ರಕ್ಷಿತ್ ಶೆಟ್ಟಿ ನಟನೆಯ “777 ಚಾರ್ಲಿ’ ತಂಡ ಖುಷಿಯಾಗಿದೆ. ಆ ಖುಷಿಗೆ ಕಾರಣ ಪ್ರೀಮಿಯರ್ ಶೋನಲ್ಲಿ ಸಿಕ್ಕ ಭರ್ಜರಿ ರೆಸ್ಪಾನ್ಸ್. ಹೌದು, ಚಿತ್ರತಂಡ ಜೂ.02ರಿಂದಲೇ 21 ಮಹಾನಗರಗಳಲ್ಲಿ ಚಿತ್ರದ ಪ್ರೀಮಿಯರ್ ಶೋ ಆಯೋಜಿಸಿದೆ. ಈಗಾಗಲೇ ದೆಹಲಿ ಹಾಗೂ ಅಮೃತಸರ್‌ನಲ್ಲಿ ಶೋ ನಡೆದಿದ್ದು, ಸಿನಿಮಾ ವೀಕ್ಷಿಸಿದ ಪ್ರೇಕ್ಷಕರ ಕಣ್ಣಂಚು ಒದ್ದೆಯಾಗಿದೆ.
ದೆಹಲಿಯಲ್ಲಿ ನಡೆದ ಪ್ರೀಮಿಯರ್ ಶೋನಲ್ಲಿ ಲೋಕಸಭಾ ಸದಸ್ಯೆ ಹಾಗೂ ಹೋರಾಟಗಾರ್ತಿ ಮನೇಕಾ ಗಾಂಧಿ ಕೂಡಾ ಭಾಗಿಯಾಗಿ ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ನೋಡಿದ ಅವರು ಖುಷಿಯಾಗಿದ್ದಾರೆ. “ಇತ್ತೀಚಿನ ದಿನಗಳಲ್ಲಿ ನಾನು ನೋಡಿದ ಒಂದು ಅತ್ಯುತ್ತಮ ಸಿನಿಮಾ. ಚಿತ್ರವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಈ ಸಿನಿಮಾದಲ್ಲೊಂದು ಒಳ್ಳೆಯ ಸಂದೇಶವಿದೆ. ಇವತ್ತಿನ ಸಮಾಜಕ್ಕೆ ಆ ಸಂದೇಶ ಬಹಳ ಮುಖ್ಯವಾಗಿದೆ. ಈ ಚಿತ್ರಕ್ಕೆ ನಾನು ಐದರಲ್ಲಿ ಐದು ಸ್ಟಾರ್ ಕೊಡುತ್ತೇನೆ’ ಎನ್ನುವ ಮೂಲಕ “777 ಚಾರ್ಲಿ ‘ಗೆ ಮೊದಲ ಗೆಲುವು ಸಿಕ್ಕಂತಾಗಿದೆ.
ಸಿನಿಮಾದಲ್ಲಿನ ಶ್ವಾನ ಪ್ರೀತಿ, ನಾಯಕ ನಟನ ಪಾತ್ರ ಸಾಗುವ ಹಾದಿ … ಪ್ರೇಕ್ಷಕರ ಕಣ್ಣಂಚಲ್ಲಿ ನೀರು ತರಿಸುವಲ್ಲಿ ಯಶಸ್ವಿಯಾಗಿದೆ. ನಾಯಕ ನಟ ರಕ್ಷಿತ್ ಕೂಡಾ ಈ ಸಿನಿಮಾ ಬಗ್ಗೆ ಎಕ್ಸೈಟ್ ಆಗಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು, “”777 ಚಾರ್ಲಿ’ ಸಿನಿಮಾದ ಬಗ್ಗೆ ಏನೂ ಹೇಳಲಾಗದು. ಏಕೆಂದರೆ, ಇದೊಂದು ಕಂಪ್ಲೀಟ್ ಎಮೋಶನ್ಸ್ ಇಟ್ಟುಕೊಂಡು ಮಾಡಿದಂಥ ಸಿನಿಮಾ. ಅದರ ಅನುಭವಗಳು ನನಗೆ ಮಾತ್ರ ಗೊತ್ತು. ಆದರೆ ಅದನ್ನು ವಿವರಿಸಲಾಗದು. “777 ಚಾರ್ಲಿ’ ಸಿನಿಮಾದಿಂದ ಏನು ಕಲಿತೆ ಅಂತ ಕೇಳಿದ್ರೆ, ವಿವರಣೆ ಕೊಡೋಕಾಗಲ್ಲ. ಇಡೀ ನಿಮಾ ನನಗೆ ಮಾತ್ರವಲ್ಲ ನಮ್ಮ ಇಡೀ ತಂಡಕ್ಕೆ ಒಂದು ಎಮೋಶನಲ್ ಜರ್ನಿ ಎಂದಷ್ಟೇ ಹೇಳಬಹುದು. ಸಿನಿಮಾದ ಸಬ್ಜೆಕ್ಟ್ ನನಗೆ ಅಷ್ಟರ ಮಟ್ಟಿಗೆ ಹತ್ತಿರವಾಗಿದ್ದರಿಂದ, ಇಷ್ಟು ವರ್ಷ ಸಮಯ ತೆಗೆದುಕೊಂಡು ಈ ಸಿನಿಮಾ ಮಾಡೋದಕ್ಕೆ ಸಾಧ್ಯವಾಯ್ತು’ ಎನ್ನುವುದು ರಕ್ಷಿತ್ ಮಾತು.
