Advertisement

ಗ್ರಾಮ ಭಾಗದಲ್ಲಿ ಉತ್ತಮ ಮತದಾನ ನಿರೀಕ್ಷೆ

04:35 PM May 07, 2018 | Team Udayavani |

ಬೆಳ್ತಂಗಡಿ: ಚುನಾವಣೆಗೆ ಇನ್ನು ಕೆಲವೇ ದಿನಗಳು ಉಳಿದಿವೆ. ಗ್ರಾಮೀಣ ಭಾಗದಲ್ಲಿ ಜನರು ಭಿನ್ನಕೋನಗಳ ಮೂಲಕ ಯೋಚಿಸುತ್ತಿದ್ದಾರೆ. ಯುವ ನಾಯಕರ ಪರ ಒಲವು ಹಾಗೂ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ ಹಿರಿಯರ ಬಗೆಗಿನ ಗೌರವವಿದೆ. ವೋಟಿನ ವಿಚಾರಕ್ಕೆ ಬಂದಾಗ ‘ಮತದಾನದ ದಿನ ನಿರ್ಧರಿಸುತ್ತೇವೆ’ ಎನ್ನುತ್ತಿದ್ದಾರೆ ವೇಣೂರು ಭಾಗದ ಜನತೆ.  ಆರಂಬೋಡಿ, ವೇಣೂರು, ಅಂಡಿಂಜೆ, ಹೊಸಂಗಡಿ, ನಾರಾವಿ, ಕುಕ್ಕೇಡಿ, ಪಡಂಗಡಿ ಮೊದಲಾದೆಡೆ ಉದಯವಾಣಿ ಪ್ರತಿನಿಧಿ ಸುತ್ತಾಟ ನಡೆಸಿದಾಗ ಯುವಕ ಯುವತಿಯರು ಹಾಗೂ ಹಿರಿಯರ ಸಹಿತ ಎಲ್ಲರೂ ಮತಚಲಾವಣೆಗೆ ಉತ್ಸಾಹ ತೋರುತ್ತಿರುವುದು ಕಂಡುಬಂತು. ಮುಖ್ಯವಾಗಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರ ಒಲವಿದೆ, ಯುವ ಮತದಾರರು ಚುನಾವಣೆಯ ಬಗ್ಗೆ ಹೆಚ್ಚು ಉತ್ಸಾಹ ಹೊಂದಿದ್ದಾರೆ.

Advertisement

ಇನ್ನೂ ಇದೆ ಬೇಡಿಕೆ
ಈ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೆ ಜನರ ಬೇಡಿಕೆಗಳು ನೂರಕ್ಕೆ ನೂರು ಇನ್ನೂ ಈಡೇರಿಲ್ಲ. ಮುಖ್ಯವಾಗಿ ವೇಣೂರಿನಲ್ಲಿ ಗೋಮಟೇಶ್ವರ ವಿಗ್ರಹವಿದ್ದು, ಪ್ರೇಕ್ಷಣೀಯ ಸ್ಥಳವೂ ಆಗಿದೆ. ಜತೆಗೆ ಹಲವು ವರ್ಷಗಳ ಹಿನ್ನೆಲೆ ಉಳ್ಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವೂ ಇದೆ. ಪ್ರವಾಸೋದ್ಯಮ ದೃಷ್ಟಿಯಿಂದ ಹೆಚ್ಚಿನ ಅಭಿವೃದ್ಧಿಗೆ ಅವಕಾಶವಿದೆ. ಮುಖ್ಯವಾಗಿ ಪಾರ್ಕಿಂಗ್‌ ಹಾಗೂ ಸುಸಜ್ಜಿತ ಬಸ್‌ ನಿಲ್ದಾಣ ಬೇಕಿದೆ ಎನ್ನುತ್ತಾರೆ ಸ್ಥಳೀಯರು.

ಇಲ್ಲಿ ಫ‌ಲ್ಗುಣಿ ನದಿ ಹರಿಯುತ್ತಿದ್ದು, ಅಣೆಕಟ್ಟು ನಿರ್ಮಿಸಿದರೆ ಕೃಷಿ ಮತ್ತು ಕುಡಿಯುವ ನೀರಿಗೆ ಒಂದಿಷ್ಟು ಅನುಕೂಲವಾಗಬಹುದು ಎಂಬುದು ಮತದಾರರ ಅಭಿಪ್ರಾಯ. ಈ ಹಿಂದೆ ಒಮ್ಮೆ ಅಣೆಕಟ್ಟು ನಿಮಾರ್ಣ ಕುರಿತು ಯೋಜನೆ ರೂಪುಗೊಂಡಿತ್ತಾದರೂ ಅದು ಕಾರ್ಯಗತಗೊಂಡಿಲ್ಲ. ಮುಂದೆ ಆಯ್ಕೆಯಾಗುವವರು ಈ ಬೇಡಿಕೆ ಈಡೇರಿಸಿದಲ್ಲಿ ಜನತೆಗೆ ಅನುಕೂಲವಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಸ್ಥಳೀಯ ಗಿರೀಶ್‌.

