ಜಮಖಂಡಿ: ತಾಲೂಕಿನಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿದಿರುವ ಹಿನ್ನೆಲೆಯಲ್ಲಿ ರೈತರು ಬಿತ್ತನೆಯಲ್ಲಿ ತೊಡಗಿದ್ದಾರೆ. ಸರಿಯಾದ ಸಮಯಕ್ಕೆ ಮುಂಗಾರು ಆಗಮಿಸಿದ್ದರಿಂದ ರೈತರು ಜಮೀನು ಹದಗೊಳಿಸಿದ್ದಾರೆ. ಬಿತ್ತನೆಗೆ ಎತ್ತುಗಳ ಕೊರತೆಯ ಹಿನ್ನೆಲೆಯಲ್ಲಿ ರೈತರು ಟ್ರ್ಯಾಕ್ಟರ್ ಮೂಲಕ ಬಿತ್ತನೆಗೆ ಮುಂದಾಗಿದ್ದಾರೆ.
ಸಾವಳಗಿ, ಜಮಖಂಡಿ ಮತ್ತು ತೇರದಾಳ ರೈತ ಸಂಪರ್ಕ ಕೇಂದ್ರಗಳಲ್ಲಿ 32.72 ಕ್ವಿಂಟಲ್ ಗೋವಿನಜೋಳ, 2.73 ಕ್ವಿಂಟಲ್ ಸಜ್ಜೆ, 117.2 ಕ್ವಿಂಟಲ್ ತೊಗರಿ, 184.2 ಕ್ವಿಂಟಲ್ ಉದ್ದು, 387.7 ಕ್ವಿಂಟಲ್ ಸೋಯಾಬಿನ್, 46 ಕ್ವಿಂಟಲ್ ಹೆಸರು ಮಾರಾಟವಾಗಿದೆ.
ಮುಂಗಾರು ಉತ್ತಮವಾಗಿದ್ದರಿಂದ ಅಂದಾಜು 5 ರಿಂದ 10 ಸೆ.ಮೀ. ಭೂಮಿ ಹಸಿಯಾಗಿದ್ದು ಬಿತ್ತನೆಯ ಕೆಲಸ ಚುರುಕಿನಿಂದ ನಡೆದಿದೆ. ರಬಕವಿ-ಬನಹಟ್ಟಿ ಮತ್ತು ಜಮಖಂಡಿ ತಾಲೂಕು ಸೇರಿದಂತೆ ಮುಂಗಾರು ಹಂಗಾಮಿನಲ್ಲಿ ಅಂದಾಜು 66.350 ಹೆಕ್ಟೇರ್ ಬಿತ್ತನೆಯಾಗಿದ್ದು, ಜೂ.5ರಂದು ಎರಡೂ ತಾಲೂಕಿನಲ್ಲಿ ಕಬ್ಬು ಬೆಳೆ ಸೇರಿದಂತೆ ಅಂದಾಜು 34.475 ಹೆಕ್ಟೇರ್ ಜಮೀನು ಬಿತ್ತನೆಯಾಗಿದೆ.
ಜೂ.6-7ರಂದು ಮಳೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ರೈತರು ಬಿತ್ತನೆಯಲ್ಲಿ ತೊಡಗಿದ್ದಾರೆ. ಒಂದು ವಾರದಲ್ಲಿ ನಿರೀಕ್ಷಿತ ಬಿತ್ತನೆಯ ಗುರಿ ತಲುಪಲಿದೆ.
ಬೀಜ ದಾಸ್ತಾನು ಲಭ್ಯ: ರಬಕವಿ-ಬನಹಟ್ಟಿ ಮತ್ತು ಜಮಖಂಡಿ ತಾಲೂಕಿನ ಮೂರು ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಸಕ್ತ ವರ್ಷದಲ್ಲಿ ಬಿತ್ತನೆ ಬೀಜಗಳ ದಾಸ್ತಾನು ಸಂಗ್ರಹ ಮಾಡಲಾಗಿದ್ದು, ಈಗಾಗಲೇ ರೈತರು ಬಿತ್ತನೆ ಬೀಜ ಖರೀದಿಸಿದ್ದು, ಕಳೆದೆರಡು ದಿನಗಳಿಂದ ಬಿತ್ತನೆ ಕೆಲಸ ಚುರುಕುಗೊಂಡಿದೆ. ಬೀಜ ನಾಟಿ ಮಾಡುವ ಮುನ್ನ ಸರಬರಾಜುಗೊಂಡ ಬಿತ್ತನೆ ಬೀಜಗಳನ್ನು ಪರೀಕ್ಷಿಸಿಕೊಳ್ಳಬೇಕು. ಎರಡೂ ತಾಲೂಕಿನಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಬಿತ್ತನೆ ಭೂಮಿ ಹದವಾಗಿದೆ ಎನ್ನುತ್ತಾರೆ ಜಮಖಂಡಿ ಸಹಾಯಕ ಕೃಷಿ ನಿರ್ದೇಶಕ ರವಿಶಂಕರ ಬಿದರಿ.
ಕೃಷಿ ಇಲಾಖೆ ನಿರ್ದೇಶನದಂತೆ ಸಾವಳಗಿ, ತೇರದಾಳ ಮತ್ತು ಜಮಖಂಡಿ ರೈತ ಸಂಪರ್ಕ ಕೇಂದ್ರಗಳಲ್ಲಿ ಖರೀದಿ ಸಿರುವ ಬಿತ್ತನೆ ಬೀಜಗಳು ಗುಣಮಟ್ಟದ್ದಾಗಿವೆ. ಬಿತ್ತನೆಗೂ ಮುಂಚೆ ಭೂಮಿ ಚೆನ್ನಾಗಿ ಹದವಾಗಿದ್ದನ್ನು ಗಮನದಲ್ಲಿ ಇಟ್ಟುಕೊಂಡು ರೈತರು ಬಿತ್ತನೆ ಮಾಡಬೇಕು. ತಮ್ಮ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಿಕೊಂಡು ಅದರ ಅನುಗುಣವಾಗಿ ಬೀಜಗಳನ್ನು ಬಿತ್ತಬೇಕು. ಎರಡೂ ತಾಲೂಕಿನಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದು ಬಿತ್ತನೆಗೆ ಸಕಾಲವಾಗಿದೆ. –
ಎಂ.ಎಸ್.ಬುಜರುಕ, ಕೃಷಿ ಅಧಿಕಾರಿ, ಜಮಖಂಡಿ
– ಮಲ್ಲೇಶ ಆಳಗಿ