ಬೆಂಗಳೂರು: ಪರೀಕ್ಷೆ ಹೇಗೆ ತಯಾರಿ ಮಾಡಿದ್ದೀರಿ ಎನ್ನುವುದಕ್ಕಿಂತ, ಓದಿದ್ದನ್ನು ಪರೀಕ್ಷಾ ಕೋಠಡಿಯಲ್ಲಿ ಎಷ್ಟು ಉತ್ತಮವಾಗಿ ಬರೆಯುತ್ತಿರಿ ಎಂಬುದೇ ಮುಖ್ಯ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಅರೆಕೆರೆಯ ಆಕ್ಸ್‌ಫರ್ಡ್ ಶಾಲೆಯ 30 ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ಜೀವನದಲ್ಲಿ ಉತ್ತಮ ತಯಾರಿಯೇ ಯಶಸ್ಸಿನ ಮೂಲ ದಾರಿ. ನೀವು ಎಷ್ಟೇ ಓದಿದರೂ ಪರೀಕ್ಷೆಯ ಸಮಯದಲ್ಲಿ ಹೇಗೆ ತಯಾರಿ ಮಾಡಿಕೊಂಡಿದ್ದರೂ, ಅದನ್ನು ಉತ್ತರ ಪತ್ರಿಕೆಯಲ್ಲಿ ಹೇಗೆ ಭಟ್ಟಿ ಇಳಿಸುತ್ತಿರಿ ಎನ್ನುವುದೇ ಮುಖ್ಯವಾಗುತ್ತದೆ ಎಂದರು.
ಜೀವನದಲ್ಲಿ 100 ಮೀಟರ್ ಓಟದಲ್ಲಿ ಭಾಗಿಯಾಗೋಕೆ ಅವಕಾಶ ಸಿಕ್ಕಿದೆ ಅಂದುಕೊಂಡು, ಸ್ಪರ್ಧೆಯ ದಿನವೇ ರೇಸ್ ಟ್ರ್ಯಾಕ್‌ಗೆ ಇಳಿದರೆ, ಬೆಸ್ಟ್ ಲೆವೆಲ್‌ಗೆ ಓಡೋದಕ್ಕೆ ಕಷ್ಟಸಾಧ್ಯ. ಸ್ಪರ್ಧೆಗಾಗಿ ಹಲವು ದಿನಗಳ ಅಭ್ಯಾಸ ಮಾಡಿದರೆ, ಉಳಿದವರಿಗಿಂತ ಉತ್ತಮವಾಗಿ ಓಡಲು ಸಾಧ್ಯವಿದೆ. ಪರೀಕ್ಷೆ ಕೂಡ ಹಾಗೆ, ನಿತ್ಯದ ತಯಾರಿ ಅಗತ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ವಿದ್ಯಾರ್ಥಿಗಳ ಸಾಧನೆ ಉತ್ತಮಪಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. 10ನೇ ತರಗತಿ ಪರೀಕ್ಷೆಗೆ ಒಂದು ವಾರ ಅಥವಾ ಒಂದು ತಿಂಗಳು ಮುನ್ನ ಓದಲು ಶುರು ಮಾಡಿದರೆ, ಪ್ರಯೋಜನವಿಲ್ಲ. ಪ್ರತಿ ದಿನ ಸ್ವಲ್ಪ ಸ್ವಲ್ಪ ಓದಿದರೆ, ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ನೆರವಾಗುತ್ತದೆ ಎಂದರು.
ನಂತರ ವಿಜಯ ಕಾಲೇಜ್ ಸಭಾಂಗಣ ದಲ್ಲಿ 832ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಓದಲು ಹೆತ್ತವರು, ಸ್ನೇಹಿತರು, ಸಂಬಂಧಿಕರು ತುಂಬಾ ತ್ಯಾಗ ಮಾಡಿದ್ದಾರೆ. ನಿಮ್ಮ ಓದಿಗಾಗಿ ಕಷ್ಟಪಟ್ಟು ದುಡ್ಡು ಕೂಡಿಟ್ಟಿದ್ದಾರೆ. ಹೀಗಾಗಿ ನಿಮ್ಮ ಗುರಿ ಕೇವಲ ಪರೀಕ್ಷೆಯಲ್ಲಿ ಪಾಸಾಗುವುದಲ್ಲ. ಉತ್ತಮ ಅಂಕ ಪಡೆಯಲು ಪ್ರಯತ್ನಿಸಿ ಎಂದು ಸಲಹೆ ನೀಡಿದರು.