ಇದನ್ನೂ ಓದಿ:ನಾಸಾದಿಂದ “ಗುರು’ವಿನ ಅದ್ಭುತ ವಿಡಿಯೋ; ಜುನೋ ಉಪಗ್ರಹ ತೆಗೆದ ವಿಡಿಯೋ
ಕಿರಣ್ ರಾಜ್ ಈ ಚಿತ್ರದ ನಿರ್ದೇಶಕರು. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ವಾಗಿದ್ದು, ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಬಿಡುಗಡೆಯಾಗುತ್ತಿದೆ. ಯುವ ನಿರ್ದೇಶಕ ಕಿರಣ್ ರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ “777 ಚಾರ್ಲಿ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಯ ಜೊತೆಗೆ ಲ್ಯಾಬ್ರಡಾರ್ ನಾಯಿ ಒಂದು “ಚಾರ್ಲಿ’ ಎಂಬ ಹೆಸರಿನ ಪೂರ್ಣ ಪ್ರಮಾಣದ ಪಾತ್ರದಲ್ಲಿ ತೆರೆಮೇಲೆ ಕಾಣಿಸಿಕೊಂಡಿದೆ.
ಚಿತ್ರದಲ್ಲಿ ಸಂಗೀತಾ ಶೃಂಗೇರಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ರಾಜ್ ಬಿ. ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ, ಭಾರ್ಗವಿ ಮೊದಲಾದ ಕಲಾವಿದರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಪರಂವಾ ಸ್ಟುಡಿಯೋಸ್’ ಬ್ಯಾನರ್‌ನಲ್ಲಿ ಜಿ. ಎಸ್ ಗುಪ್ತಾ ಮತ್ತು ರಕ್ಷಿತ್ ಶೆಟ್ಟಿ ಜಂಟಿಯಾಗಿ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ನೋಬಿನ್ ಪೌಲ್ ಸಂಗೀತ ಸಂಯೋಜಿಸಿದ್ದು, ಕನ್ನಡದಲ್ಲಿ ವಿಜಯ್ ಪ್ರಕಾಶ್, ಮಲಯಾಳಂನಲ್ಲಿ ಜೆಸ್ಸಿ ಗಿಫ್ಟ್, ತಮಿಳಿನಲ್ಲಿ ಗಾನ ಬಾಲಚಂದರ್, ತೆಲುಗಿನಲ್ಲಿ ರಾಮ್ ಮಿರಿಯಾಲ ಮತ್ತು ಹಿಂದಿಯಲ್ಲಿ ಸ್ವರೂಪ್ ಖಾನ್ ಕ್ರಮವಾಗಿ “777 ಚಾರ್ಲಿ’ಯ ಆಯಾಯ ಭಾಷೆಗಳ ಅವತರಣಿಕೆಗಳ ಗೀತೆಗಳಿಗೆ ಧ್ವನಿಯಾಗಿದ್ದಾರೆ.