ದೇಶದ ಮೊದಲ ಪೂರ್ಣಪ್ರಮಾಣದ ವಿತ್ತ ಸಚಿವೆ ನಿರ್ಮಲಾ ಸೀತಾ ರಾಮನ್ ಅವರು ಬ್ರಿಟಿಷರ ಕಾಲದ “ಸಂಪ್ರ ದಾಯ’ ಮುರಿಯುವ ಮೂಲಕ ಬಜೆಟ್‌ನ ದಿನಾರಂಭ ಮಾಡಿದ್ದು ವಿಶೇಷ. ಹಿಂದಿನ ಎಲ್ಲ ವಿತ್ತ ಸಚಿವರು ಪಾಲಿಸಿಕೊಂಡು ಬಂದಿದ್ದ “ಬ್ರೀಫ್ಕೇಸ್’ ಸಂಸ್ಕೃತಿಗೆ ಗುಡ್‌ಬೈ ಹೇಳಿದ ನಿರ್ಮಲಾ, ಮುಂಗಡ ಪತ್ರದ ಕಡತಗಳನ್ನು ಸಾಂಪ್ರದಾಯಿಕ ಕೆಂಪು ವಸ್ತ್ರದಲ್ಲಿ ಸುತ್ತಿಕೊಂಡು ಬರುವ ಮೂಲಕ ಅಚ್ಚರಿ ಮೂಡಿಸಿದರು.
ಈ ಕೆಂಪು ವಸ್ತ್ರಕ್ಕೂ ಭಾರತದ ಸಂಪ್ರದಾಯಕ್ಕೂ ಅವಿನಾಭಾವ ಸಂಬಂಧವಿದೆ. ಭಾರತೀಯ ವ್ಯಾಪಾರಿಗಳ ಕೈಯಲ್ಲಿ ಪುರಾತನ ಕಾಲದಿಂದಲೂ ಇಂತಹ ಕೆಂಪು ಬಣ್ಣದ ವಸ್ತ್ರಗಳು ಕಾಣಸಿಗುತ್ತಿತ್ತು. ಹಣದ ವಿಚಾರ ಬಂದಾಗ ಈ ವಸ್ತ್ರಕ್ಕೆ ಹೆಚ್ಚಿನ ಮಹತ್ವವಿದೆ. ವ್ಯಾಪಾರಿಗಳು ತಮ್ಮ ಲೆಕ್ಕ ಪುಸ್ತಕಗಳಿಗೆ ಈ ವಸ್ತ್ರವನ್ನೇ ಹೊದಿಸಿಡುತ್ತಿದ್ದರು. ಇದನ್ನು ಅವರು ಸಮೃದ್ಧಿಯ ಸಂಕೇತವೆಂದೂ, ಸಂಪತ್ತಿನ ದೇವತೆಯೆಂದೂ ಪರಿಗಣಿಸುತ್ತಿದ್ದರು. ಅಷ್ಟೇ ಅಲ್ಲ, ನಮ್ಮ ದೇಶದಲ್ಲಿ ಧಾರ್ಮಿಕ ಗ್ರಂಥಗಳನ್ನೂ ಇಂಥ ವಸ್ತ್ರದಲ್ಲೇ ಕಾಪಿಡಲಾಗುತ್ತಿದೆ.
ನಿರ್ಮಲಾ ಕೈಯ್ಯಲ್ಲೇಕೆ?: ಬಜೆಟ್ ಮಂಡಿಸಲು ಆಗಮಿಸುವಾಗ ಸಚಿವೆ ನಿರ್ಮಲಾ ಈ ವಸ್ತ್ರದಲ್ಲಿ ಬಜೆಟ್ ದಾಖಲೆಗಳನ್ನು ಹೊತ್ತು ತಂದಿದ್ದೇಕೆ ಎಂಬ ಪ್ರಶ್ನೆಗೆ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಉತ್ತರಿಸಿದ್ದು ಹೀಗೆ: “ಇದು ಭಾರತದ ಸಂಪ್ರದಾಯ. ಅಷ್ಟೇ ಅಲ್ಲ, ಪಾಶ್ಚಿಮಾತ್ಯ ಆಲೋಚನೆಗಳೆಂಬ ದಾಸ್ಯದಿಂದ ನಮ್ಮ ಬಿಡುಗಡೆಯನ್ನು ಇದು ಸೂಚಿಸುತ್ತದೆ. ಇದು ಮುಂಗಡ ಪತ್ರವಲ್ಲ, ಲೇವಾದೇವಿಯ ಲೆಕ್ಕದ ಪುಸ್ತಕ.’
