ಚೆನ್ನೈ: ಒಂದು ಕಾಲದಲ್ಲಿ ಯುವಕರ ಮನ ಕದ್ದಿದ್ದ ರಾಯಲ್ ಎನ್‌ಫೀಲ್ಡ್‌ನ 500 ಸಿಸಿ ಬೈಕುಗಳು ಶೀಘ್ರ ಇತಿಹಾಸದ ಪುಟಗಳಿಗೆ ಸೇರಲಿದೆ.
ಮುಂದಿನ ಮಾರ್ಚ್ ವೇಳೆಗೆ ಬಿಎಸ್6 ಎಂಜಿನ್ ಅನ್ನು ಎಲ್ಲ ಮೋಟಾರು ವಾಹನ ಕಂಪೆನಿಗಳು ಹೊರತರಲೇ ಬೇಕಿದ್ದು, ಹಲವು ಕಂಪೆನಿಗಳಿಗೆ ಸದ್ಯ ಇರುವ ಎಂಜಿನ್‌ಗಳ ಸುಧಾರಣೆ ಕಷ್ಟಕರವಾಗಿದೆ. ಜತೆಗೆ ಇದು ಅತಿ ವೆಚ್ಚದಾಯಕವೂ ಹೌದು. ಈ ಹಿನ್ನೆಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಮಾರಾಟವಾಗುವ 500 ಸಿಸಿ ಬೈಕುಗಳ ಸುಧಾರಣೆಯ ಆಲೋಚನೆಯನ್ನು ಎನ್‌ಫೀಲ್ಡ್ ಕೈಬಿಟ್ಟಿದೆ.
ಇದರಿಂದ ಮುಂದೆ 500 ಸಿಸಿ ಎನ್‌ಫೀಲ್ಡ್ ಬೈಕುಗಳು ಮಾರುಕಟ್ಟೆಯಿಂದ ದೂರವಾಗಲಿದೆ. ಇದರ ಉತ್ಪಾದನೆಯನ್ನೂ ಅದು ಶೀಘ್ರ ಸ್ಥಗಿತಗೊಳಿಸಲಿದೆ. ಇದರ ಬದಲಾಗಿ ಅತಿ ಬೇಡಿಕೆ ಇರುವ 350 ಸಿಸಿ ಎಂಜಿನ್‌ನ ಸುಧಾರಿತ ಆವೃತ್ತಿ ಬರಲಿದೆ. ಸುಧಾರಿತ ಪವರ್‌ಟ್ರೈನ್ ಇದರಲ್ಲಿರಲಿದೆ ಎಂದು ಎನ್‌ಫೀಲ್ಡ್ ಹೇಳಿಕೊಂಡಿದೆ. 500 ಸಿಸಿ ಬೈಕುಗಳು ತೆರೆ ಮರೆಗೆ ಸರಿಯಲಿರುವುದರಿಂದ ಮುಂದೆ 350 ಸಿಸಿ ಹೊರತು ಪಡಿಸಿ 650 ಸಿಸಿಯ ಎಂಜಿನ್‌ಗಳನ್ನೇ ಎನ್‌ಫೀಲ್ಡ್ ಉತ್ಪಾದಿಸಲಿದೆ. 650 ಸಿಸಿ ಎಂಜಿನ್‌ಗಳು ಈಗಾಗಲೇ ವಿದೇಶಿ ಮಾರುಕಟ್ಟೆಯಲ್ಲಿ ಹೆಸರು ಮಾಡುತ್ತಿದ್ದು, ಉತ್ತಮ ಸಂಖ್ಯೆಯಲ್ಲಿ ರಫ್ತಾಗುತ್ತಿದೆ. ಭಾರತದಲ್ಲೂ ಉತ್ತಮ ಪ್ರತಿಕ್ರಿಯೆ ಇದೆ.
ಈ ನಿಟ್ಟಿನಲ್ಲಿ 650 ಸಿಸಿ ಎಂಜಿನ್‌ಗಳ ಮಾರಾಟಕ್ಕೆ ಅದು ಒತ್ತು ನೀಡಲಿದೆ. ಸದ್ಯ 500 ಸಿಸಿ ಥಂಡರ್‌ಬರ್ಡ್, ಕ್ಲಾಸಿಕ್, ಬುಲ್ಲೆಟ್ ಆವೃತ್ತಿಗಳು 500 ಸಿಸಿಯಲ್ಲಿವೆ. 650 ಸಿಸಿಗೆ ಬೇಡಿಕೆ ಹೆಚ್ಚುತ್ತಿದ್ದರೆ 500 ಸಿಸಿಗೆ ಅಷ್ಟು ಬೇಡಿಕೆ ಇಲ್ಲ. ಜತೆಗೆ ಮುಂದಿನ ದಿನಗಳಲ್ಲಿ ಭಾರತದಲ್ಲಿ ಹೊಸ 650 ಸಿಸಿ ಬೈಕನ್ನು ಬಿಡುಗಡೆ ಮಾಡಲು ಎನ್‌ಫೀಲ್ಡ್ ಉದ್ದೇಶಿಸಿದೆ. ಈ ಎಲ್ಲ ಕಾರಣದಿಂದ 500 ಸಿಸಿ ಬೈಕುಗಳ ಉತ್ಪಾದನೆ, ಮಾರಾಟ ಸ್ಥಗಿತಗೊಳ್ಳಲಿದೆ ಎಂದು ಮೂಲಗಳು ಹೇಳಿವೆ.