ಹೊಸದಿಲ್ಲಿ : ಭಾರತ ಸಂಜಾತ ಗೂಗಲ್ ಸಿಇಓ ಸುಂದರ ಪಿಚೈ ಅವರಿಗೆ ಗೂಗಲ್ ಕಂಪೆನಿಯು ಈ ವಾರ 2,524 ಕೋಟಿ ರೂ (380 ದಶಲಕ್ಷ ಡಾಲರ್) ಮೌಲ್ಯದ ತನ್ನ ನೋಂದಾಯಿತ ಶೇರುಗಳ Pay-day Gift ನೀಡಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
2014ರಲ್ಲಿ ಭಡ್ತಿ ನೀಡಲಾಗಿದ್ದ ವೇಳೆ ಪಿಚೈ ಅವರಿಗೆ ಗೂಗಲ್ ಕಂಪೆನಿಯು ತನ್ನ 3,53,939 ನೋಂದಾಯಿತ ಶೇರುಗಳನ್ನು ನೀಡಿತ್ತು.
ಪಿಚೈ ಅವರಿಗೆ ಈ ವಾರ 38 ಕೋಟಿ ಡಾಲರ್ ಮೌಲ್ಯದ ಗೂಗಲ್ ನೋಂದಾಯಿತ ಶೇರುಗಳು ಸಿಗಲಿದ್ದು ಇದು ಈಚಿನ ವರ್ಷಗಳಲ್ಲಿ ಸಾರ್ವಜನಿಕ ರಂಗದ ಕಂಪೆನಿಯೊಂದರ ಕಾರ್ಯನಿರ್ವಹಣಾಧಿಕಾರಿಗೆ ದೊರಕುತ್ತಿರುವ ಅತೀ ದೊಡ್ಡ ಏಕಗಂಟಿನ ಶೇರು ರೂಪದ ಪಾವತಿಯಾಗಿದೆ ಎಂದು ವರದಿಗಳು ತಿಳಿಸಿವೆ.
ಗೂಗಲ್ ಮಾತೃಸಂಸ್ಥೆ ಆಲ್ಫಾಬೆಟ್ ನ ತ್ತೈಮಾಸಿಕ ಲಾಭ ಗಮನಾರ್ಹವಾಗಿ ಏರಿರುವ ಧನಾತ್ಮಕ ಸುದ್ದಿಯ ನಡುವೆಯೇ ಪಿಚೈ ಅವರ “ಪೇ ಡೇ’ ಈ ವಾರದಲ್ಲೇ ಸಮೀಪಿಸುತ್ತಿರುವುದು ಗಮನಾರ್ಹವಾಗಿದೆ.
ಆಲ್ಫಾಬೆಟ್ ಕಂಪೆನಿಯ 2018ರ ಮೊದಲ ಮೂರು ತಿಂಗಳಲ್ಲಿ ಕಂಪೆನಿಯ ಲಾಭ ಶೇ.70ಕ್ಕೂ ಅಧಿಕ ಏರಿದ್ದು ಅದು 9.4 ಶತಕೋಟಿ ಡಾಲರ್ ಆಗಿದ್ದು ಇದು ಮಾರುಕಟ್ಟೆ ನಿರೀಕ್ಷೆಯನ್ನು ಮೀರಿದೆ ಎಂದು ವರದಿಗಳು ಹೇಳಿವೆ.
ಪಿಚೈ ಅವರಿಗೆ ಪೇ ಡೇ ದಿನದಂದು ಕಂಪೆನಿಯ 2,524 ಕೋಟಿ ರೂ (380 ದಶಲಕ್ಷ ಡಾಲರ್) ಮೌಲ್ಯದ ನೋಂದಾಯಿತ ಶೇರು ನೀಡಲಾಗುವುದೆಂಬ ಸುದ್ದಿಯ ಹಿನ್ನೆಲೆಯಲ್ಲಿ ಆಲ್ಫಾಬೆಟ್ ಕಂಪೆನಿಯ ಶೇರಿನ ಮಾರುಕಟ್ಟೆ ಧಾರಣೆ ಶೇ.90ರಷ್ಟು ಏರಿದೆ.