ನವದೆಹಲಿ: ಇಂಟರ್‌ನೆಟ್ ದೈತ್ಯ ಗೂಗಲ್ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಕಂಪನಿಯೊಂದನ್ನು ಸ್ವಾಧೀನಪಡಿಸಿಕೊಂಡಿದೆ. ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ ಮತ್ತು ‘ಮಶಿನ್ ಲರ್ನಿಂಗ್’ ಮೇಲೆ ಕೆಲಸ ಮಾಡುವ ‘ಹಳ್ಳಿ ಲ್ಯಾಬ್’ ಎಂಬ ಈ ಕಂಪನಿ ಆರಂಭವಾಗಿ ಕೇವಲ 4 ತಿಂಗಳಷ್ಟೇ ಕಳೆದಿದೆ.
‘ನಾವು ಗೂಗಲ್ ನೆಕ್ಸ್ಟ್ ಬಿಲಿಯನ್ ಯೂಸರ್ ಟೀಂ ಅನ್ನು ಸೇರುತ್ತಿದ್ದೇವೆ. ಪ್ರಾದೇಶಿಕ ಭಾಷೆ ಗುರುತು ಮಾಡುವ ಸೇವೆ ಕ್ಷೇತ್ರದಲ್ಲಿ ಭಾರತದಲ್ಲಿ ಮಾರುಕಟ್ಟೆ ವಿಸ್ತರಿಸಲು ಗೂಗಲ್ ಎದುರು ನೋಡುತ್ತಿತ್ತು. ನಾವು ಗೂಗಲ್ ಜೊತೆ ಸೇರಿ ಈ ಯೋಜನೆ ವಿಸ್ತರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ’ ಎಂದು ಹಳ್ಳಿ ಲ್ಯಾಬ್ ಸದಸ್ಯ ಪಂಕಜ್ ಗುಪ್ತಾ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೂಗಲ್ ವಕ್ತಾರ ಬೆಂಗಳೂರಿನ ಸಂಸ್ಥೆ ನಮ್ಮ ಜತೆ ವಿಲೀನವಾಗಿರುವುದು ಸಂತಸ ತಂದಿದೆ. ಭಾರತವನ್ನು ಕೇಂದ್ರೀಕರಿಸಿ ಆನ್‌ಲೈನ್ ಬಳಕೆ ಅನುಕೂಲವಾಗುವಂಥ ಉತ್ಪನ್ನಗಳನ್ನು ಸಿದ್ಧಪಡಿಸಲಿದ್ದೇವೆ ಎಂದರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುವ 64 ಕಂಪನಿಗಳ ವಿಲೀನ ಹಾಲಿ ಸಾಲಿನಲ್ಲಿ ನಡೆದಿದೆ.