Advertisement

ಕರಾವಳಿ: ಉತ್ತಮ ಮಳೆ; ಉಳ್ಳಾಲದಲ್ಲಿ ಗುಡ್ಡ ಕುಸಿತ

04:45 AM Jun 27, 2018 | Team Udayavani |

ಮಂಗಳೂರು/ ಉಡುಪಿ: ಕರಾವಳಿಯಾದ್ಯಂತ ಮಂಗಳವಾರ ಉತ್ತಮ ಮಳೆಯಾಗಿದೆ. ಕೆಲವೆಡೆ ಹಾನಿ ಸಂಭವಿಸಿದೆ. ಮಂಗಳೂರು ನಗರದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಿಟ್ಟು ಬಿಟ್ಟು ಮಳೆಯಾಗಿದೆ. ಬೆಳಗ್ಗೆ ಸುರಿದ ಮಳೆಗೆ ನಗರದ ಪಡೀಲ್‌ ನಿಂದ ಬಜಾಲ್‌ಗೆ ತೆರಳುವ ರೈಲ್ವೇ ಅಂಡರ್‌ ಪಾಸ್‌ ನಲ್ಲಿ ನೀರು ನಿಂತು ತೊಂದರೆ ಉಂಟಾಯಿತು. ಜಿಲ್ಲೆಯ ಮಡಂತ್ಯಾರು, ಮಚ್ಚಿನ, ಕಲ್ಲೇರಿ, ಹಳೆಯಂಗಡಿ, ಕಿನ್ನಿಗೋಳಿ, ಬೆಳ್ಮಣ್‌, ಪಡುಬಿದ್ರಿ, ಮೂಲ್ಕಿ, ಸುರತ್ಕಲ್‌, ವಿಟ್ಲ, ಪುತ್ತೂರು, ಉಪ್ಪಿ ನಂಗಡಿ, ಮೂಡಬಿದಿರೆ, ಬೆಳ್ತಂಗಡಿ, ಬಂಟ್ವಾಳ ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾದ ವರದಿಯಾಗಿದೆ.

Advertisement

ಉಡುಪಿ ಜಿಲ್ಲೆ: ಮಳೆ ಬಿರುಸು
ಉಡುಪಿ ಜಿಲ್ಲೆಯ ಉಡುಪಿ, ಮಣಿಪಾಲ, ಕಾಪು, ಪಡುಬಿದ್ರಿ, ಕಾರ್ಕಳ, ಹೆಬ್ರಿ, ಕುಂದಾಪುರ, ಬೈಂದೂರು, ಬ್ರಹ್ಮಾವರ ಮೊದ ಲಾದೆಡೆ ಉತ್ತಮ ಮಳೆಯಾಗಿದೆ. 

ಉಳ್ಳಾಲ: ಗುಡ್ಡ ಕುಸಿತ
ಕುರ್ನಾಡು ಗ್ರಾ. ಪಂ. ವ್ಯಾಪ್ತಿಯ ಮಿತ್ತ ಕೋಡಿ ಅಮೃತ ಕಲ್ಪ ಎಂಬಲ್ಲಿ ಮುಡಿಪು- ಮೆಲ್ಕಾರ್‌ ಮುಖ್ಯರಸ್ತೆ ಮೇಲೆ ಗುಡ್ಡ ಕುಸಿದು ಸಂಚಾರ ಅಸ್ತವ್ಯಸ್ತವಾಯಿತು. ಸೋಮವಾರ ಸಂಜೆಯಿಂದ ಧಾರಾಕಾರ ಮಳೆ ಸುರಿದಿತ್ತು. ಮಂಗಳವಾರ ಬೆಳಗ್ಗಿನ ಜಾವ ಕುರ್ನಾಡು ಬಳಿ ಗುಡ್ಡ ಕುಸಿದಿದ್ದು, ಮುಡಿಪುವಿನಿಂದ ಬಿ.ಸಿ. ರೋಡ್‌ ಕಡೆ ಸಂಚರಿಸುವ ವಾಹನಗಳಿಗೆ ತಡೆಯಾಯಿತು. ಈ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನಗಳು ಬೋಳಿಯಾರ್‌ ಕುರ್ನಾಡು ಮಾರ್ಗವಾಗಿ ಮುಡಿಪು ಮತ್ತು ಬಿ.ಸಿ.ರೋಡ್‌ ಕಡೆ ಸಂಚಾರ ನಡೆಸಿದವು.

