Advertisement

ಮಾಸ್ಟರ್‌ ಯೋಜನೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ “ಗುಡ್‌ ಸರ್ವೀಸ್‌ ಎಂಟ್ರಿ”

06:32 PM Oct 02, 2020 | mahesh |

ಕಾಸರಗೋಡು: ಕೋವಿಡ್‌ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಜಾರಿಗೊಳಿಸುವ ಮಾಸ್ಟರ್‌ ಯೋಜನೆಯಲ್ಲಿ ಅತ್ಯುತ್ತಮ ಚಟುವಟಿಕೆ ನಡೆಸಿದ ಶಿಕ್ಷಕರಿಗೆ ಗುಡ್‌ ಸರ್ವೀಸ್‌ ಎಂಟ್ರಿ ನೀಡಲು ಶಿಫಾರಸು ಮಾಡುವುದಾಗಿ ಜಿಲ್ಲಾಧಿಕಾರಿ ಡಾ| ಡಿ.ಸಜಿತ್‌ ಬಾಬು ತಿಳಿಸಿದರು. ಐ.ಇ.ಸಿ. ಜಿಲ್ಲಾ ಮಟ್ಟದ ಏಕೀಕರಣ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

Advertisement

ವಾರ್ಡ್‌ ಮಟ್ಟದಲ್ಲಿ ಸತತ 14 ದಿನಗಳ ಕೋವಿಡ್‌ ರೋಗಿಗಳ ಸಂಖ್ಯೆ ಪೂರ್ಣಪ್ರಮಾಣದಲ್ಲಿ ಸೊನ್ನೆಯಾಗಿ, ಮುಂದಿನ 14 ದಿನಗಳ ಕಾಲ ರೋಗ ಭಾದೆ ಇಲ್ಲವಾದಲ್ಲಿ ಅಂಥ ಶಿಕ್ಷಕರಿಗೆ 10 ಅಂಕ ನೀಡಲಾಗುವುದು. ಹೀಗೆ 100 ಅಂಕ ಪಡೆಯುವ ವಾರ್ಡ್‌ ಮಟ್ಟದ ಶಿಕ್ಷಕರನ್ನು ಗುಡ್‌ ಸರ್ವೀಸ್‌ ಎಂಟ್ರಿಗೆ ಶಿಫಾರಸು ಮಾಡಲಾಗುವುದು. ಈ ನಿಟ್ಟಿನಲ್ಲಿ ಪ್ರತಿ ಶಿಕ್ಷಕರ ಚಟುವಟಿಕೆಗಳನ್ನು ಜಿಲ್ಲಾ ಮಟ್ಟದಲ್ಲಿ ಸಂಗ್ರಹಿಸಿ ವರದಿ ಸಿದ್ಧಪಡಿಸಲಾಗುವುದು.

800ರಿಂದ 1600 ಕ್ಕೆ ಶಿಕ್ಷಕರ ಸಂಖ್ಯೆ
ಈಗ ಜಿಲ್ಲೆಯ ಮಾಸ್ಟರ್‌ ಯೋಜನೆಯಲ್ಲಿ 800 ಶಿಕ್ಷಕರಿದ್ದಾರೆ. ಅದನ್ನು 1,600ಕ್ಕೇರಿಸಲಾಗುವುದು. ಪ್ರತಿ ವಾರ್ಡ್‌ನಲ್ಲಿ ತಲಾ ಇಬ್ಬರು ಶಿಕ್ಷಕರನ್ನು ನೇಮಿಸಲಾಗುವುದು. ಜಿಲ್ಲೆಯ ವಿವಿಧ ಪಂಚಾಯತ್‌ಗಳಲ್ಲಿ ಮಾಸ್ಟರ್‌ ಯೋಜನೆ ಅತ್ಯುತ್ತಮ ರೀತಿ ನಡೆಸುತ್ತಿರುವುದು ಸೋಂಕು ನಿಯಂತ್ರಣಕ್ಕೆ ಪೂರಕವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಹಲ್ಲೆ ನಡೆಸುವವರ ವಿರುದ್ಧ ಕೇಸು
ಕೋವಿಡ್‌ ತಡೆ ಚಟುವಟಿಕೆಗಳಲ್ಲಿ ನಿರತರಾಗಿರುವ ಶಿಕ್ಷಕರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕೇಸು ದಾಖಲಿಸುವಂತೆ ಜಿಲ್ಲಾಧಿಕಾರಿ ಪೊಲೀಸರಿಗೆ ಆದೇಶ ನೀಡಿದರು. ಮಾಸ್ಟರ್‌ ಯೋಜನೆ ಸಂಬಂಧ ಕರ್ತವ್ಯದಲ್ಲಿದ್ದ ಶಿಕ್ಷಕ ವಿನೋದ್‌ ಕುಮಾರ್‌ ಅವರೊಂದಿಗೆ ಅಸಭ್ಯವಾಗಿ ವರ್ತಿಸಿ, ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಕೇಸು ದಾಖಲಿಸುವಂತೆ ಚೀಮೇನಿ ಪೊಲೀಸರಿಗೆ ಆದೇಶ ನೀಡಿದರು.

ಹೆಚ್ಚುವರಿ ದಂಡನಾಧಿಕಾರಿ, ಸಂಚಾಲಕ ಮಧೂಸೂದನನ್‌ ಎಂ., ಸಹಾಯಕ ಮಾಸ್‌ ಮೀಡಿಯಾ ಅಧಿಕಾರಿ ಸಯಾನಾ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್‌ ಎಂ.ಸಾಲ್ಯಾನ್‌, ಮಾಸ್ಟರ್‌ ಯೋಜನೆಯ ಜಿಲ್ಲಾ ಸಮಿತಿ ಸಂಚಾಲಕ ಜಿಷೋ ಜೇಮ್ಸ್‌, ಸಹಾಯಕ ಸಂಚಾಲಕರಾದ ವಿದ್ಯಾ ಪಾಲಾಟ್‌, ಕೆ.ಜಿ.ಮೋಹನನ್‌, ಶುಚಿತ್ವ ಮಿಷನ್‌ ಸಹಾಯಕ ಸಂಚಾಲಕ ಪ್ರೇಮರಾಜನ್‌, ಐ.ಸಿ.ಡಿ.ಎಸ್‌. ಪ್ರಧಾನ ಲೆಕ್ಕಾಧಿಕಾರಿ ರಾಜೇಶ್‌ ಕೃಷ್ಣನ್‌, ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next