Advertisement

Good News: ಪ್ರೌಢಶಾಲಾ ಸಹ ಶಿಕ್ಷಕರಿಗೆ ಮುಂಭಡ್ತಿ ಭಾಗ್ಯ

11:54 PM Jul 22, 2024 | Team Udayavani |

ಬೆಂಗಳೂರು: ಹನ್ನೆರಡು ವರ್ಷಗಳಿಂದ ಮುಂಭಡ್ತಿಗೆ ಕಾಯುತ್ತಿರುವ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕರಿಗೆ ಸಿಹಿ ಸುದ್ದಿ ನೀಡಲು ಸರಕಾರ ಚಿಂತನೆ ನಡೆಸಿದ್ದು, ಶಾಲಾ ಶಿಕ್ಷಣ ಇಲಾಖೆಯ 4 ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ಅರ್ಹ ಸಹಶಿಕ್ಷಕರ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಲು ಸಿಬಂದಿ ಮತ್ತು ಆಡಳಿತ ಸುಧಾರಣ ಇಲಾಖೆಗೆ ಸೂಚಿಸಿರುವುದಾಗಿ ಸಚಿವ ಎಸ್‌. ಮಧು ಬಂಗಾರಪ್ಪ ತಿಳಿಸಿದರು.

Advertisement

ಪ್ರಶ್ನೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್‌ನ ಡಾ. ಚಂದ್ರಶೇಖರ್‌ ಪಾಟೀಲ್‌, ಸರಕಾರಿ ಪ್ರೌಢಶಾಲೆಗಳ ಸಹಶಿಕ್ಷಕರು ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಭಡ್ತಿ ಪಡೆಯಲು 12 ವರ್ಷಗಳಿಂದ ಕಾಯುತ್ತಿದ್ದಾರೆ. ಇನ್ನೆಷ್ಟು ಸಮಯ ಬೇಕು ಎಂದು ಪ್ರಶ್ನಿಸಿದರು.

ಉತ್ತರಿಸಿದ ಸಚಿವ ಮಧು, 1998ರಲ್ಲಿ ಶೇ. 50ರಷ್ಟು ಉಪನ್ಯಾಸಕರ ಹುದ್ದೆಗಳನ್ನು ನೇರ ನೇಮಕಾತಿ ಹಾಗೂ ಶೇ. 50ರಷ್ಟನ್ನು ಪ್ರೌಢಶಾಲಾ ಸಹಶಿಕ್ಷಕರಿಗೆ ಮುಂಭಡ್ತಿ ನೀಡುವ ಮೂಲಕ ತುಂಬಲು ಅವಕಾಶ ಕಲ್ಪಿಸಲಾಗಿತ್ತು. 2014ರಲ್ಲಿ ವೃಂದ ಮತ್ತು ನೇಮಕಾತಿ ನಿಯಮ ಪರಿಷ್ಕರಣೆ ಆಗಿದ್ದು ನೇರ ನೇಮಕಾತಿ ಮೂಲಕ ಶೇ. 75 ಹುದ್ದೆ ತುಂಬುವುದು ಮತ್ತು ಶೇ. 25ರಷ್ಟನ್ನು ಮುಂಭಡ್ತಿ ಮೂಲಕ ಭರ್ತಿಗೆ ಆದೇಶಿಸಲಾಗಿದೆ ಎಂದರು.

ಅನುದಾನರಹಿತ ಉಪನ್ಯಾಸಕರಿಗಿಲ್ಲ ಆರೋಗ್ಯ ಸಂಜೀವಿನಿ: ಸಚಿವ ಮಧು
ಎಸ್‌.ಎಲ್‌. ಭೊಜೇಗೌಡರ ಪ್ರಶ್ನೆಗೆ ಉತ್ತರಿಸಿದ ಸಚಿವ ಮಧು, ಅನುದಾನರಹಿತ ಕಾಲೇಜು ಉಪನ್ಯಾಸಕರಿಗೆ‌ ವೇತನ ಬಹಳ ಕಡಿಮೆ ನೀಡುವುದರಿಂದ ಅನಾರೋಗ್ಯದ ಸಂದರ್ಭದಲ್ಲಿ ವೈದ್ಯಕೀಯ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಂಶ ಸರಕಾರದ ಗಮನಕ್ಕೆ ಬಂದಿಲ್ಲ. ಹೀಗಾಗಿ ಸರಕಾರಿ ಪದವಿಪೂರ್ವ ಕಾಲೇಜುಗಳ ನೌಕರರಿಗೆ ನೀಡುತ್ತಿರುವ “ಆರೋಗ್ಯ ಸಂಜೀವಿನಿ’ ಸೌಲಭ್ಯವನ್ನಾಗಲಿ ಅಥವಾ ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯವನ್ನಾಗಲಿ ಅನುದಾನರಹಿತ ಉಪನ್ಯಾಸಕರಿಗೆ ವಿಸ್ತರಿಸುವ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next