Advertisement

ಆಲಮಟ್ಟಿ ಗ್ರಂಥಾಲಯಕ್ಕೆ ಓದುಗರ ದಂಡು

05:15 PM Nov 05, 2019 | Suhan S |

ಆಲಮಟ್ಟಿ: ಜಾಗತೀಕರಣದ ಪರಿಣಾಮ ಎಲ್ಲರ ಕೈಯಲ್ಲಿ ಮೊಬೈಲ್‌ ಹಾಗೂ ಮನೆಗಳಲ್ಲಿ ಟಿವಿಯಲ್ಲಿ ಕ್ಷಣ ಕ್ಷಣದ ಮಾಹಿತಿ ಹಾಗೂ ಅಂತರ್ಜಾಲದಲ್ಲಿ ವಿವಿಧ ವಿಷಯ ಕಂಡುಕೊಳ್ಳುತ್ತಿದ್ದರೂ ಕೂಡ ಆಲಮಟ್ಟಿಯಲ್ಲಿರುವ ಗ್ರಂಥಾಲಯದಲ್ಲಿ ಓದುಗರ ಸಂಖ್ಯೆ ಹೆಚ್ಚಾಗುತ್ತಿರುವದು ವಿಶೇಷವಾಗಿದೆ.

Advertisement

ವಿಜಯಪುರ ಜಿಲ್ಲಾ ಕೇಂದ್ರ ಗ್ರಂಥಾಲಯದ ಆಲಮಟ್ಟಿಯ ಯೋಜನಾ ಶಾಖೆಯನ್ನು 1989 ಜೂನ್‌ ತಿಂಗಳಿನಲ್ಲಿ ಆರಂಭಿಸಿ ಪ್ರಥಮ ಓದುಗ ಸದಸ್ಯರಾಗಿರುವದು ಕರ್ನಾಟಕ ಗಾಂಧಿ  ಮಂಜಪ್ಪ ಹಡೇಕರ ಸ್ಮಾರಕ ಪಪೂ ಮಹಾವಿದ್ಯಾಲಯ ಪ್ರೌಢಶಾಲೆ ಶಿಕ್ಷಕ ವಿ.ಎಚ್‌. ಬಾಂಡವಾಲಕರ. ರಾಜ್ಯಸರ್ಕಾರಿ ನೌಕರರ ಸಂಘದ ಯೋಜನಾ ಶಾಖೆ ಕಚೇರಿ ಪಕ್ಕದಲ್ಲಿಯೇ ಯುಕೆಪಿಯಿಂದ ಕಟ್ಟಡ ನಿರ್ಮಾಣ ಮಾಡಲಾಗಿದ್ದು ಇದರಲ್ಲಿ ಕೆಳ ಭಾಗದಲ್ಲಿ ಗ್ರಂಥಾಲಯದ ಕಚೇರಿ, ಪುಸ್ತಕ ಸಂಗ್ರಹದ ಕಪಾಟುಗಳು ಹಾಗೂ ಓದುಗರಿಗಾಗಿ ವ್ಯವಸ್ಥೆ ಮಾಡಲಾಗಿದೆ.

