ನವದೆಹಲಿ:ರೈಲ್ವೆ ಪ್ರಯಾಣಿಕರಿಗೊಂದು ಸಿಹಿ ಸುದ್ದಿ ಹೊರಬಿದ್ದಿದೆ. ಒಂದು ವೇಳೆ ಪ್ರಯಾಣಿಕರ ಚಾರ್ಟ್ ತಯಾರಿಯ ನಂತರ ಟಿಕೆಟ್ ಬುಕ್ಕಿಂಗ್ ಮಾಡಿದ ಪ್ರಯಾಣಿಕರಿಗೆ ಸೀಟು ಲಭ್ಯವಾದರೆ ಶೇ.10ರಷ್ಟು ರಿಯಾಯ್ತಿ ನೀಡುವುದಾಗಿ ಐಆರ್ ಸಿಟಿಸಿ ಶುಕ್ರವಾರ(ಜನವರಿ 22, 2021) ಘೋಷಿಸಿದೆ.
ರೈಲು ಹೊರಡುವ ನಾಲ್ಕು ಗಂಟೆ ಮೊದಲು ಪ್ರಯಾಣಿಕರ ಆಸನದ ಚಾರ್ಟ್ ಅನ್ನು ಭಾರತೀಯ ರೈಲ್ವೆ ಸಿದ್ದಪಡಿಸುತ್ತದೆ. ಒಂದು ವೇಳೆ ಪ್ರಯಾಣಿಕರು ರೈಲು ಹೊರಡುವ ಅರ್ಧ ಗಂಟೆ ಮೊದಲು ಟಿಕೆಟ್ ಬುಕ್ಕಿಂಗ್ ಮಾಡಿದ್ದಲ್ಲಿ ಈ ರಿಯಾಯ್ತಿ ಪಡೆಯಲಿದ್ದಾರೆ. ಐಆರ್ ಟಿಸಿ ಆನ್ ಲೈನ್ ಫ್ಲ್ಯಾಟ್ ಫಾರಂ ಹಾಗೂ ರೈಲ್ವೆ ಫ್ಲ್ಯಾಟ್ ಫಾರಂಗಳಲ್ಲಿಯೂ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ.
2020ರ ಡಿಸೆಂಬರ್ ನಲ್ಲಿ ಐಟಿಸಿಟಿಸಿ ಹೆಚ್ಚು ಗ್ರಾಹಕ ಸ್ನೇಹಿ ಪರಿಷ್ಕೃತ ವೆಬ್ ಸೈಟ್ ಅನ್ನು ಬಿಡುಗಡೆ ಮಾಡಿದ್ದು, ಇದು 2021ರ ಜನವರಿ 1ರಿಂದ ಕಾರ್ಯಾರಂಭಿಸಿತ್ತು.
ಐಆರ್ ಸಿಟಿಸಿ ವೆಬ್ ಸೈಟ್ ಮೇಲ್ದರ್ಜೆಗೆ:
ಸಂಪೂರ್ಣ ಗ್ರಾಹಕ ಸ್ನೇಹಿ ಐಆರ್ ಸಿಟಿಸಿ ವೆಬ್ ಸೈಟ್ ಇದೀಗ ಲಭ್ಯವಿದ್ದು, ಬಳಕೆದಾರರು ಲಾಗಿನ್ ಆಗುವ ಮೂಲಕ ಊಟ, ವಿಶ್ರಾಂತಿ ಕೋಣೆ ಹಾಗೂ ಹೋಟೆಲ್ ಗಳನ್ನು ಕೂಡಾ ಟಿಕೆಟ್ ಬುಕ್ಕಿಂಗ್ ಜತೆಗೆ ಕಾಯ್ದಿರಿಸಬಹುದಾಗಿದೆ ಎಂದು ತಿಳಿಸಿದೆ.