ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪ್ರಾರಂಭವಾಗಿರುವ ಪ್ರಪ್ರಥಮ ಸಂಜೆ ಅಂಚೆ ಕಚೇರಿಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ನಗರದ ಇನ್ನಿತರೆ ಪ್ರಮುಖ ಸ್ಥಳಗಳಲ್ಲಿ ಸಂಜೆ ಅಂಚೆ ಕಚೇರಿ ತೆರೆಯುವ ಚಿಂತನೆ ನಡೆಯುತ್ತಿದೆ.
ಸಂಜೆ ಅಂಚೆ ಕಚೇರಿಯಲ್ಲಿ ಒಬ್ಬ ಪೋಸ್ಟ್ ಮಾಸ್ಟರ್ ಹಾಗೂ ಒಬ್ಬ ಎಂಟಿಎಸ್ ಕಾರ್ಯನಿರ್ವಹಿಸುತ್ತಿದ್ದು, ಇವರು ಸ್ಪೀಡ್ ಪೋಸ್ಟ್, ರಿಜಿಸ್ಟ್ರಾರ್ ಪೋಸ್ಟ್, ಪಾರ್ಸಲ್ ಸೇವೆ, ಫಿಲಾಟಲಿ (ಸ್ಟಾಂಪ್ ಸಂಗ್ರಹ) ಮಾರಾಟ, ಆಧಾರ್ ತಿದ್ದುಪಡಿ ಸಹ ಮಾಡಲಾಗುತ್ತದೆ. ಅಲ್ಲದೇ, ಪ್ರಮುಖವಾಗಿ “ಕ್ಲಿಕ್ ಆ್ಯಂಡ್ ಬುಕ್’ ಎಂಬ ಆನ್‌ಲೈನ್ ಸೇವೆಯನ್ನು ನಿರ್ವಹಿಸುತ್ತಿದ್ದು, ಮನೆಯಿಂದಲೇ ಬುಕ್ ಮಾಡಿದರೆ, ಪೋಸ್ಟ್ ಮಾಸ್ಟರ್ ಗ್ರಾಹಕರ ಮನೆಗೆ ತೆರಳಿ, ಬುಕ್ ಮಾಡಿದ ವಸ್ತುವನ್ನು ತೆಗೆದುಕೊಂಡು ತಲುಪಿಸಬೇಕಾದ ವಿಳಾಸಕ್ಕೆ ಕಳುಹಿಸಲಾಗುತ್ತದೆ.
ಸಾಮಾನ್ಯ ಅಂಚೆ ಕಚೇರಿಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 3.30ರವರೆಗೆ ಕಾರ್ಯ ನಿರ್ವಹಿಸುತ್ತವೆ. ಆನಂತರ ಗ್ರಾಹಕರು ಸ್ಪೀಡ್ ಪೋಸ್ಟ್‌ಗೆ ರಾಜಭವನ ರಸ್ತೆಯ ಜಿಪಿಒಗೆ ಹಾಗೂ ರಿಜಿಸ್ಟ್ರಾರ್ ಪೋಸ್ಟ್‌ಗೆ ರೈಲ್ವೆ ನಿಲ್ದಾಣದ ಆರ್‌ಎಂಎಸ್‌ಗೆ ತೆರಳಬೇಕಿತ್ತು. ಆದರೆ, ಕಳೆದ 3 ತಿಂಗಳ ಹಿಂದೆ ಸರಿಯಾಗಿ ನಗರದ ಮ್ಯೂಸಿಯಂ ರಸ್ತೆಯಲ್ಲಿ ಪ್ರಾರಂಭವಾದ ಈ ಸಂಜೆ ಅಂಚೆ ಕಚೇರಿಯು ಮಧ್ಯಾಹ್ನ 1ರಿಂದ ರಾತ್ರಿ 8.30ವರೆಗೆ ಕಾರ್ಯನಡೆಸಲಿದ್ದು, ಬೆಳಗ್ಗೆ ವಿವಿಧ ಕಚೇರಿಗಳಿಗೆ ತೆರಳುವ ಉದ್ಯೋಗಿ ಗ್ರಾಹಕರಿಗೆ ಇದು ತುಂಬಾ ಉಪಯುಕ್ತವಾಗಿದೆ. ನಿತ್ಯ ಸುಮಾರು 200-300 ವಿವಿಧ ರೀತಿಯ ಆರ್ಟಿಕಲ್ ಬುಕ್ಕಿಂಗ್ ಸೇವೆಗಳನ್ನು ನಿರ್ವಹಿಸಲಾಗುತ್ತದೆ ಎಂದು ಅಂಚೆ ಅಧಿಕಾರಿಗಳು ತಿಳಿಸುತ್ತಾರೆ.
