ಮಂಗಳೂರು/ಉಡುಪಿ: ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸು ಪಡೆದ ಮಳೆ ಮುಂದುವರಿದಿದೆ. ಜಿಲ್ಲೆಯಾದ್ಯಂತ ಶನಿವಾರವೂ ದಿನವಿಡೀ ಮಳೆಯಾಗಿದೆ.
ಜು.12ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಉಡುಪಿ ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದೆ. ಕುಂದಾಪುರ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಅಧಿಕವಾಗಿತ್ತು.
ಮಂಗಳೂರು ನಗರದಲ್ಲಿ ಬೆಳಗ್ಗಿನಿಂದಲೇ ಉತ್ತಮ ಮಳೆ ಯಾಗಿದ್ದು, ಮಧ್ಯಾಹ್ನ ವೇಳೆ ತುಸು ಬಿಡುವು ನೀಡಿದೆ. ಕೊಡಿಯಾಲಬೈಲ್, ಅಳಕೆ, ಕುದ್ರೋಳಿ, ಕೊಟ್ಟಾರಚೌಕಿ, ನಂತೂರು ಸೇರಿದಂತೆ ಕೆಲವೊಂದು ಕಡೆ ಕೃತಕ ನೆರೆ ಸೃಷ್ಟಿಯಾಗಿದ್ದು, ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದ ದೃಶ್ಯ ಕಂಡು ಬಂತು. ಕಾಂಪೌಂಡ್ ಗೋಡೆ ಬಿದ್ದು 3 ಮನೆಗಳಿಗೆ ಹಾನಿಯಾದ ಘಟನೆ ನಗರದ ಚಿಲಿಂಬಿ ಬಳಿ ನಡೆದಿದೆ.
ಬಿರುಸಿನ ಮಳೆಯ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಕುಮಾರಧಾರ ಸ್ಥಾನಘಟ್ಟ ಮುಳುಗಡೆ ಸ್ಥಿತಿಯಲ್ಲಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಉತ್ತಮ ಮಳೆಯ ಕಾರಣ ತಹಶಿಲ್ದಾರ್ ಪೃಥ್ವಿ ಸಾನಿಕಂ ಅವರು ಮಿತ್ತಬಾಗಿಲು, ಗಣೇಶ್ ನಗರ, ಮಲವಂತಿಗೆ ಗ್ರಾಮದ ಅಂಗನವಾಡಿ, ಸರಕಾರಿ ಪ್ರೌಢ ಶಾಲೆ ಕಜಕ್ಕೆ ದಿಡುಪೆ ಭಾಗಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ನದಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ನದಿ ತೀರದ ಪಕ್ಕದ ಮನೆ ಮನೆಗೆ ಭೇಟಿ ನೀಡಿ ತೊಂದರೆಗೊಳಗಾಗುವ ಪ್ರದೇಶದ ಜನರಿಗೆ ಜಾಗೃತಿ ಮೂಡಿಸಿದರು. ಗುಡ್ಡ ಭಾಗದ ಮನೆಗಳಿಗೆ ಅಗತ್ಯ ಸಂದರ್ಭ ಗ್ರಾಮದಲ್ಲಿಯೇ ಕಾಳಜಿ ಕೇಂದ್ರ ವ್ಯವಸ್ಥೆ ಮಾಡುವ ಬಗ್ಗೆ ಭರವಸೆ ನೀಡಿದರು. ಆರ್.ಐ. ಪ್ರದೀಶ್ ಕುಮಾರ್, ನೆಹರು ಯುವ ಕೇಂದ್ರ ಮಂಗಳೂರು ತಾಲೂಕು ಸಂಯೋಜಕ ತೀಕ್ಷಿತ್ ಕೆ. ದಿಡುಪೆ ಇದ್ದರು.
ವಿಮಾನ ಕೊಚ್ಚಿಗೆ
ದುಬಾೖಯಿಂದ ಬಂದ ಏರ್ ಇಂಡಿಯಾ ವಿಮಾನವನ್ನು ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಸಲಾಗದೆ ಕೊಚ್ಚಿಯತ್ತ ತಿರುಗಿಸಲಾಯಿತು.
3 ದಿನ ರೆಡ್ ಅಲರ್ಟ್
ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ಜು. 10ರಂದು ಬೆಳಗ್ಗೆ 8.30ರಿಂದ ಜು. 12ರ ಬೆಳಗ್ಗೆ 8.30ರ ವರೆಗೆ “ರೆಡ್ ಅಲರ್ಟ್’ ಘೋಷಿಸಲಾಗಿದೆ. ಈ ವೇಳೆ 204.5 ಮಿ.ಮೀ.ಗಿಂತಲೂ ಅಧಿಕ ಮಳೆಯಾಗುವ ನಿರೀಕ್ಷೆ ಇದೆ. ಗಾಳಿಯ ಜತೆ ಸಮುದ್ರದ ಅಬ್ಬರ ಹೆಚ್ಚಾಗುವ ನಿರೀಕ್ಷೆ ಇದೆ.