರವನ್ನು ಖಚಿತಪಡಿಸಿದ್ದಾರೆ.
ಇದನ್ನೂ ಓದಿ:ಯುಪಿಎಸ್ ಸಿಯಲ್ಲಿ ಅನುತ್ತೀರ್ಣ ಹೈನುಗಾರಿಕೆಯಲ್ಲಿ ಯಶಸ್ಸು ಕಂಡ ನಿಪುಣ
“ಫಿಫಾ ವಿಶ್ವಕಪ್ ನ ಫೈನಲ್ ಸಮಯದಲ್ಲಿ ಗೂಗಲ್ ಸರ್ಚ್ ಕಳೆದ 25 ವರ್ಷಗಳಲ್ಲಿ ಅದರ ಅತ್ಯಧಿಕ ಟ್ರಾಫಿಕನ್ನು ದಾಖಲಿಸಿದೆ. ಇದು ಇಡೀ ಜಗತ್ತು ಒಂದೇ ವಿಷಯದ ಬಗ್ಗೆ ಹುಡುಕುತ್ತಿರುವಂತಿದೆ” ಎಂದು ಸುಂದರ್ ಪಿಚೈ ಹೇಳಿದ್ದಾರೆ.
ಕಳೆದ ರಾತ್ರಿ ಕತಾರ್ ನ ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಫ್ರಾನ್ಸ್ ತಂಡವನ್ನು ಸೋಲಿಸಿತು.
ಭಾರತವು ಆಡದಿದ್ದರೂ, ಫುಟ್ಬಾಲ್ ವಿಶ್ವಕಪ್ ನಲ್ಲಿ ಆಸಕ್ತಿಯು ಅಪಾರವಾಗಿತ್ತು, ಏಕೆಂದರೆ ದೇಶದಾದ್ಯಂತ ಜನರು ತಮ್ಮ ನೆಚ್ಚಿನ ಆಟಗಾರರನ್ನು ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲಿಸಿದರು. ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಗೂಗಲ್ ನ “ಇಯರ್ ಇನ್ ಸರ್ಚ್ 2022” ವರದಿಯ ಪ್ರಕಾರ, ಫಿಫಾ ವಿಶ್ವಕಪ್ ಭಾರತದಲ್ಲಿ ಹೆಚ್ಚು ಹುಡುಕಲ್ಪಟ್ಟ ಮೂರನೇ ವಿಷಯವಾಗಿದೆ.