ಇನ್ನೂ ಮೇಲ್ಭಾಗದಲ್ಲಿರುವ ಕೋಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಓದುಗರು ಕುಳಿತುಕೊಳ್ಳಲು ಕುರ್ಚಿ ಹಾಗೂ ಟೇಬಲಗಳ ವ್ಯವಸ್ಥೆಯಿದೆ. ಆರಂಭಿಕ ಹಂತದಲ್ಲಿ ಕೇವಲ ಎರಡು ಕನ್ನಡ ದಿನಪತ್ರಿಕೆಗಳ ಓದುಗರಿಗೆ ಲಭ್ಯವಾಗುವಂತಿದ್ದರೆ ಈಗ ದಿನಪತ್ರಿಕೆ, ವಾರ ಪತ್ರಿಕೆ, ಪಾಕ್ಷಿಕ, ಮಾಸಿಕ ಸೇರಿದಂತೆ ಸುಮಾರು 24 ಪತ್ರಿಕೆಗಳು ಓದುಗರಿಗೆ ಲಭ್ಯವಾಗುತ್ತಿವೆ. ದಿನಂಪತ್ರಿ 100ರಿಂದ 200 ಓದುಗರು ಗ್ರಂಥಾಲಯಕ್ಕೆ ಆಗಮಿಸುತ್ತಾರೆ. ಸುಮಾರು 20 ಸಾವಿರ ವಿವಿಧ ಬಗೆಯ ಹಲವಾರು ಭಾಷೆಗಳ ಪುಸ್ತಕಗಳು ಆಲಮಟ್ಟಿ ಗ್ರಂಥಾಲಯದಲ್ಲಿ ಲಭ್ಯವಿದ್ದು, ಈಗ ಗ್ರಂಥಾಲಯಕ್ಕೆ 1640 ಪುರುಷರು ಹಾಗೂ 276 ಮಹಿಳೆಯರು ಕಾಯಂ ಸದಸ್ಯರಾಗಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆರು ಸದಸ್ಯತ್ವ ಪಡೆಯಬೇಕು. ಇನ್ನುಳಿದಂತೆ ಅಂಗವಿಕಲ ಹಾಗೂ ವಯೋವೃದ್ಧ ಓದುಗ ಸದಸ್ಯರಿಗೆ ದೂರವಾಣಿಗೆ ಕರೆ ಮಾಡಿ ತಮ್ಮ ನೆಚ್ಚಿನ ಪುಸ್ತಕಗಳನ್ನು ಹೇಳಿದರೆ ಅವರ ಮನೆವರೆಗೂ ಹೋಗಿ ತಲುಪಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ ಎನ್ನುತ್ತಾರೆ ಸ್ವತಃ ಅಂಗವಿಕಲರಾಗಿರುವ ಗ್ರಂಥಪಾಲಕ ಪರಶುರಾಮ ಮೂಲಂಗಿ.

ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಲು ಇಬ್ಬರು ಕಾಯಂ ಸಿಬ್ಬಂದಿಗಳಿದ್ದು ಓರ್ವರು ಅರೆಕಾಲಿಕ ಕೆಲಸದವರಿದ್ದಾರೆ. ಇಲ್ಲಿ ಶುಚಿತ್ವ ಹಾಗೂ ಶಾಂತತೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಇಲ್ಲಿ ಓದುಗರೇ ದೇಣಿಗೆ ರೂಪದಲ್ಲಿ ಮಹಾನ್‌ ಚೇತನಗಳ ನೂರಾರು ಭಾವಚಿತ್ರ, ಯುಪಿಎಸ್‌, ಕುಡಿಯುವ ನೀರಿನ ಟಾಕಿ ಹೀಗೆ ಹಲವಾರು ಸಾಮಗ್ರಿಗಳನ್ನು ದೇಣಿಗೆ ನೀಡಿದ್ದಾರೆ. ಇನ್ನು ಈ ಗ್ರಂಥಾಲಯವನ್ನು ಯುಕೆಪಿಯಿಂದ ನಿರ್ಮಿಸಲಾಗಿದ್ದರೂ ಕೂಡ ಮೇಲಂತಸ್ತಿನ ಮೇಲ್ಛಾವಣಿ ಸೋರುತ್ತಿವದನ್ನು ತಡೆಗಟ್ಟಬೇಕು. ಗ್ರಂಥಾಲಯದ ಬಳಿ ಪುರುಷ ಹಾಗೂ ಮಹಿಳೆಯರಿಗೆ ಶೌಚಾಲಯ ನಿರ್ಮಿಸುವುದು ಅಗತ್ಯವಾಗಿದೆ.

ಗ್ರಂಥಾಲಯದಲ್ಲಿ ಕೆಎಎಸ್‌, ಐಎಎಸ್‌, ಎಂಜಿನಿಯರಿಂಗ್‌ ಹಾಗೂ ಡಾಕ್ಟರ್‌ ಸೇರಿದಂತೆ ವಿವಿಧ ಹುದ್ದೆಗಳಿಗೆ ಸಂಬಂಧಿ ಸಿದ ಸ್ಪರ್ಧಾ ಪುಸ್ತಕಗಳು ದೊರೆಯುತ್ತಿದ್ದು ಸಂಜೆ ವೇಳೆ ನಿತ್ಯ ಓದಲು ಬರುತ್ತೇನೆ.  ಸಚಿನ ಪಾರಗೊಂಡ, ವಿದ್ಯಾರ್ಥಿ ಓದುಗ

Advertisement

 

-ಶಂಕರ ಜಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next