Advertisement

ಉತ್ತಮ ಜನಪ್ರತಿನಿಧಿ ಆಯ್ಕೆಯಿಂದ ಅಭಿವೃದ್ಧಿ ಸಾಧ್ಯ

06:41 AM Apr 11, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಅಭಿವೃದ್ಧಿಯ ಜೊತೆಗೆ ದೇಶದ ಭವಿಷ್ಯ ಉಜ್ವಲಗೊಳ್ಳಬೇಕಾದರೆ ಒಳ್ಳೆಯ ಜನಪ್ರತಿನಿಧಿ ಚುನಾವಣೆಯಲ್ಲಿ ಗೆದ್ದಾಗ ಮಾತ್ರ ಸಾಧ್ಯವಿದ್ದು, ಮತದಾರರು ಸಂವಿಧಾನ ಬದ್ಧ ಮತದಾನದ ಹಕ್ಕನ್ನು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ನಿರ್ಭೀಯಿಂದ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬಲಿಷ್ಠಗೊಳಿಸಬೇಕೆಂದು ಜಿಲ್ಲಾ ಚುನಾವಣಾ ಅಧಿಕಾರಿಯು ಆಗಿರುವ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ತಿಳಿಸಿದರು.

Advertisement

ನಗರದ ಸಾರ್ವಜನಿಕ ಬಸ್‌ ನಿಲ್ದಾಣದಲ್ಲಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಲೋಕಸಭಾ ಚುನಾವಣೆ ಹಿನ್ನೆಲಯಲ್ಲಿ ಜಿಲ್ಲೆಯ ಮತದಾರರಿಗೆ ನೈತಿಕ ಹಾಗೂ ಕಡ್ಡಾಯ ಮತದಾನದ ಬಗ್ಗೆ ಅರಿವು ಮೂಡಿಸಲು ಮೂರು ದಿನಗಳ ಕಾಲ ಯೋಜಿಸಿರುವ ಮತದಾನ ಜಾಗೃತಿ ಅಭಿಯಾನದ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದ ಸಂವಿಧಾನ ಮನುಷ್ಯನಿಗೆ ಕೊಟ್ಟಿರುವ ಹಕ್ಕುಗಳಲ್ಲಿ ಮತದಾನ ಶ್ರೇಷ್ಠವಾದದ್ದು. ಕಷ್ಟಸುಖಗಳಿಗೆ ಸ್ಪಂದಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವ ನಾಯಕನ್ನನ್ನು ಆರಿಸಿಕೊಳ್ಳಲು ಪ್ರಜೆಗಳಿಗೆ ಮತದಾನದ ಹಕ್ಕು ಇದ್ದು, ಇದರಿಂದ ಯಾರೊಬ್ಬರು ವಂಚಿತರಾಗಬಾರದು.

ಸಕಲ ಸಿದ್ಧತೆ: ದೇಶ ಬಲಿಷ್ಠವಾಗಿ ರೂಪುಗೊಳ್ಳಬೇಕಾದರೆ ಉತ್ತಮ ಸರ್ಕಾರಗಳು ರಚನೆ ಆಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮತದಾರರು ಚುನಾವಣೆಗಳಲ್ಲಿ ಯಾವುದೇ ಒತ್ತಡಗಳಿಗೆ ಒಳಗಾಗದೇ ನೈತಿಕವಾಗಿ ಮತದಾನ ಮಾಡಿದಾಗ ಮಾತ್ರ ಉತ್ತಮ ಜನಪ್ರತಿನಿಧಿ ಆಯ್ಕೆಗೊಳ್ಳಲು ಸಾಧ್ಯ.

ಜಿಲ್ಲೆಯಲ್ಲಿ ನ್ಯಾಯ ಸಮ್ಮತವಾಗಿ ಹಾಗೂ ಶಾಂತಿಯುತವಾಗಿ ಚುನಾವಣೆ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ ಎಂದರು. ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಏರ್ಪಡಿಸಿರುವ ಮತದಾನ ಜಾಗೃತಿ ಕಾರ್ಯಕ್ರಮದ ವಸ್ತು ಪ್ರದರ್ಶನವನ್ನು ಯುವ ಮತದಾರರು, ಹಿರಿಯ ನಾಗರಿಕರು, ಮಹಿಳೆಯರು ವೀಕ್ಷಿಸಬೇಕೆಂದರು.