ಪ್ರಸ್ತುತ, ಸಂಜೆ ಅಂಚೆ ಕಚೇರಿಯ ಸೇವೆಯನ್ನು ಗ್ರಾಹಕರು ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಈ 3 ತಿಂಗಳುಗಳಲ್ಲಿ ನಡೆದ ಕಾರ್ಯಚಟುವಟಿಕೆಗಳ ಬಗ್ಗೆ ಪರಿಶೀಲಿಸಿ, ಅಭಿವೃದ್ಧಿ ಬಗ್ಗೆ ವಿಶ್ಲೇಷಣಾ ವರದಿಯನ್ನು ಸಿದ್ಧಪಡಿಸಲಾಗುತ್ತದೆ. ಆನಂತರ ನಗರ ಉತ್ತರ, ದಕ್ಷಿಣ(ಬಸವನಗುಡಿ) ಭಾಗಗಳನ್ನು ಒಳಗೊಂಡಂತೆ, ಬೇಡಿಕೆ ಹೆಚ್ಚಿರುವ ಪ್ರದೇಶದಲ್ಲಿ ಸ್ಥಳಾವಕಾಶ ನೋಡಿಕೊಂಡು ಸಂಜೆ ಅಂಚೆ ಕಚೇರಿ ತೆರೆಯಲಾಗುತ್ತದೆ ಎಂದು “ಉದಯವಾಣಿ’ಗೆ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ತಿಳಿಸುತ್ತಾರೆ.
ಮೈಸ್ಟಾಂಪ್ ನೂತನ ಸೇವೆ: ಭಾರತೀಯ ಅಂಚೆ ಸೇವೆಯು “ಮೈ ಸ್ಟಾಂಪ್’ ಎಂಬ ನೂತನ ಸೇವೆಯನ್ನು ಪ್ರಾರಂಭಿಸಿದ್ದು, ವ್ಯಕ್ತಿಯ ಭಾವಚಿತ್ರ, ಐಡಿ ಪುರಾವೆಯನ್ನು ನೀಡಿದರೆ, ಆ ವ್ಯಕ್ತಿಯ ಭಾವಚಿತ್ರವುಳ್ಳ ಮಾನ್ಯತೆಯುಳ್ಳ ಭಾರತೀಯ ಅಂಚೆ ಸ್ಟಾಂಪ್ ಸಿಗಲಿದೆ. ಇದನ್ನು ದೇಶೀಯ ಅಂಚೆ ಉದ್ದೇಶಕ್ಕಾಗಿ ಬಳಸ ಬಹುದು ಅಥವಾ ದೇಶದಲ್ಲಿನ ಅದ್ಭುತ ಸ್ಥಳ, ಪ್ರವಾಸಿತಾಣ, ಆಕರ್ಷಕ ಚಿತ್ರದೊಂದಿಗೆ ವ್ಯಕ್ತಿಯ ಭಾವಚಿತ್ರವುಳ್ಳ 12 ಸ್ಟಾಂಪ್‌ಗ್ಳನ್ನು ನೀಡಲಾಗುತ್ತದೆ. ಇದಕ್ಕೆ ಫ್ರೇಮ್ ಹಾಕಿಸಿ, ಉಡುಗೊಡೆಯಾಗಿಯೂ ನೀಡಬಹುದಾಗಿದೆ ಅಥವಾ ಸ್ವಯಂ ಆಗಿಯೂ ಮನೆಯಲ್ಲಿ ಇಟ್ಟುಕೊಳ್ಳಬಹುದಾಗಿದೆ. ತಲಾ ಒಂದು ಸ್ಟಾಂಪ್‌ಗೆ 5 ರೂ. ದರ ನಿಗದಿ ಮಾಡಲಾಗಿದೆ. ಇದರ ಬಗ್ಗೆ ಫಿಲಾಟಲಿಸ್ಟ್ ಹೆಚ್ಚು ಆಸಕ್ತಿ ತೋರಿಸಿದ್ದು, ಇತ್ತೀಚೆಗೆ ಸಾರ್ವಜನಿಕರೂ ಮೈ ಸ್ಟಾಂಪ್‌ಗ್ಳನ್ನು ಖರೀದಿಸಲು ಮುಂದಾಗಿದ್ದಾರೆ ಎಂದು ಅಂಚೆ ಕಚೇರಿಯ ಸಿಬ್ಬಂದಿ ತಿಳಿಸುತ್ತಾರೆ.
