ಕೊಪ್ಪಳ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಗಳು ಆರಂಭವಾಗಿದ್ದು ಕೃಷಿ ವಲಯ ಸಂತಸ ವ್ಯಕ್ತಪಡಿಸುತ್ತಿದೆ. ಅನ್ನದಾತನು ಬಿತ್ತನೆಗಾಗಿ ಭೂಮಿಯನ್ನ ಹಸನ ಮಾಡಿಕೊಳ್ಳುತ್ತಿದ್ದು, ಇತ್ತ ಕೃಷಿ ಇಲಾಖೆಯೂ ಸಹ ಬೀಜ, ಗೊಬ್ಬರ ದಾಸ್ತಾನು ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೆಲ ರೈತರು ಮುಂಚಿತವೇ ಬೀಜ, ಗೊಬ್ಬರ ಖರೀದಿಯಲ್ಲಿ ತೊಡಗಿದ್ದಾರೆ.
ಜಿಲ್ಲಾದ್ಯಂತ ಈಗಾಗಲೇ ಮುಂಗಾರು ಪೂರ್ವ ಮಳೆಗಳು ಸುರಿಯುತ್ತಿವೆ. ಕೆಲವೆಡೆ ಗಾಳಿ, ಮಳೆಯ ಅವಾಂತರಕ್ಕೆ ರೈತಾಪಿ ವಲಯ ಬೆಚ್ಚಿ ಬಿದ್ದಿದೆ. ಕಳೆದ ವರ್ಷವೂ ಜಿಲ್ಲೆಯಲ್ಲಿ ಉತ್ತಮ ಮಳೆಗಳಾಗಿ ಫಸಲು ಚೆನ್ನಾಗಿ ಬಂದಿತ್ತು. ಕೆಲ ಭಾಗದಲ್ಲಿ ಅತಿವೃಷ್ಟಿಯಿಂದ ಬೆಳೆ ಹಾಳಾಗಿತ್ತು.
ಈಗಾಗಲೇ ರೈತರ ಸಾಂಪ್ರದಾಯಿಕ ಲೆಕ್ಕಾಚಾರದಂತೆ ಋತುಮಾನದ ಮಳೆಗಳು ಆರಂಭವಾಗಿ ಕೃಷಿ ಬದುಕಿನಲ್ಲಿ ಭರವಸೆ ಮೂಡಿಸುತ್ತಿವೆ. ಹಲವು ಹೋಬಳಿಯಲ್ಲಿ ಈಗಾಗಲೇ ರೈತರು ತಮ್ಮ ಜಮೀನುಗಳನ್ನು ಬಿತ್ತನೆಗಾಗಿ ಹಸನು ಮಾಡಿಕೊಳ್ಳುತ್ತಿದ್ದಾರೆ. ಕೆಲವೆಡೆ ಇನ್ನೂ ಹೇಳಿಕೊಳ್ಳುವಂತ ಮಳೆಯಾಗಿಲ್ಲ.
ಬೀಜ, ಗೊಬ್ಬರ ದಾಸ್ತಾನಿಗೆ ಸಿದ್ಧತೆ: ಸಾಮಾನ್ಯವಾಗಿ ರೈತ ಸಮೂಹ ಜೂನ್ ತಿಂಗಳಲ್ಲಿ ಬಿತ್ತನೆ ಕಾರ್ಯ ಆರಂಭಿಸುತ್ತಾರೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಯಲ್ಲಿಯೂ ಅವರು ತೊಡಗಿದ್ದಾರೆ. ಇನ್ನು ಯರೇ ಭಾಗದಲ್ಲಿ ಹೆಸರು ಬಿತ್ತನೆ ನಡೆದಿದೆ. ಹಾಗಾಗಿ ಕೃಷಿ ಇಲಾಖೆಯು ಮುಂಚಿತವೇ ಜಿಲ್ಲೆಯಲ್ಲಿ ರೈತರ ಬಿತ್ತನೆಗೆ ಬೇಕಾದಂತೆ ಬೀಜ, ಗೊಬ್ಬರ ಸೇರಿದಂತೆ ಅಗತ್ಯ ವಸ್ತುಗಳ ದಾಸ್ತಾನಿಗೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿದೆ. ವಿಳಂಬ ಮಾಡಿದಷ್ಟು ರೈತರಿಗೆ ಬೀಜ, ಗೊಬ್ಬರದ ಅಭಾವ ಎದುರಾಗುವ ಸಾಧ್ಯತೆಯೂ ಇದೆ.
