Advertisement

ಸೌಖ್ಯ ಸಂಧಾನ

08:13 PM Nov 05, 2019 | Lakshmi GovindaRaju |

ನನ್ನ ಮಗಳು Mentally & Physically disabled. ವಯಸ್ಸು 20. ಋತುಮತಿಯಾಗಿ ಮೂರು ವರ್ಷ ಆಯ್ತು. ಆನಂತರ ಹೆಚ್ಚಾಗಿ ತಿಂಗಳಲ್ಲಿ 2 ಬಾರಿ ಮುಟ್ಟು ಬರುತ್ತದೆ. ಡಾಕ್ಟರ್‌, ಗರ್ಭಕೋಶದಲ್ಲಿ ಏನೂ ತೊಂದರೆ ಇಲ್ಲ ಎಂದಿದ್ದಾರೆ. ತುಂಬಾ ಸ್ರಾವ ಇರುವ ಕಾರಣ, ಬುದ್ಧಿಮಾಂದ್ಯಳಾದ ಇವಳನ್ನು ಆ ದಿನದಲ್ಲಿ ಕಂಟ್ರೋಲ್‌ ಮಾಡುವುದು ತುಂಬ ಕಷ್ಟ ವಾಗುತ್ತದೆ. ಮುಟ್ಟು ಬಾರದಿರುವ ಹಾಗೆ ಶಾಶ್ವತ ಪರಿಹಾರ ನಿಮ್ಮಲ್ಲಿ ಇದೆಯಾ ತಿಳಿಸಿ. ಆಪರೇಷನ್‌ ಆದರೂ ಆಗಬಹುದು. ದಯವಿಟ್ಟು ಉತ್ತರಿಸಿ.
ಗಿರಿಜಾ, ಉಡುಪಿ
ಮುಟ್ಟಿನ ತೊಂದರೆ ಸರಿಪಡಿಸಲು ಚಿಕಿತ್ಸೆ ಕೊಡಬಹುದು. ಮೊದಲು ಸ್ತ್ರೀರೋಗ ತಜ್ಞರ ಬಳಿ ಪರೀಕ್ಷಿಸಿ ನಂತರ ಮಾನಸಿಕ ತಜ್ಞರು ನಿಮ್ಮ ಮಗಳನ್ನು ಪರೀಕ್ಷಿಸಿ ಅವಳಿಗೆ ತೀವ್ರಕರವಾದ ಬುದ್ಧಿಮಾಂದ್ಯ ಇರುವುದಾಗಿ ಸರ್ಟಿಕೇಟ್‌ ಕೊಟ್ಟರೆ, ಗರ್ಭಕೋಶ ತೆಗೆಯುವ ಶಸ್ತ್ರಚಿಕಿತ್ಸೆ ಮಾಡಿಸಬಹುದು.