ಬ್ರಿಟಿಷರ ಬಳುವಳಿ: 18ನೇ ಶತಮಾನದಲ್ಲಿ ಬ್ರಿಟಿಷರು ಪಾಲಿಸಿದ ಸಂಪ್ರದಾಯ ಇದಾಗಿತ್ತು. 1860ರಲ್ಲಿ ಬ್ರಿಟಿಷ್ ಬಜೆಟ್ ಮುಖ್ಯಸ್ಥ ವಿಲಿಯಂ ಎವಾರ್ಟ್ ಅವರು ಇಂಗ್ಲೆಂಡ್ ರಾಣಿ ಬಳಸುತ್ತಿದ್ದ ಮಾದರಿಯ ಸ್ಯೂಟ್‌ಕೇಸ್ ಅನ್ನು ಹೊತ್ತು ತಂದಿದ್ದರು. ಬಜೆಟ್ ಎಂಬ ಪದವು ಫ್ರೆಂಚ್ ಪದ “ಬೌಜೆಟ್'(ಚಿಟuಜಛಿಠಿಠಿಛಿ)ನಿಂದ ಬಂದಿದ್ದು. “ಚರ್ಮದ ಬ್ಯಾಗ್’ ಎಂದು ಇದರ ಅರ್ಥ.
ಬ್ರಿಟಿಷರು ಆರಂಭಿಸಿದ ಈ ಪದ್ಧತಿಯನ್ನು ಭಾರತೀಯ ವಿತ್ತ ಸಚಿವರೂ ಅನುಸರಿಸಿ ಕೊಂಡು ಬಂದರು. ಆದರೆ, ಕಾಲಕಳೆದಂತೆ ಈ ಬ್ರೀಫ್ಕೇಸ್‌ಗಳ ಬಣ್ಣದಲ್ಲಿ ಸಣ್ಣ ಪುಟ್ಟ ಬದಲಾವಣೆಗಳು ಕೂಡ ಕಂಡಬಂದವು.
1998-99ರಲ್ಲಿ ಸಚಿವ ಯಶ್ವಂತ್ ಸಿನ್ಹಾ ಅವರು ಕಪ್ಪು ಬಣ್ಣದ ಚರ್ಮದ ಬ್ಯಾಗ್‌ನಲ್ಲಿ ಬಜೆಟ್ ಕಡತಗಳನ್ನು ತಂದರೆ, ಮಾಜಿ ಪ್ರಧಾನಿ ಹಾಗೂ ವಿತ್ತ ಸಚಿವ ಮನಮೋಹನ್ ಸಿಂಗ್ ಅವರು 1991ರಲ್ಲಿ ಸಾದಾ ಕಪ್ಪು ಬಜೆಟ್ ಬ್ಯಾಗ್‌ನಲ್ಲಿ ಕಡತ ತಂದಿದ್ದರು. ಪ್ರಣಬ್ ಮುಖರ್ಜಿ ಅವರು ತಮ್ಮ ಅವಧಿಯಲ್ಲಿ ಗ್ಲಾಡ್‌ಸ್ಟೋನ್ ಮಾದರಿಯ “ಕೆಂಪು ಬಾಕ್ಸ್’ನಲ್ಲಿ ಬಜೆಟ್ ದಾಖಲೆ ತಂದಿದ್ದರು.
ಬ್ರೀಫ್ಕೇಸ್ ಸಂಸ್ಕೃತಿಯ ಹಿನ್ನೆಲೆ: ದೇಶವು ಸ್ವಾತಂತ್ರ್ಯ ಪಡೆದಾಗಿನಿಂದಲೂ ಕೇಂದ್ರದ ಹಣಕಾಸು ಸಚಿವರು ಬಜೆಟ್ ದಿನ ಮುಂಗಡ ಪತ್ರದ ದಾಖಲೆಗಳನ್ನು “ಬ್ರೀಫ್ಕೇಸ್’ನಲ್ಲಿ ತಂದು, ಸಂಸತ್ ಭವನದ ಹೊರಗೆ ಫೋಟೋಗಳಿಗೆ ಪೋಸ್ ನೀಡುತ್ತಿದ್ದರು. 1947ರ ನವೆಂಬರ್ 26ರಂದು ದೇಶದ ಮೊದಲ ವಿತ್ತ ಸಚಿವ ಆರ್.ಕೆ. ಷಣ್ಮುಖಂ ಚೆಟ್ಟಿ ಅವರು ಬಜೆಟ್ ಮಂಡಿಸಿದಂದೇ ಈ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿತ್ತು. ತದನಂತರ ಇಲ್ಲಿಯವರೆಗೂ ಎಲ್ಲ ವಿತ್ತ ಸಚಿವರೂ ಇದೇ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದಾರೆ.