ಮೊಳಕಾಲ್ಮೂರು: ಗರ್ಭಿಣಿಯರಿಗೆ ತಜ್ಞ ವೈದ್ಯರಿಂದ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಭಾವನಾತ್ಮಕವಾಗಿ ಅವಿನಾಭಾವ ಸಂಬಂಧ ಕಲ್ಪಿಸಿದಲ್ಲಿ ಮಗುವಿನ ಸದೃಢ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಪ್ರಭಾರಿ ತಾಲೂಕು ಆರೋಗ್ಯಾಧಿಕಾರಿ ಡಾ| ಮಧುಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎಚ್‌ಐವಿ/ ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಘಟಕ ಚಿತ್ರದುರ್ಗ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ತಾಲೂಕು ಸಾರ್ವಜನಿಕ ಆಸ್ಪತ್ರೆ ಮೊಳಕಾಲ್ಮೂರು ಇವುಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಗರ್ಭಿಣಿಯರ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗರ್ಭಿಣಿಯರಿಗೆ ತಜ್ಞರಿಂದ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು. ಗಂಭೀರ ಸಮಸ್ಯೆಗಳಿದ್ದಲ್ಲಿ ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ ಯಾವುದೇ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಲಾಗುವುದು. ಮಗುವಿನ ಬೆಳವಣಿಗೆಗೆ ಯಾವುದೇ ತೊಂದರೆಯಾಗದಂತೆ ಹಾಗೂ ಗರ್ಭಿಣಿ ಶಾಂತಿ, ನೆಮ್ಮದಿಯಿಂದ ಇರಲು ಸೀಮಂತ ಕಾರ್ಯ ಪ್ರಯೋಜನಕಾರಿ ಎಂದರು.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ| ಅಭಿನವ್ ಮಾತನಾಡಿ, ಗರ್ಭಿಣಿಯರಿಂದ ಮಗುವಿಗೆ ರಕ್ತದಿಂದ ಹರಡುವ ತೊಂದರೆಗಳ ಬಗ್ಗೆ ಅರಿವು ಮೂಡಿಸಿದರೆ ಕಾಯಿಲೆಗಳನ್ನು ತಡೆಗಟ್ಟಬಹುದು. ಎಚ್‌ಐವಿ/ಏಡ್ಸ್ ಗರ್ಭಿಣಿಯರಿಗಿದ್ದಲ್ಲಿ ಮಗುವಿಗೆ ಹರಡದಂತೆ ತಡೆಗಟ್ಟಲು ಕ್ರಮಕೈಗೊಳ್ಳಲಾಗುವುದು. ಒಂದು ವೇಳೆ ಗರ್ಭಿಣಿ ಸ್ತ್ರೀಗಿದ್ದಲ್ಲಿ ಕೂಡಲೇ ತಪಾಸಣೆಗೊಳಿಸಿ ಒಂದು ವೇಳೆ ಎಚ್‌ಐವಿ ಇದ್ದಲ್ಲಿ ಸಂಬಂಧಿ ತ ಉಚಿತ ಚಿಕಿತ್ಸೆ ಒದಗಿಸಿ ನಿವಾರಿಸಲಾಗುವುದು. ರಕ್ತಹೀನತೆಯುಂಟಾದಲ್ಲಿ 15 ದಿನ ಮುಂಚಿತವಾಗಿಯೇ ಕರೆ ಮಾಡಿ ಕರೆತಂದಲ್ಲಿ ಹೆರಿಗೆ ಮಾಡಿಸಿ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಲು ಶ್ರಮಿಸಲಾಗುವುದೆಂದು ತಿಳಿಸಿದರು.
ಹಿರಿಯ ಸ್ತ್ರೀರೋಗ ತಜ್ಞ ಡಾ| ಮಂಜುನಾಥ ಮಾತನಾಡಿ, ಗರ್ಭಿಣಿಯರಿಗೆ ಸೀಮಂತ ಕಾರ್ಯ ವೈಜ್ಞಾನಿಕವಾಗಿ ಪ್ರಯೋಜನಕಾರಿಯಾಗಿದೆ. 3ರಿಂದ 5 ತಿಂಗಳಲ್ಲಿ ಮೆದುಳು ಬೆಳೆಯುವ ಕಾಲವಾಗಿರುವುದರಿಂದ ಗರ್ಭಿಣಿಯರು ಶಾಂತಿ, ಸಂತೋಷ, ನೆಮ್ಮದಿಯಿಂದ ಇರಬೇಕು. ಕುಟುಂಬಗಳಲ್ಲಿ ಹಲವಾರು ಸಮಸ್ಯೆಗಳಿಂದ ಗರ್ಭಿಣಿಯರು ಅನಾರೋಗ್ಯಕ್ಕೀಡಾಗದಂತೆ ಜಾಗ್ರತೆ ವಹಿಸಬೇಕೆಂದರು.
ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಶುಭಾ ಪೃಥ್ವಿರಾಜ್, ವೈದ್ಯರಾದ ಡಾ| ಸು ಧೀಂದ್ರಬಾಬು, ಡಾ| ರಂಜಿತ, ಸಹಾಯಕ ಆಡಳಿತಾ ಧಿಕಾರಿ ಅನಸೂಯಾ, ಹಿರಿಯ ಶುಶ್ರೂಷಕಿ ಸುಧಾ, ಕ್ಷ-ಕಿರಣ ತಂತ್ರಜ್ಞೆ ಲತಾ, ಶುಶ್ರೂಷಕಿಯರಾದ ನಿರ್ಮಲಾ, ಜಯಲಕ್ಷ್ಮೀ ವಿ. ಶಿಲ್ಪ, ರೇಣುಕ, ವಿ.ಎ. ಶಿಲ್ಪ, ಅನಿಲ್, ಖಲಂಧರ್ ಪಾಷಾ, ಫಾರ್ಮಸಿಸ್ಟ್ ಯಾಮಿನಿ ಭಂಡಾರಿ, ಐಸಿಟಿಸಿ ಆಪ್ತ ಸಹಾಯಕ ಸಿದ್ದನಾಯಕ ಇದ್ದರು.