Advertisement

ಮೇಡಂ, ನನಗೆ ಕಳೆದ 22 ವರ್ಷಗಳಿಂದ ಮಾನಸಿಕ ಕಾಯಿಲೆ. ಕಳೆದ 10 ವರ್ಷಗಳಿಂದ ಸೂರ್ಯನ ಬೆಳಕನ್ನು ಕಂಡಕೂಡಲೆ, ಕಾಮನಬಿಲ್ಲಿನ ಹಾಗೆ ಕಿರಣಗಳು ನೇರವಾಗಿ ಬರುತ್ತವೆ. ಸ್ವರವೂ ಕೇಳಿಸುತ್ತೆ. ಕಿರಣಗಳು, ಸ್ವರ ಜಾಸ್ತಿ ಆದಾಗ ನನ್ನ ಆರೋಗ್ಯ ಸರಿ ಇಲ್ಲದೆ ಆಸ್ಪತ್ರೆಯಲ್ಲಿ ಅಡ್ಮಿಟ್‌ ಮಾಡುತ್ತಾರೆ. ನನ್ನ ಪ್ರಶ್ನೆ ಇಷ್ಟು: ಕಿರಣಗಳು ಬರಲು ಕಾರಣವೇನು? ಮೆಡಿಸಿನ್‌ ಸರಿಯಾಗಿ ತಗೋತಿನಿ, ಒಂದು ದಿನವೂ ಬಿಡುವುದಿಲ್ಲ. ಡಾಕ್ಟರು ಹೇಳಿದ ಹಾಗೆ ಮಾಡ್ತೀನಿ. ಈಗ ಸ್ವರ ಅಷ್ಟೊಂದು ಕೇಳಿಸೋದಿಲ್ಲ . ಆರಾಮಿಲ್ಲದಾಗ ಜಾಸ್ತಿ ಕೇಳಿಸುತ್ತೆ. ಎಂಥ ಬೆಳಕು ಇದ್ದರೂ ಕಿರಣಗಳು ಬರುತ್ತವೆ. ಕಣ್ಣು ಪರೀಕ್ಷೆ ಮಾಡಿದೆ. ಏನೂ ತೊಂದರೆ ಇಲ್ಲ. ಈ ಸಮಸ್ಯೆಗೆ ಪರಿಹಾರ ಏನು?
ಅಶ್ವಿ‌ನ್‌ ಕುಮಾರ್‌, ಬೆಂಗಳೂರು
ಬಹುಶಃ ನಿಮಗೆ Schizophrenia ಎಂಬ ಮಾನಸಿಕ ತೊಂದರೆ ಇರಬಹುದು. ಮೆದುಳಿನಲ್ಲಿ ಕೆಲವು ರಾಸಾಯನಿಕ ಕ್ರಿಯೆಗಳು ವ್ಯತ್ಯಾಸವಾದಾಗ, ಅಥವಾ ಆನುವಂಶಿಕ ಗುಣಗಳಿಂದ ಈ ಕಾಯಿಲೆ ಬರಬಹುದು. ಸ್ವರ ಕೇಳಿಸುವುದು, ಕಿರಣಗಳು ಬಂದಂತಾಗುವುದು ಮುಂತಾದುವಕ್ಕೆ Hallucinations ಅಂತಾರೆ. ಚಿಕಿತ್ಸೆಯಿಂದ ಈ ತೊಂದರೆಗಳು ಕಡಿಮೆಯಾಗುತ್ತದೆ. ಒಳ್ಳೆಯ ಮಾನಸಿಕ ತಜ್ಞರಿಗೆ ತೋರಿಸಿ.

