ಕಟಪಾಡಿ: ವಿದ್ಯಾರ್ಥಿಯ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎನ್ನುವುದು ಪ್ರಮುಖ ಘಟ್ಟವಾಗಿದ್ದು, ಸಾಕಷ್ಟು ಪೂರ್ವಸಿದ್ಧತೆಗಳನ್ನು ವ್ಯವಸ್ಥಿತವಾಗಿ ಮಾಡಿಕೊಂಡಾಗ ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯ ಎಂದು ಸಂಪನ್ಮೂಲ ವ್ಯಕ್ತಿ, ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಹೇಳಿದರು.
ಅವರು ಶಂಕರಪುರ ರೋಟರಿ ಕ್ಲಬ್ ವತಿಯಿಂದ ರೋಟರಿ ಸಭಾಭವನದಲ್ಲಿ ಸರ್ವ ಶಿಕ್ಷಣ ವ್ಯಾಪಿ ಯೋಜನೆ ಮತ್ತು ವೃತ್ತಿ ಮಾರ್ಗದರ್ಶನ ಪುಸ್ತಕಗಳ ಹಸ್ತಾಂತರ ಯೋಜನೆಯಡಿಯಲ್ಲಿ ಇನ್ನಂಜೆ ಎಸ್‌ವಿಎಚ್ ಪ.ಪೂ.ಕಾಲೇಜು ಹಾಗೂ ಶಂಕರಪುರ ಸೈಂಟ್ ಜೋನ್ಸ್ ಪ್ರೌಢ ಶಾಲಾ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಪೂರ್ವ ಸಿದ್ಧತೆ ಮತ್ತು ಭವಿಷ್ಯದಲ್ಲಿ ಕೈಗೊಳ್ಳಬಹುದಾದ ವೃತ್ತಿಪರ ಶಿಕ್ಷಣಕ್ಕೆ ಇರುವ ಅವಕಾಶಗಳ ಬಗ್ಗೆ ಏರ್ಪಡಿಸಿದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಅನುಕರಣೆಗೆ ಒತ್ತು ನೀಡದೆ ತಮ್ಮಲ್ಲಿರುವ ವಿಶೇಷ ಸಾಮರ್ಥ್ಯ ಬಳಸಿಕೊಂಡು, ಸ್ವಂತಿಕೆಯ ಜೊತೆಗೆ ಸಮಾಜಕ್ಕೆ ಹೊಸತನ ನೀಡುವ ನಿಟ್ಟಿನಲ್ಲಿ ಸಾಧನಾಶೀಲರಾಗಿ ತಮ್ಮ ಹೆಸರನ್ನು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿಸುವ ಕಾರ್ಯ ಮಾಡುವಂತೆ ಕರೆ ನೀಡಿದರು. ರೋಟರಿ ಸಂಸ್ಥೆ ವಿದ್ಯಾರ್ಥಿಗಳಿಗಾಗಿ ಮಾರ್ಗದರ್ಶಿ ಕಾರ್ಯಕ್ರಮಗಳೊಂದಿಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸಲಿದೆ, ಇದರ ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಂಕರಪುರ ರೋಟರಿ ಕ್ಲಬ್ ಅಧ್ಯಕ್ಷ ಸಂದೀಪ್ ಬಂಗೇರ ವಹಿಸಿದ್ದರು.ವೇದಿಕೆಯಲ್ಲಿ ಇನ್ನಂಜೆ ಎಸ್‌ವಿಎಚ್ ಪ್ರೌಢ ಶಾಲಾ ಮುಖ್ಯಶಿಕ್ಷಕ ನಟರಾಜ್ ಉಪಾಧ್ಯಾಯ, ವಿದ್ಯಾರ್ಥಿ ನಾಯಕರುಗಳಾದ ರೋಹಿತ್, ಅರುಣ್, ಸೈಂಟ್ ಜೋನ್ಸ್ ಪ್ರೌಢ ಶಾಲೆಯ ಪ್ರತೀಕ್ಷಾ, ನಿವೃತ್ತ ಉಪನ್ಯಾಸಕ ಯು.ನಂದನ್‌ಕುಮಾರ್, ಶಿಕ್ಷಕರಾದ ಯಶವಂತ್ ಇನ್ನಂಜೆ, ಜೆಸಿಂತಾ, ಶಶಿಕಲಾ ಶಂಕರಪುರ, ರೋಟರಿ ಸದಸ್ಯರಾದ ವಿಕ್ಟರ್‌ವಾಜ್, ಅನಿಲ್ ಡೇಸಾ, ಉಪಸ್ಥಿತರಿದ್ದರು. ರಾ ಸಂದೀಪ್ ಬಂಗೇರ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಜೋನ್ ರೊಡ್ರಿಗಸ್ ವಂದಿಸಿದರು.
ಉತ್ತಮ ಭವಿಷ್ಯ
ಸಮಯ ಪ್ರಜ್ಞೆಯೊಂದಿಗೆ ನಿರ್ದಿಷ್ಟಗುರಿ, ನಿರಂತರ ಅಧ್ಯಯನ, ಸತತ ಪರಿಶ್ರಮವಿದ್ದಾಗ ಯಶಸ್ಸು ಸಾಧ್ಯ. ಭವಿಷ್ಯದ ಶಿಕ್ಷಣಕ್ಕೆ ಇದು ಆರಂಭಿಕ ಹೆಜ್ಜೆಯಾಗಿದ್ದು ವಿದ್ಯಾರ್ಥಿಯ ಆಸಕ್ತಿಯ ವಿಷಯದ ಅಧ್ಯಯನಕ್ಕೆ ಅವಕಾಶ ನೀಡಿದ್ದಲ್ಲಿ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ಬಿ.ಪುಂಡಲೀಕ ಮರಾಠೆ ಅವರು ಹೇಳಿದರು.