ಬೆಂಗಳೂರು: ಜಪಾನ್‌ನ ಟೋಕಿಯೋ ಪ್ರವಾಸ ಫಲಪ್ರದವಾಗಿದ್ದು, ನವೆಂಬರ್ 2ರಿಂದ 4ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳಲು ಉದ್ಯಮಿಗಳಿಗೆ ಆಹ್ವಾನ ನೀಡಲಾಗಿದೆ ಎಂದು ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಟೋಕಿಯೋ ಪ್ರವಾಸ ಮುಗಿಸಿ ಬಂದ ಅವರು ಸುದ್ದಿಗಾರರ ಜತೆ ಮಾತನಾಡಿ, ರಾಜ್ಯ ಸರಕಾರ ಕೈಗಾರಿಕೆಗಳ ಬೆಳವಣಿಗೆ ಮತ್ತು ಉತ್ತೇಜನಕ್ಕೆ ಜಾರಿ ಮಾಡಿರುವ 2020-25ರ ಕೈಗಾರಿಕಾ ನೀತಿ ಇಡೀ ದೇಶಕ್ಕೆ ಮಾದರಿಯಾಗಿದ್ದು, ವಿಶ್ವದ ಮುಂಚೂಣಿಯಲ್ಲಿರುವ ಉದ್ಯಮಿಗಳು ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ.
ರಕ್ಷಣೆ, ಆಹಾರ ಸಂಸ್ಕರಣೆ, ಬಾಹ್ಯಾಕಾಶ, ಐಟಿಬಿಟಿ, ವಾಣಿಜ್ಯ ಮತ್ತು ಕೈಗಾರಿಕೆ ಸಹಿತ ವಿವಿಧ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳಿವೆ. ಬಂಡವಾಳ ಹೂಡುವ ಉದ್ಯಮಿಗಳಿಗೆ ರಾಜ್ಯ ಸರಕಾರ ಎಲ್ಲ ರೀತಿಯ ಸವಲತ್ತುಗಳನ್ನು ಕಲ್ಪಿಸಿಕೊಡಲಿದೆ ಎಂದು ಅಲ್ಲಿನ ಉದ್ಯಮಿಗಳಿಗೆ ಭರವಸೆ ನೀಡಲಾಗಿದ್ದು, ಉತ್ತಮ ಸ್ಪಂದನೆ ದೊರಕಿದೆ ಎಂದು ಹೇಳಿದರು.
ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಆಕರ್ಷಿಸಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ದೇಶದ ಒಟ್ಟಾರೆ ವಿದೇಶಿ ನೇರ ಹೂಡಿಕೆಯಲ್ಲಿ ನಮ್ಮ ರಾಜ್ಯದ ಪಾಲು ಶೇ.42 ಆಗಿದೆ. ಬೆಂಗಳೂರು ಮಾತ್ರವಲ್ಲದೆ, ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಶಿವಮೊಗ್ಗ, ತುಮಕೂರು, ಬಳ್ಳಾರಿ, ಬೀದರ್, ಬಾಗಲಕೋಟೆ ಮುಂತಾದೆಡೆ ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದೆ ಬರುತ್ತಿದ್ದಾರೆ. ಉದ್ಯಮಿಗಳಿಗೆ ನಮ್ಮ ಸರಕಾರ ಸದಾ ಬೆಂಬಲ ನೀಡುತ್ತದೆ ಎಂದು ರಾಜ್ಯ ನಿಯೋಗ ಮನವರಿಕೆ ಮಾಡಿಕೊಟ್ಟಿದೆ ಎಂದರು.
ಉದ್ಯಮ ಕ್ಷೇತ್ರದಲ್ಲಿ ಕರ್ನಾಟಕ ಮತ್ತು ಜಪಾನ್ ನಡುವಿನ ಔದ್ಯಮಿಕ ಸಂಬಂಧ ಉತ್ತಮವಾಗಿದೆ. ವಿಶೇಷವಾಗಿ, ತುಮಕೂರಿನ ವಸಂತನರಸಪುರದಲ್ಲಿ ಜಪಾನೀಸ್ ಕೈಗಾರಿಕಾ ಟೌನ್‌ಶಿಪ್ ಸ್ಥಾಪಿಸಲಾಗಿದೆ. ಅದಕ್ಕಾಗಿ 519.55 ಎಕರೆ ಭೂಮಿ ಮೀಸಲಿಡಲಾಗಿದ್ದು, ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜಪಾನಿನ ಕಂಪೆನಿಗಳಿಂದ ನೇರ ಹೂಡಿಕೆಗೆ ಎಲ್ಲ ರೀತಿಯ ಸಹಕಾರ ಒದಗಿಸಲಾಗುವುದು ಎಂದು ಹೇಳಿದರು.
ಟೊಯೊಟಾ, ಸುಜುಕಿ ಮೋಟಾರ್ ಕಾರ್ಪೊರೇಷನ್, ಮಿಟ್ಸುಯಿ, ಮೆರ್ಕರಿ, ಜೆಟ್ರೊ, ಹಿಟಾಚಿ, ಎನ್‌ಇಸಿ ಕಾರ್ಪ್‌ನ ಪ್ರತಿನಿಧಿಗಳನ್ನು ಕೈಗಾರಿಕಾಭಿವೃದ್ಧಿ ಆಯುಕ್ತ ಗುಂಜನ್ ಕೃಷ್ಣ ಅವರೊಂದಿಗೆ ಭೇಟಿ ಮಾಡಲಾಗಿತ್ತು ಎಂದು ಸಚಿವರು ತಿಳಿಸಿದರು.