ನನ್ನ ವಯಸ್ಸು 50. ನಮ್ಮ ಮನೆಯವರು ನನಗಿಂತ ಐದು ವರ್ಷ ದೊಡ್ಡವರು. ಇಬ್ಬರು ಮಕ್ಕಳು. ಯಜಮಾನರು ನಿವೃತ್ತಿಗೆ ಸಮೀಪ ಬಂದಿದ್ದಾರೆ. ಕೈ ತುಂಬಾ ಸಂಬಳವಿದೆ. ನನಗೆ ಏನೂ ಕಡಿಮೆ ಮಾಡಿಲ್ಲ. ಆದರೆ ಈಗಲೂ ಹದಿಹರೆಯದವರಂತೆ ವರ್ತಿಸುತ್ತಾರೆ ಮತ್ತು ಅವರಿಗೆ ಲೈಂಗಿಕತೆ ತುಂಬ ಇಷ್ಟ. ಒಂದು ದಿನವೂ ಬಿಡದೆ ಮಿಲನಕ್ರಿಯೆ ನಡೆಸುತ್ತಾರೆ. ರಾತ್ರಿ ನೀಲಿ ಚಿತ್ರ ನೋಡುತ್ತಾರೆ ಮತ್ತು ವಾರಕ್ಕೆರಡು ಸಲ ಮನೆಯಲ್ಲಿ ಕುಡಿಯುತ್ತಾರೆ. ಮುಖಮೈಥುನ ಮಾಡುವಾಗ ತಪ್ಪಿ ವೀರ್ಯ ಕುಡಿದರೆ ಏನಾದರೂ ಆರೋಗ್ಯದ ಮೇಲೆ ಪರಿಣಾಮವಾಗುವುದೆ? ಅಲ್ಲದೆ ಮನೆಯಲ್ಲಿ ಯಾರೂ ಇಲ್ಲದಾಗ ಹಗಲು ಹೊತ್ತು ಮಿಲನಕ್ರಿಯೆ ಮಾಡುತ್ತಾರೆ. ಅತಿಯಾದರೆ ಅಮೃತವೂ ವಿಷವಲ್ಲವೆ? ಆಫೀಸ್‌ನ ಕೆಲವು ಹೆಣ್ಣುಮಕ್ಕಳು ನಾನಿಲ್ಲದಾಗ ಮನೆಗೆ ಬರುತ್ತಾರೆ. ಅವರಿಗೆ ಧಾರಾಳವಾಗಿ ಹಣ ಕೊಡುತ್ತಾರೆ. ದಿನಾಲೂ ಮಿಲನಕ್ರಿಯೆ ಮಾಡಿದರೆ ತೊಂದರೆಯಾಗಬಹುದೆ? ಮುಖಮೈಥುನವಾಗದಿದ್ದರೆ ಮಾತು ಬಿಡುತ್ತಾರೆ, ಜಗಳ ಮಾಡುವುದಿಲ್ಲ ಅದೇ ಚಿಂತೆಯಾಗಿದೆ.
ವಾಣಿ, ಚಿಕ್ಕಮಗಳೂರು
ಪತಿಪತ್ನಿಯರಿಗಿಬ್ಬರಿಗೂ ಆಸಕ್ತಿ ಇದ್ದಾಗ ಒಬ್ಬರಿಗೊಬ್ಬರು ಸಹಕರಿಸುತ್ತಿದ್ದರೆ, ಯಾವುದೇ ವಯಸ್ಸಿನಲ್ಲಾಗಲೀ ಮಿಲನಕ್ರಿಯೆ ನಡೆಸಿದರೆ ಅದು ತಪ್ಪೇನಲ್ಲ. ನಿಮಗೆ ಹಿಂಸೆಯಾಗುತ್ತಿದ್ದರೆ ನಿಮ್ಮ ಪತಿಯೊಡನೆ ಮುಕ್ತವಾಗಿ ಮಾತನಾಡಿ, ಇಬ್ಬರಿಗೂ ಇಷ್ಟವಾಗುವ ಚಟುವಟಿಕೆ ಇಟ್ಟುಕೊಳ್ಳಿ. ವೀರ್ಯ ಬಾಯಿಯಲ್ಲಿ ಹೋದರೆ ಅದು ಜೀರ್ಣವಾಗುತ್ತದೆ ಅಷ್ಟೆ. ಹೆಚ್ಚು ಸಲ ಮಿಲನಕ್ರಿಯೆ ಮಾಡುವುದರಿಂದ ವ್ಯಕ್ತಿಗೆ ತೊಂದರೆ ಏನೂ ಇಲ್ಲ. ಆದರೆ, ನಿಮಗೆ ತೊಂದರೆ ಇಲ್ಲದಿದ್ದರೆ ಪರವಾಗಿಲ್ಲ ಅಷ್ಟೆ. ನಿಮಗೆ ತೊಂದರೆಯಾಗುತ್ತಿದ್ದರೆ ಲೈಂಗಿಕ ತಜ್ಞರ ಬಳಿ ಇಬ್ಬರೂ ಆಪ್ತ ಸಮಾಲೋಚನೆ ಮಾಡಿಸಿಕೊಳ್ಳಿ.

ನನ್ನ ಮಗನಿಗೆ 9 ವರ್ಷ 10 ತಿಂಗಳುಗಳಾಗಿದೆ. 21 ಕೆ.ಜಿ. ತೂಕ. ನಿದ್ರೆಯಲ್ಲಿ ಅತ್ತಿಂದಿತ್ತ ಹೊರಳಾ­ಡುವುದು, ಎದ್ದು ಕುಳಿತುಕೊಳ್ಳುವುದು ಮಾಡುತ್ತಾನೆ. ಬಾಯಿ ಮುಚ್ಚುವುದಿಲ್ಲ. ಎಲ್ಲ ಸಮಯದಲ್ಲೂ ನಾಲಿಗೆ ಹೊರ ಚಾಚಿರುತ್ತಾನೆ. ನಾವು ಮಾತನಾಡಿಸಿ ದಾಗ ಅವನಷ್ಟಕ್ಕೇ ಹೋಗಿಬಿಡುವುದು ಅಥವಾ ಏನಾದರೊಂದು ಹೇಳುವುದು ಮಾಡುತ್ತಾನೆ. ಜನಗಳಲ್ಲಿ, ರುಚಿಗಳಲ್ಲಿ ವ್ಯತ್ಯಾಸ ತಿಳಿಯುವುದಿಲ್ಲ. ಶಾಲೆಯಲ್ಲಿ ಬೋರ್ಡ್‌ನ ಮೇಲೆ ಬರೆದಿರುವುದು ಸಹ ತಿಳಿದಿರುವುದಿಲ್ಲ, ಯಾವ ಕೆಲಸವನ್ನೂ ಸರಿಯಾಗಿ ಮಾಡಲು ಆಗುವುದಿಲ್ಲ. ಪ್ರತಿ ಬಾರಿಯೂ ಅವನ ಹತ್ತಿರವೇ ಇದ್ದು ಎಲ್ಲವನ್ನೂ ಹೇಳುತ್ತಿರಬೇಕು. ಶಾಲೆಯಲ್ಲಿ ತೆಗೆದುಕೊಂಡು ಹೋದ ಯಾವ ವಸ್ತುವನ್ನೂ ಜಾಗ್ರತೆ ಮಾಡಿತರುವುದಿಲ್ಲ. ಕನ್ನಡ ಓದುತ್ತಾನೆ, ಬರೆಯುತ್ತಾನೆ. ಆದರೆ, ಬಾಯಲ್ಲಿ ಹೇಳಿದರೆ ಬರೆಯಲು ತಿಳಿಯುವುದಿಲ್ಲ. ಯಾರಾದರೂ ಮಾತ ನಾಡಿಸಿದರೆ ಎತ್ತಲೋ ನೋಡುವುದು. ಹೀಗೆ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾನೆ. ಈ ಎಲ್ಲ ತೊಂದರೆಗಳ ಬಗ್ಗೆ ಯಾವ ವೈದ್ಯರಿಗೆ ತಿಳಿಸಬೇಕು.
ನೀತಾ, ಮಂಗಳೂರು
ಅವನಿಗೆ ಮಾನಸಿಕ ಕಾಯಿಲೆ ಅಥವಾ ಬುದ್ಧಿಮಾಂದ್ಯ ಇರುವಂತೆ ತೋರುತ್ತದೆ. ಮಣಿಪಾಲ, ಉಡುಪಿ ಅಥವಾ ಮಂಗಳೂರಿನಲ್ಲಿ ನುರಿತ ಮಾನಸಿಕ ವೈದ್ಯರಿದ್ದಾರೆ. ಅವರಲ್ಲಿ ಯಾರಿಗಾದರೂ ತೋರಿಸಿ ಸೂಕ್ತ ಚಿಕಿತ್ಸೆ ಕೊಡಿಸಿ. ಹಾಗೆಯೇ ಅವನ ವರ್ತನೆಗಳಲ್ಲಿ ಬದಲಾವಣೆ ಮಾಡಲು ತರಬೇತಿ ಕೊಡಿಸಬೇಕಾಗುತ್ತದೆ.

* ಡಾ. ಪದ್ಮಿನಿ ಪ್ರಸಾದ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next