ನ್ಯೂಯಾರ್ಕ್: ತನ್ನ ಕಾರ್ಯನಿರ್ವಹಣೆಯನ್ನು ಅಮೆರಿಕಾದ ಸಂಸ್ಥೆಗಳಿಗೆ 45 ದಿನಗಳಲ್ಲಿ ಹಸ್ತಾಂತರಿಸಿ ಇಲ್ಲವಾದಲ್ಲಿ ನಿಷೇಧದ ಶಿಕ್ಷೆ ಎದುರಿಸಿ ಎಂದು ಆಗಸ್ಟ್ 6ರಂದು ಡೊನಾಲ್ಡ್ ಟ್ರಂಪ್ ನೀಡಿದ ಆದೇಶ ಇದೀಗ ಟಿಕ್ ಟಾಕ್ ಅಪ್ಲಿಕೇಶನ್ ನನ್ನು ಇಕ್ಕಟ್ಟಿಗೆ ಸಿಲಿಕಿಸಿದೆ.
ಚೀನಾ ಮೂಲದ ಕಂಪೆನಿ ಬೈಟೇಡ್ಯಾನ್ಸ್ ಒಡೆತನದ ಟಿಕ್ ಟಾಕ್ ಇದೀಗ ಸಾಧ್ಯವಿರುವ ಎಲ್ಲಾ ಆಯ್ಕೆಗಳನ್ನು ಹುಡುಕಾಡುತ್ತಿದೆ. ಆದರೇ ಟೆಕ್ ದೈತ್ಯ ಕಂಪೆನಿಗಳಾದ ಗೂಗಲ್ ಮತ್ತು ನೆಟ್ ಫ್ಲಿಕ್ಸ್ ಸಂಸ್ಥೆ ತಮಗೆ ಟಿಕ್ ಟಾಕ್ ಖರೀದಿಸುವ ಯಾವುದೇ ಉತ್ಸಾಹ ಇಲ್ಲ ಎಂದು ಹೇಳುವ ಮೂಲಕ ಉಹಾಪೋಹಗಳಿಗೆ ತೆರೆ ಎಳೆದಿವೆ.
ಇದೀಗ ಕಡಿಮೆ ಸಮಯದಲ್ಲಿ ಟಿಕ್ ಟಾಕ್ ಗೆ ತನ್ನ ಅಮೆರಿಕಾದ ಕಾರ್ಯಾನಿರ್ವಹಣೆಯನ್ನು ಮಾರಟ ಮಾಡಬೇಕಾದ ಅನಿವಾರ್ಯತೆ ಇದೆ. ಈ ಹಿನ್ನಲೆಯಲ್ಲಿ ಇತ್ತೀಚಿಗಷ್ಟೆ ಟಿಕ್ ಟಾಕ್ ಸಂಸ್ಥೆ ನೆಟ್ ಫ್ಲಿಕ್ಸ್ ಗೆ ದುಂಬಾಲು ಬಿದ್ದಿತ್ತು. ಆದರೇ ನೆಟ್ ಫ್ಲಿಕ್ಸ್ ಯಾವುದೇ ರೀತಿಯಲ್ಲೂ ಚೀನಾ ಮೂಲದ ಆ್ಯಪ್ ಅನ್ನು ಖರೀದಿಸುವ ಉತ್ಸುಕತೆ ತೋರಿಲ್ಲ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಏತನ್ಮಧ್ಯೆ ಗೂಗಲ್ ಸಿಇಓ ಸುಂದರ್ ಪಿಚೈ ಕೂಡ ತಮ್ಮ ಕಂಪೆನಿ ಟಿಕ್ ಟಾಕ್ ಅನ್ನು ಖರೀದಿಸುವ ಯೋಜನೆ ಹೊಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಷ್ಟ್ರೀಯ ಭದ್ರತೆ ಧಕ್ಕೆ ತರುವ ಹಿನ್ನಲೆಯಲ್ಲಿ ಟಿಕ್ ಟಾಕ್ ಆ್ಯಪ್ ಅನ್ನು ಭಾರತ, ಅಮೆರಿಕಾ ಸೇರಿದಂತೆ ಹಲವೆಡೆ ನಿಷೇಧ ಮಾಡಲಾಗಿದೆ. ಆದರೇ ಅಮೆರಿಕಾ ಸರ್ಕಾರ ತಮ್ಮ ದೇಶದ ಕಂಪೆನಿಗಳಿಗೆ ಈ ಆ್ಯಪ್ ಅನ್ನು ಮಾರಾಟ ಮಾಡುವ ಮೂಲಕ ಕಾರ್ಯನಿರ್ವಹಿಸಬಹುದು ಎಂಬ ಆದೇಶ ಹೊರಡಿಸಿದೆ.
ಮೈಕ್ರೋಸಾಫ್ಟ್ ಹಾಗೂ ಒರ್ಯಾಕಲ್ ಸಂಸ್ಥೆಗಳು ಈಗಾಗಲೇ ಟಿಕ್ ಟಾಕ್ ಖರೀದಿಸಲು ಆಸಕ್ತಿ ತೋರಿವೆ. ಟ್ವಿಟ್ಟರ್ ಸಂಸ್ಥೆ ಕೂಡ ಉತ್ಸುಕತೆ ತೋರಿದ್ದು ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.