Advertisement

ಸಾರಿಗೆ ವ್ಯವಸ್ಥೆ: ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಜಿಪಂ ಸಿಇಒ ಗುರುದತ್ತ ಹೆಗಡೆ ಮಾತನಾಡಿ, ಮತದಾನ ಮಾಡುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಜಿಲ್ಲೆಯಲ್ಲಿ ಶೇಕಡವಾರು ಮತದಾನ ಪ್ರಮಾಣ ಹೆಚ್ಚಳಕ್ಕೆ ನಾನಾ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಮತಗಟ್ಟೆಗಳಲ್ಲಿ ದಿವ್ಯಾಂಗರಿಗೆ ರ್‍ಯಾಂಪ್‌, ವಿಲ್‌ಚೇರ್‌ ಮತಗಟ್ಟೆಗೆ ಬರಲು ಸಾರಿಗೆ ಸೌಕರ್ಯ ಕಲ್ಪಿಸಲಾಗಿದೆ. ಮತಗಟ್ಟೆಗಳಲ್ಲಿ ಮತದಾರಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ ಎಂದರು.

ಜಿಲ್ಲಾ ಕೆಎಸ್‌ಆರ್‌ಟಿಸಿ ಜಿಲ್ಲಾ ಅಧಿಕಾರಿ ಬಸವರಾಜ್‌, ತಾಪಂ ಇಒ ಕೆ.ಪಿ.ಸಂಜೀವಪ್ಪ, ಜಿಲ್ಲಾ ಸ್ವೀಪ್‌ ಸಮಿತಿ ಮುನಿರಾಜು, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾದ ಎಂ.ಜುಂಜಣ್ಣ, ವಾರ್ತಾ ಸಹಾಯಕಿ ಮೈನಾಶ್ರೀ, ಜಿಪಂ ಮುಖ್ಯ ಯೋಜನಾಧಿಕಾರಿ ಮಾಧವರಾಮ್‌, ಸ್ವೀಪ್‌ ಸಮಿತಿಯ ಸದಸ್ಯರಾದ ಮುನಿರಾಜು, ಡಾ.ಸತೀಶ್‌ ಉಪಸ್ಥಿತರಿದ್ದರು.

ಸಿದ್ದಾರ್ಥ ಕಲಾವಿದರಿಂದ ಜಾಗೃತಿ: ಚಿಕ್ಕಬಳ್ಳಾಪುರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಅಭಿಯಾನದ ವೇಳೆ ಚಿಂತಾಮಣಿಯ ಸಿದ್ದಾರ್ಥ ಕಲಾವಿದರ ತಂಡ ಮತದಾನದ ಮಹತ್ವದ ಬಗ್ಗೆ ಬೀದಿ ನಾಟಕ ಹಾಗೂ ಹಾಡುಗಳ ಮೂಲಕ ಅರಿವು ಮೂಡಿಸಿದರು. ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌, ಜಿಪಂ ಸಿಇಒ ಗುರುದತ್ತ ಹೆಗಡೆ, ವಾರ್ತಾ ಇಲಾಖೆಯ ಮತದಾನದ ಮಹತ್ವ ಸಾರುವ ವಸ್ತು ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ರೈತಾಪಿ ಕೂಲಿ ಕಾರ್ಮಿಕರಲ್ಲಿ, ಮಹಿಳೆಯರಲ್ಲಿ, ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಮತದಾನದ ಮಹತ್ವ ಹಾಗೂ ಕಡ್ಡಾಯ ಮತದಾನದ ಜೊತೆಗೆ ನೈತಿಕವಾಗಿ ಮತದಾನ ಮಾಡುವಂತೆ ಅರಿವು ಮೂಡಿಸಲು ಮೂರು ದಿನಗಳ ಕಾಲ ಜಾಗೃತಿ ಅಭಿಯಾನಕ್ಕಾಗಿ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಸಾರ್ವಜನಿಕರು ವಸ್ತು ಪ್ರದರ್ಶನ ವೀಕ್ಷಿಸಿ ದೇಶದ ಪ್ರಜಾಪ್ರಭುತ್ವದ ಸದೃಢತೆಗೆ ಮತದಾನ ಮಾಡಬೇಕು.
-ಅನಿರುದ್ಧ್ ಶ್ರವಣ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next