Advertisement

ನಿದ್ರಾದೇವಿಯ ಭಕ್ತರಾಗಲು ಹೀಗೆ ಮಾಡಿ

09:46 PM Dec 02, 2019 | mahesh |

ಕೊಟ್ಟರೂ ಗಳಿಸಲಾಗದ, ತನ್ನಿಂದ ತಾನೆ ಒಲಿಯಬೇಕಾದ ನಿದ್ರೆ ಸುಲಭಕ್ಕೆ ಒಲಿಯಲಾರದು ಬಿಡಿ. ಹಾಗಾದರೆ ನಿದ್ರಾದೇವಿ ಒಲಿಯುವ ಮಾರ್ಗಗಳಿಲ್ಲವೆ? ಖಂಡಿತಾ ಇದೆ. ಅದಕ್ಕೇನು ಮಾಡಬೇಕು ಎಂಬ ಸರಳ ಮನೆಮದ್ದನ್ನು ಇಲ್ಲಿ ವಿವರಿಸಲಾಗಿದೆ.

Advertisement

ರಾಗಿ ಸೇವನೆ
ರಾಗಿ ತಿಂದರೆ ನಿರೋಗಿ ಎನ್ನುವ ಮಾತಿದೆ. ಅದರಂತೆ ರಾಗಿಯಿಂದ ತಯಾರಿಸುವ ಮುದ್ದೆ, ಮಾಲ್ಟ್, ಅಂಬಲಿ ಸೇವನೆಯಿಂದ ದೇಹದಲ್ಲಿರುವ ಉಷ್ಣಾಂಶ ಕಡಿಮೆಯಾಗುವುದಲ್ಲದೆ ಸುಖ ನಿದ್ದೆಗೂ ಈ ಆಹಾರ ಸೇವನೆಯ ಹವ್ಯಾಸ ಉಪಯುಕ್ತ.

ಬಿಸಿನೀರ ಸ್ನಾನ
ಬೆಚ್ಚಗಿನ ನೀರಿನ ಸ್ನಾನ ಸ್ನಾಯು ಸೆಳೆತ ನಿವಾರಣೆಗೆ ಉತ್ತಮ ಮಾರ್ಗ. ಮಲಗುವ ಎರಡು ಗಂಟೆ ಮೊದಲು ಬಿಸಿ ನೀರನ್ನು ಸ್ನಾನ ಮಾಡುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ.

ಕೊಬ್ಬರಿ ಎಣ್ಣೆ ಮಸಾಜ್‌
ಮಸಾಜ್‌ ಹಲವಾರು ಒತ್ತಡಗಳ ನಡುವೆಯೂ ನಾವು ಶಾಂತ ಚಿತ್ತರಾಗುವಂತೆ ಮಾಡುತ್ತದೆ. ಕೂದಲಿನ ಬುಡಕ್ಕೆ ಎಣ್ಣೆ ತಾಕುವುದರಿಂದ ತಲೆನೋವಿನಂತಹ ಸಮಸ್ಯೆಗಳು ಬರಲಾರದು. ಪಾದಕ್ಕೆ ಎಣ್ಣೆ ಮಸಾಜ್‌ ಮಾಡುವುದರಿಂದಲೂ ನಿದ್ದೆ ಚೆನ್ನಾಗಿ ಬರುತ್ತದೆ.

ಹಾಲು
ರಾತ್ರಿ ಹಾಲು ಕುಡಿದು ಮಲಗುವ ಹವ್ಯಾಸದಿಂದ ದೇಹಕ್ಕೆ ಕ್ಯಾಲ್ಸಿಯಂ ಲಭ್ಯವಾಗುವುದರೊಂದಿಗೆ ಸುಖಕರ ನಿದ್ದೆಗೂ ಸಹಕಾರಿ. ಊಟವಾದ ತಕ್ಷಣ ಹಾಲು ಕುಡಿಯುವ ಬದಲು ಹತ್ತು ನಿಮಿಷ ಬಿಟ್ಟು ಸೇವಿಸಬೇಕು. ಜತೆಗೆ ಹಾಲು ಕುಡಿದ ಕೂಡಲೇ ಮಲಗದೆ ತುಸು ವ್ಯಾಯಾಮ ಮಾಡುವುದು ನಿದ್ದೆಯನ್ನು ಉತ್ತೇಜಿಸಲು ಸಹಕಾರಿ.

Advertisement

ಗಸಗಸೆ
ಗಸಗಸೆಯಿಂದ ಮಾಡಿದ ಪಾಯಸ, ಇನ್ನಿತರ ಖಾದ್ಯಗಳ ಸೇವಿಸುವುದರಿಂದ ಗಾಢ ನಿದ್ರೆಗೆ ಜಾರಬಹುದು.

ಹೊಸ ಹವ್ಯಾಸ
ಹವ್ಯಾಸದಲ್ಲಿ ಕಲವೊಂದು ಬದಲಾವಣೆಯನ್ನು ನೀವು ಅನುಸರಿಸುವುದರಿಂದಲೂ ಚೆನ್ನಾಗಿ ನಿದ್ದೆ ಮಾಡಬಹುದು. ಮಲಗುವ ಮೊದಲು ಅರ್ಧಗಂಟೆ ಮೊಬೈಲ್‌, ಲ್ಯಾಪ್‌ಟಾಪ್‌, ಟಿ.ವಿ. ಮುಂತಾದವುಗಳಿಂದ ದೂರವಿದ್ದು ಧ್ಯಾನ ಮಾಡುವ ಹವ್ಯಾಸ ರೂಢಿಸುವುದು ಆರೋಗ್ಯ ದೃಷ್ಟಿಯಿಂದ ಉತ್ತಮ. ಇದರೊಂದಿಗೆ ಮಲಗುವ ಕೋಣೆಗೆ ಡಿಮ್‌ ಲೈಟ್‌ ಅಳವಡಿಸಿಬೇಕು. ದಿಂಬು-ಹಾಸಿಗೆ ಸುಖಕರವೆನಿಸಬೇಕು. ಉತ್ತಮ ಚಿಂತನೆಯನ್ನು ಬೆಳೆಸಲು ಪ್ರೇರೇಪಿಸುವ ಪುಸ್ತಕಗಳು ಓದುವ ಹವ್ಯಾಸ ಒಳ್ಳೆಯದು.

ಚಿಂತೆ ಬಿಡಿ
ಮಾತ್ರೆ ಸೇವನೆ ಮಾಡುವುದು ಅಥವಾ ಆಲ್ಕೋಹಾಲ್‌ ಸೇವನೆಯಿಂದ ತಾತ್ಕಾಲಿಕವಾಗಿ ನಿದ್ದೆ ಬರಬಹುದು. ಆದರೆ ಆರೋಗ್ಯಕ್ಕೆ ಈ ಮಾರ್ಗ ಸಮಂಜಸವಲ್ಲ. ಮುಖ್ಯವಾಗಿ ಹಾಸಿಗೆ ಮೇಲೆ ದಿಂಬಿಗೆ ತಲೆ ಒರಗಿಸಿದಾಗ ಅನಾವಶ್ಯಕ ವಿಚಾರಗಳನ್ನು ನೆನೆಯುತ್ತಿದ್ದರೆ ನಿದ್ರೆ ಸಮೀಪಿಸದೆ ಚಿಂತೆ ಹೆಚ್ಚಾಗುತ್ತದೆ. ಆದ್ದರಿಂದ ಚಿಂತೆ ಬಿಟ್ಟು ಖುಷಿಯಲ್ಲಿಯೇ ನಿದ್ರಿಸಿ.

- ರಾಧಿಕಾ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next