ಹುಬ್ಬಳ್ಳಿ: ಜಿಲ್ಲೆಯಲ್ಲಿ ಎರಡು ದಿನಗಳ ಸಂಪೂರ್ಣ ಲಾಕ್‌ಡೌನ್ ಮೊದಲ ದಿನವಾದ ಶನಿವಾರ ನಗರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು. ಔಷಧ ಅಂಗಡಿಗಳು ಹಾಗೂ ಆಸ್ಪತ್ರೆಗಳನ್ನು ಬಿಟ್ಟರೆ ಮಿಕ್ಕೆಲ್ಲ ಅಂಗಡಿ, ಮಳಿಗೆಗಳು ಮುಚ್ಚಿದ್ದವು.
ಬೆಳಗ್ಗೆ 6ರಿಂದ 8 ಗಂಟೆವರೆಗೆ ಅಗತ್ಯ ವಸ್ತುಗಳಾದ ಹಾಲು, ಹಣ್ಣು ಹಾಗೂ ತರಕಾರಿ ಖರೀದಿಗೆ ಅವಕಾಶ ನೀಡಿದ್ದು, 7:30 ಗಂಟೆಯಿಂದಲೇ ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಮೂಲಕ ಎಲ್ಲವನ್ನು ಬಂದ್ ಮಾಡಿಸಿದರು.
ಶುಕ್ರವಾರ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ಶನಿವಾರ ಹಾಗೂ ರವಿವಾರದ ಲಾಕ್ ಡೌನ್ ಕುರಿತು ಧ್ವನಿ ವರ್ಧಕದ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದರು. ಜನರು ಕೂಡಾ ಇದಕ್ಕೆ ಸ್ಪಂದಿಸುವ ಮೂಲಕ ಮನೆಯಲ್ಲಿ ಉಳಿದಿರುವುದು ಕಂಡು ಬಂದಿತು. ಡಿಸಿಪಿ ರೌಂಡ್ಸ್: ಪೊಲೀಸ್ ಇಲಾಖೆ ಎಲ್ಲೆಡೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು, ಡಿಸಿಪಿ ಕೆ.ರಾಮರಾಜನ್ ನಗರ ಪ್ರದಕ್ಷಿಣೆ ಹಾಕುವ ಮೂಲಕ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತಿರುವುದು ಕಂಡುಬಂತು.
ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ಉಪಾಹಾರ, ಊಟ ಲಭಿಸಿರುವ ಕುರಿತು ಮಾಹಿತಿ ಪಡೆದ ಅವರು ಎಲ್ಲರಿಗೂ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದರು. ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಪೊಲೀಸ್ ತಪಾಸಣೆ ಬಿಗಿಗೊಳಿಸಲಾಗಿತ್ತು. ಅನಗತ್ಯ ಹಾಗೂ ಸುಳ್ಳು ಹೇಳಿ ಸಂಚರಿಸುತ್ತಿರುವ ವಾಹನಗಳಿಗೆ ಪೊಲೀಸರು ದಂಡ ವಿಧಿಸಿದ್ದಲ್ಲದೆ ವಾಹನಗಳನ್ನು ಸೀಜ್ ಮಾಡಿದರು.
ಬಿಕೋ ಎನ್ನುತ್ತಿರುವ ರಸ್ತೆಗಳು: ಸದಾ ವಾಹನಗಳಿಂದ ಗಿಜಿಗಿಡುತ್ತಿದ್ದ ನಗರದ ಎಲ್ಲ ರಸ್ತೆಗಳು ಬಿಕೋ ಎನ್ನುತ್ತಿವೆ. ಚನ್ನಮ್ಮ ವೃತ್ತ, ನೀಲಿಜಿನ್ ರಸ್ತೆ, ಕೇಶ್ವಾಪುರ ರಸ್ತೆ, ವಿದ್ಯಾನಗರ, ಗೋಕುಲ ರಸ್ತೆ, ಹೊಸೂರ ವೃತ್ತ, ಸ್ಟೇಶನ್ ರಸ್ತೆ, ಕೊಪ್ಪಿಕರ ರಸ್ತೆ, ಪಿಬಿ ರಸ್ತೆ ಸೇರಿದಂತೆ ನಗರದ ಎಲ್ಲ ರಸ್ತೆಗಳು ಜನ ಹಾಗೂ ವಾಹನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿವೆ.
ಸಾಮಾಜಿಕ ಅಂತರ ಮರೆತರು: ಗೋಕುಲ ರಸ್ತೆ ವಾಕರಸಾ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸಿಬ್ಬಂದಿಗೆ ಕೋವಿಡ್ ಲಸಿಕೆ ಹಾಕುವ ಪ್ರಕ್ರಿಯೆಗೆ ಚಾಲನೆ ಹಿನ್ನೆಲೆಯಲ್ಲಿ 45 ವರ್ಷದೊಳಗಿನ ಸಿಬ್ಬಂದಿ ಆಗಮಿಸಿದ್ದರು. ಆದರೆ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪು ಗುಂಪಾಗಿ ನಿಂತಿದ್ದರು. ಜೊತೆಗೆ ನಾನು ಮೊದಲು, ನೀನು ಮೊದಲು ಎನ್ನುವಂತೆ ವರ್ತಿಸಿದ್ದು ಕಂಡುಬಂದಿತು.