ವಿಶೇಷತೆ ಇರುವ ಅಂಚೆ ಲಕೋಟೆಗಳಿಗೆ ಬೇಡಿಕೆ: ಭಾರತೀಯ ಅಂಚೆ ಲಕೋಟೆಯ ಮೇಲೆ ದೇಶ ಹಾಗೂ ರಾಜ್ಯದ ಸುಪ್ರಸಿದ್ಧ ಪ್ರವಾಸಿ ಸ್ಥಳ, ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ, ಭಾರತೀಯ ಸೇನೆಯಲ್ಲಿ ಕಾರ್ಯನಿರ್ವ ಹಿಸಿದ ಮಹಾನ್ ವ್ಯಕ್ತಿಗಳ ಭಾವಚಿತ್ರ, ಯುದ್ಧ ವಿಮಾನ, ವನ್ಯಜೀವಿಗಳ ಫೋಟೋ, ಐತಿಹಾಸಿಕ ಕಟ್ಟಡಗಳ ಫೋಟೋಗಳನ್ನು ಲಕ್ಕೋಟೆ ಮೇಲೆ ಮುದ್ರಿಸಿಲಾಗಿದ್ದು, ಈ ಲಕೋಟೆಗಳಿಗೆ ಭಾರೀ ಬೇಡಿಕೆ ಬಂದಿದೆ. ಮುದ್ರಿಸಿದ 2,000 ವಿಶೇಷ ಮುದ್ರಣಗಳಲ್ಲಿ 1,000ದಷ್ಟು ಲಕ್ಕೋಟೆಗಳನ್ನು ಸಾರ್ವಜನಿಕರಿಗೆ ಖರೀದಿಸಲು ಜಿಪಿಒದಲ್ಲಿ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಸರ್ಕಾರಿ ಅಂಚೆ ಪತ್ರಗಳನ್ನು ಕಳುಹಿಸಲು ಬಳಸಲಾಗುತ್ತಿದೆ ಎಂದು ಅಂಚೆ ಕಚೇರಿಯ ಸಿಬ್ಬಂದಿ ತಿಳಿಸುತ್ತಾರೆ.
ಸಂಜೆ ಅಂಚೆ ಕಚೇರಿಯ ಸೇವೆಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಕೆಲವು ದಿನಗಳಲ್ಲಿ 3 ತಿಂಗಳ ಕಾರ್ಯಾಚರಣೆ ಬಗ್ಗೆ ಪರಿಶೀಲಿಸಿದ ನಂತರ ನಗರದ ಇನ್ನಿತರೆ ಸ್ಥಳಗಳಲ್ಲಿ ಸಂಜೆ ಅಂಚೆ ಕಚೇರಿ ತೆರೆಯಲಾಗುತ್ತದೆ. ಜತೆಗೆ ಮೈಸೂರು ಹಾಗೂ ಮಂಗಳೂರಿನಲ್ಲಿಯೂ ಸಂಜೆ ಅಂಚೆ ಕಚೇರಿ ತೆರೆಯುವ ಚಿಂತನೆಯಿದೆ.
●ಎಸ್.ರಾಜೇಂದ್ರ ಕುಮಾರ್, ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಬೆಂಗಳೂರು
ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಕಾರಣ, ಕೆಲ ಸದ ಸಮಯದಲ್ಲಿ ಸ್ಪೀಡ್ ಪೋಸ್ಟ್ ಅಥವಾ ರಿಜಿಸ್ಟ್ರಾರ್ ಪೋಸ್ಟ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ, ಸಂಜೆ ಅಂಚೆ ಕಚೇರಿ ತೆರೆದಿರುವುದರಿಂದ, ನಮ್ಮ ಕಚೇರಿ ಕೆಲಸ ಮುಗಿದ ನಂತರವೂ ಫೋಸ್ಟ್ ಮಾಡಲು ಅನುಕೂಲವಾಗಿದೆ.
●ಮಹೇಶ್, ಗ್ರಾಹಕರು
–ಭಾರತಿ ಸಜ್ಜನ್