ದಾಸ್ತಾನು ಏಷ್ಟಿದೆ? ಪ್ರಸ್ತುತ ಕೃಷಿ ಇಲಾಖೆ ಲೆಕ್ಕಾಚಾರದ ಪ್ರಕಾರ, ಜಿಲ್ಲೆಯಲ್ಲಿ 3,08,000 ಹೆಕ್ಟೇರ್ ಪ್ರದೇಶ ಮುಂಗಾರು ಬಿತ್ತನೆ ಪ್ರದೇಶವಿದ್ದು, ಇದಕ್ಕೆ ಮುಂಗಾರು ಹಂಗಾಮಿಗೆ 1,07,461 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆಯಿದೆ. ಈ ಪೈಕಿ ಯೂರಿಯಾ-13,891 ಮೆಟ್ರಿಕ್ ಟನ್, ಡಿಎಪಿ-3,611, ಎಂಒಪಿ-455, ಕಾಂಪ್ಲೆಕ್ಸ್-7,492, ಎಸ್‌ಎಸ್‌ಪಿ-539 ಮೆಟ್ರಿಕ್ ಟನ್ ಸೇರಿದಂತೆ 25,989 ಮೆ. ಟನ್ ಗೊಬ್ಬರದ ದಾಸ್ತಾನು ಇದೆ. ಇನ್ನುಳಿದಂತೆ ಗೊಬ್ಬರ ವಿವಿಧ ಕಂಪನಿಗಳಿಂದ ಜಿಲ್ಲೆಗೆ ಪೂರೈಸಬೇಕಿದೆ.
ಇನ್ನು ಮುಂಗಾರು ಹಂಗಾಮಿಗೆ 41,671 ಕ್ವಿಂಟಲ್ ಎಲ್ಲ ತಳಿಯ ಬಿತ್ತನೆ ಬೀಜಗಳ ಬೇಡಿಕೆ ಇದೆ. ಈ ಪೈಕಿ ರೈತ ಸಂಪರ್ಕ ಕೇಂದ್ರ ಹಾಗೂ ಸೊಸೈಟಿಗಳ ಮೂಲಕ ಈ ಬಾರಿ ಕೃಷಿ ಇಲಾಖೆ 13,260 ಕ್ವಿಂಟಲ್ ಪೂರೈಕೆಗೆ ಗುರಿ ನಿಗದಿ ಪಡಿಸಿದೆ. ಅವುಗಳೂ ಪೂರೈಕೆಯಾಗಬೇಕಿದೆ. ಉಳಿದಂತೆ ಹಂತ ಹಂತವಾಗಿ ರೈತ ಸಂಪರ್ಕ ಕೇಂದ್ರಗಳಿಗೆ ಬೀಜ ಪೂರೈಕೆಯಾಗಲಿದೆ ಎನ್ನುವ ಮಾತು ಕೇಳಿ ಬಂದಿದೆ. ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಪೂರ್ವ ಮಳೆಗಳು ಆರಂಭವಾಗಿವೆ. ರೈತರು ಕೃಷಿ ಭೂಮಿ ಬಿತ್ತನೆಗೆ ಹಸನ ಮಾಡಿಕೊಳ್ಳುತ್ತಿದ್ದಾರೆ. ಜೂನ್ ನಂತರದಲ್ಲಿ ಬಿತ್ತನೆ ನಡೆಯಲಿದೆ. ನಾವು ಈಗಾಗಲೇ ಬೀಜ, ಗೊಬ್ಬರದ ದಾಸ್ತಾನು ಸಿದ್ಧತೆಯಲ್ಲಿದ್ದೇವೆ. ಸದ್ಯ 25 ಸಾವಿರ ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಇದೆ. ಬೀಜ ಆಯಾ ರೈತ ಸಂಪರ್ಕ ಕೇಂದ್ರ, ಸೊಸೈಟಿಗೆ ಪೂರೈಕೆಯ ಸಿದ್ಧತೆಯೂ ನಡೆದಿದೆ.
-ಸದಾಶಿವ, ಕೃಷಿ ಜಂಟಿ ನಿರ್ದೇಶಕ, ಕೊಪ್ಪಳ