ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಆಗಾಗ್ಗೆ ಸಾಧಾರಣ ಮಳೆಯಾಗುತ್ತಿದೆ. ಭಾನುವಾರ ಮಲೆನಾಡುಭಾಗದಲ್ಲಿ ಧಾರಾಕಾರ ಮಳೆಯಾದರೆ, ಬಯಲುಸೀಮೆ ಭಾಗಲ್ಲಿ ಮೋಡ ಕವಿದ ವಾತವರಣ ಮುಂದುವರಿದಿದೆ.
ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕು ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ದಟ್ಟ ಮೋಡ ಕವಿದ ವಾತಾವರಣ ದೊಂದಿಗೆ ಆಗಾಗ್ಗೆ ಸಾಧಾರಣ ಮಳೆಯಾಗಿದೆ. ಮಧ್ಯಾಹ್ನದ ಬಳಿಕ ಅಲ್ಲಲ್ಲಿ ಕೆಲಹೊತ್ತು ಧಾರಾಕಾರ ಮಳೆಯಾಗಿದೆ ಎಂದು ತಿಳಿದು ಬಂದಿದೆ. ಮೂಡಿಗೆರೆ ತಾಲೂಕು ಕೊಟ್ಟಿಗೆಹಾರ, ಚಾರ್ಮಾಡಿ ಘಾಟಿ, ಬಣಕಲ್, ಕಳಸ, ಹಿರೇಬೈಲ್, ಕುದುರೆಮುಖ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಶೃಂಗೇರಿ ತಾಲೂಕು ಕಿಗ್ಗಾ, ನೆಮ್ಮಾರ್, ಕೆರೆಕಟ್ಟೆ ಭಾಗದಲ್ಲಿ ಉತ್ತಮ ಮಳೆಯಾಗಿದೆ.
ಕೊಪ್ಪ ತಾಲ್ಲೂಕು ಜಯಪುರ, ಹೇರೂರು, ಬಸರೀಕಟ್ಟೆ, ಕೊಗ್ರೆ ಹಾಗೂ ನರಸಿಂಹರಾಜಪುರ ತಾಲೂಕು ಮಾಗುಂಡಿ,ನರಸಿಂಹರಾಜಪುರ ಪಟ್ಟಣ, ಬಾಳೆಹೊನ್ನೂರು ಭಾಗದಲ್ಲಿ ಕೆಲಹೊತ್ತು ಧಾರಾಕಾರ ಮಳೆಯಾಗಿದೆ. ಚಿಕ್ಕಮಗಳೂರು ನಗರ ಸೇರಿದಂತೆ ತಾಲೂಕಿನಾದ್ಯಂತ ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೆ ದಟ್ಟ ಮೋಡ ಕವಿದ ವಾತಾವರಣವಿದ್ದು, ಶನಿವಾರ ರಾತ್ರಿ ಹಾಗೂ ಬೆಳಗ್ಗೆ ಸಾಧಾರಣ ಮಳೆಯಾಗಿದೆ. ಭಾನುವಾರವಿಡೀ ತುಂತುರು ಮಳೆಯಾಗಿದೆ. ಕಡೂರು ಹಾಗೂ ತರೀಕೆರೆ ತಾಲೂಕು ವ್ಯಾಪ್ತಿಯಲ್ಲೂ ಮೋಡ ಕವಿದ ವಾತಾವರಣದೊಂದಿಗೆ ದಿನವಿಡೀ ಸಾಧಾರಣ ಮಳೆಯಾಗಿದೆ. ಜಿಲ್ಲಾದ್ಯಂತ ನಾಲ್ಕೈದು ದಿನಗಳಿಂದ ಸಾಧಾರಣ ಮಳೆಯಾಗುತ್ತಿದೆ.
ಶೃಂಗೇರಿಯಲ್ಲಿ ಮಳೆ : ತಾಲೂಕಿನಾದ್ಯಾಂತ ಮಳೆ ಮುಂದುವರಿದಿದ್ದು, ಉತ್ತರಾ ಮಳೆಯೂ ಬೆಳಗ್ಗೆಯಿಂದ ಸುರಿದಿದೆ. ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದ ಬಹುತೇಕ ಜನರು ಮನೆಯಿಂದ ಹೊರ ಬಾರದೆ ಮನೆಯಲ್ಲಿಯೇ ಉಳಿದರು. ಕಳೆದ ಒಂದು ವಾರದಿಂದ ಮಳೆಯಾಗುತ್ತಲೇ ಇದ್ದು, ಜಡಿ ಮಳೆಯಿಂದ ಅಡಕೆ ಬೆಳೆಗಾರರಿಗೆ, ಅಡಕೆಗೆ ಕೊಳೆ ಭೀತಿ ಎದುರಾಗಿದೆ. ಬಹುತೇಕ ಅಡಕೆ ತೋಟದ ರೈತರು ಎರಡನೇ ಬಾರಿ ಔಷ ಧಿ ಸಿಂಪಡಣೆ ಮಾಡಿದ್ದು 40 ದಿನಕ್ಕೂ ಅಧಿಕವಾಗಿದ್ದು,ಮತ್ತೆ ಬೋಡೋ ಸಿಂಪಡಣೆಮಾಡಬೇಕಾ ಎಂಬ ಗೊಂದಲ ಉಂಟಾಗಿದೆ. ಕಾಫಿ ಬೆಳೆಗೂನಿರಂತರ ಮಳೆಯಿಂದ ಕೊಳೆ ಭೀತಿ ಉಂಟಾಗಿದೆ. ಭತ್ತದಗದ್ದೆಗೆ ಮಳೆ ಅನುಕೂಲಕರವಾಗಿದೆ.ಪಟ್ಟಣದಲ್ಲಿ ಈ ವರ್ಷ 2767 ಮಿಮೀ ಮಳೆ ದಾಖಲಾಗಿದೆ