ಕೊಣಾಜೆ: ಮನೆ ಭಾಗಶಃ ಕುಸಿತ
ಕೊಣಾಜೆ ಸಮೀಪದ ದಾಸರ ಮೂಲೆ ಬಳಿ ಆವರಣಗೋಡೆ ಕುಸಿದು ಮನೆಯೊಂದಕ್ಕೆ ಭಾಗಶಃ ಹಾನಿಯಾಗಿದ್ದು, ಮನೆಯಲ್ಲಿ ಮಲಗಿದ್ದವರು ಪವಾಡ ಸದೃಶವಾಗಿ ಪಾರಾಗಿದ್ದಾರೆ. ಕೊಣಾಜೆ ವ್ಯಾಪ್ತಿಯ ಗುಡ್ಡುಪಾಲ್‌ ಮತ್ತು ಕಂಬÛಕೋಡಿ ಬಳಿ, ಬಂಟ್ವಾಳ ಬಿ. ಮೂಡ ಗ್ರಾಮದ ಬಿ.ಸಿ. ರೋಡ್‌ ಮಯ್ಯರಬೈಲು ಎಂಬಲ್ಲಿ ಗುಡ್ಡ ಕುಸಿದು ಮನೆಗಳಿಗೆ ಹಾನಿಯಾಗಿದೆ. ಮಂಜನಾಡಿಯಲ್ಲಿ ಒಂದು ಮನೆಯ ಬಚ್ಚಲು ಮನೆಗೆ ಹಾನಿಯಾಗಿದೆ. ಕೋಟೆಕಾರಿನಲ್ಲಿ ಕೃತಕ ನೆರೆಯಿಂದ ನಾಲ್ಕು ಮನೆಗಳು ಜಲಾವೃತವಾಗಿವೆ.

ಉಳ್ಳಾಲ: ರಸ್ತೆ ಜಲಾವೃತ
ಭಾರೀ ಮಳೆಗೆ ಕೋಟೆಕಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಪಾಡಂಗರ ಭಗವತೀ ಕ್ಷೇತ್ರದವರೆಗೆ ರಸ್ತೆ ಜಲಾವೃತಗೊಂಡು ಸುಮಾರು 150ರಷ್ಟು ಮನೆಗಳ ಸಂಪರ್ಕ ಕಡಿತಗೊಂಡಿತ್ತು. ಜಿ. ಪಂ. ನಿಧಿಯಡಿ ಸ್ಥಳೀಯ ತೊರೆಗೆ ಕಿಂಡಿ ಅಣೆಕಟ್ಟು ನಿರ್ಮಿಸಿದ್ದು, ಕಸಕಡ್ಡಿ ಶೇಖರಣೆಯಾಗಿ ನೀರು ಹೆಚ್ಚಾಗಿ ರಸ್ತೆಗೆ ನುಗ್ಗಿದೆ. ಸುಮಾರು 50ಕ್ಕೂ ಹೆಚ್ಚು ಮನೆಗಳ ಮೆಟ್ಟಿಲುಗಳ ವರೆಗೆ ನೀರು ಬಂದಿದೆ.

Advertisement

ಅಧಿಕಾರಿಗಳಿಗೆ ತರಾಟೆ
ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಕುಮ್ರಗೋಡು: ಮನೆ ಭಾಗಶಃ ಕುಸಿತ
ಭಾರೀ ಮಳೆಯ ಪರಿಣಾಮ ಬ್ರಹ್ಮಾವರ ಸನಿಹದ ಕುಮ್ರಗೋಡಿನ ಕಮಲಾ ಪೂಜಾರ್ತಿ ಅವರ ಮನೆ ಭಾಗಶಃ ಕುಸಿದಿದೆ. ಉಳಿದ ಭಾಗದಲ್ಲೂ ಬಿರುಕು ಬಂದಿದೆ. ಮನೆಯ ಸದಸ್ಯರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಲಕ್ಷಾಂತರ ರೂ. ನಷ್ಟ ಅಂದಾಜಿಸಲಾಗಿದೆ. ನಿರಂತರ ಮಳೆಯಿಂದಾಗಿ ಚರಂಡಿ ವ್ಯವಸ್ಥೆಯಿಲ್ಲದ ಕಾರಣ ಗಂಗೊಳ್ಳಿಯ ಸುಲ್ತಾನ್‌ಕೇರಿಯ 10ಕ್ಕೂ ಹೆಚ್ಚು ಮನೆಗಳೊಳಗೆ ಮಂಗಳವಾರ ಮಳೆ ನೀರು ನುಗ್ಗಿ, ಜನ ತೊಂದರೆ ಅನುಭವಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next