ಒಮ್ಮೆ ಮುಗಿದರೆ ಸಾಕು
ಮಡಂತ್ಯಾರು ವ್ಯಾಪ್ತಿಯ ಜನರಿಗೆ ಮತ ಚಲಾವಣೆಗೆ ಉತ್ಸಾಹ ತೋರುತ್ತಿದ್ದಾರೆ. ಚುನಾವಣೆ ಸಂಬಂಧಿ ರಾಜಕೀಯ ಆರೋಪ -ಪ್ರತ್ಯಾರೋಪಗಳಿಂದ ಬೇಸತ್ತು ಒಮ್ಮೆ ಚುನಾವಣೆ ಮುಗಿದರೆ ಸಾಕು ಎಂಬ ಧೋರಣೆ ಹೊಂದಿದವರೂ ಇದ್ದಾರೆ. ಈ ವ್ಯಾಪ್ತಿಯಲ್ಲಿ ಪ್ರಚಾರ ಕೊಂಚ ಭರ್ಜರಿಯಾಗಿ ಸಾಗಿದೆ. ಮುಖ್ಯವಾಗಿ ಇಲ್ಲಿನ ಜನತೆಗೆ ರಸ್ತೆಯ ಅಗತ್ಯ ಕಾಡುತ್ತಿದೆ. ಬಂಟ್ವಾಳ ಮೂಲಕ ಚಾರ್ಮಾಡಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿ ಅಗಲ ಕಿರಿದಾಗಿದ್ದು, ಮಡಂತ್ಯಾರು ಬಳಿ ಚಾಲಕರು ಹಾಗೂ ಸಾರ್ವಜನಿಕರು ನಿತ್ಯ ಪರದಾಡಬೇಕಾದ ಪರಿಸ್ಥಿತಿ ಇದೆ. ಪಾರ್ಕಿಂಗ್‌ ಸಮಸ್ಯೆ ಅಲ್ಲಲ್ಲಿ ಇದೆ. ಜನತೆ ಹೆಚ್ಚಿನ ಸೌಲಭ್ಯದ ನಿರೀಕ್ಷೆಯಲ್ಲಿದ್ದಾರೆ. ಮದ್ದಡ್ಕ ಬಳಿ ‘ಮತ ಕೇಳಲು ಆಗಮಿಸುವವರು ರಸ್ತೆ ಅಭಿವೃದ್ಧಿಪಡಿಸಿ. ಇಲ್ಲವಾದಲ್ಲಿ ಮತ ಕೇಳಲು ಬರಬೇಡಿ’ ಎಂಬ ಫಲಕವನ್ನು ಹಾಕಲಾಗಿತ್ತು. ಏನೇ ಇದ್ದರೂ ಈ ಬಾರಿ ಹೆಚ್ಚಿನ ಮತ ಚಲಾವಣೆಯಾಗುವ ನಿರೀಕ್ಷೆ ಮೂಡಿದೆ.

ಹೆಚ್ಚಿನ ಪ್ರಗತಿಗೆ ಅವಕಾಶವಿದೆ
ಮಡಂತ್ಯಾರು ಅಭಿವೃದ್ಧಿಗೊಂಡಿದೆ. ಆದರೆ ಇನ್ನೂ ಹೆಚ್ಚಿನ ಪ್ರಗತಿಗೆ ಅವಕಾಶವಿದೆ. ಮುಖ್ಯವಾಗಿ ಬಸ್‌ನಿಲ್ದಾಣ ಅಭಿವೃದ್ಧಿ ಕಾರ್ಯ ನಡೆಯಬೇಕು. ರಸ್ತೆಯಲ್ಲಿ ವಾಹನದಟ್ಟಣೆ ಹೆಚ್ಚಾಗಿದ್ದು, ರಸ್ತೆ ಅಗಲ ಹಾಗೂ ವಾಹನ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ. ಗ್ರಾಮಾಂತರ ರಸ್ತೆಗಳ ಅಭಿವೃದ್ಧಿ ಆಗಬೇಕಿದೆ. ಮಾಲಾಡಿ, ಪಡಂಗಡಿ, ಮಡಂತ್ಯಾರು -ಪರನೀರು ರಸ್ತೆ ಆಗಬೇಕು. ರಾತ್ರಿ ವೇಳೆ ಸಮರ್ಪಕ ಬೀದಿ ದೀಪ ಬೇಕು. ಈ ಭಾಗದಲ್ಲಿ ಅನೇಕರು ಹೈನುಗಾರಿಕೆ ನಡೆಸುತ್ತಾರೆ. ಈಗ ಇರುವ ಪಶು ಆಸ್ಪತ್ರೆಗೆ ಹೆಚ್ಚಿನ ಸೌಲಭ್ಯ ನೀಡಿ ಮೇಲ್ದರ್ಜೆಗೇರಿಸಬೇಕು. 
-ವಿವೇಕ್‌ ವಿ. ಪಾಯಿಸ್‌, ಮಡಂತ್ಯಾರು

Advertisement

„ಪದ್ಮನಾಭ ವೇಣೂರು/ಪ್ರಮೋದ್‌ ಬಳ್ಳಮಂಜ

Advertisement

Udayavani is now on Telegram. Click here to join our channel and stay updated with the latest news.

Next